ಮತದಾನ ಜಾಗೃತಿಗೆ ಗಾಜಿನ ಮನೆಯಲ್ಲಿ ಚಿತ್ರಸಂತೆ ಜಿಲ್ಲೆಯಲ್ಲಿ ಕಡಿಮೆ ಮತದಾನ ಪ್ರದೇಶದಲ್ಲಿ ಜಾಗೃತಿ ಮೂಡಿಸಿ: ಪಿ.ಎಸ್ ವಸ್ತ್ರದ್
ದಾವಣಗೆರೆ : ಜಿಲ್ಲೆಯ ನಗರ ಪ್ರದೇಶ ಒಳಗೊಂಡಂತೆ ಕಳೆದ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾದ ಮತಗಟ್ಟೆ ಕೇಂದ್ರಗಳ ಪ್ರದೇಶದಲ್ಲಿ ಮತದಾನ ಹೆಚ್ಚಳಕ್ಕೆ ಅಗತ್ಯ ಜಾಗೃತಿ ಮೂಡಿಸಿ ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಬುಧವಾರ ಮತದಾನ ಜಾಗೃತಿಗಾಗಿ ಜಿಲ್ಲಾ ಸ್ವೀಪ್ ಸಮಿತಿಯ ಕಾರ್ಯಚಟುವಟಿಕೆ ಪರಿಶೀಲಿಸಿ ಮಾತನಾಡಿದ ಅವರು, ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲಾ ಇಲಾಖಾ ಅಧಿಕಾರಿಗಳು ಚುನಾವಣಾ ಆಯೋಗದ ರಾಯಬಾರಿಗಳಂತೆ ಕಾರ್ಯ ನಿರ್ವಹಿಸಲು ಸಲಹೆ ನೀಡಿದರು.
ರಾಜ್ಯದಲ್ಲಿ ಮತದಾನ ಪ್ರಮಾಣ ಸರಾಸರಿ ಶೇ.72 ರಷ್ಟಿದೆ. ದಾವಣಗೆರೆ ಜಿಲ್ಲೆಯಲ್ಲಿ ಶೇ.65ಕ್ಕಿಂತ ಕಡಿಮೆ ಇದೆ. ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಶೇ.60 ಪ್ರಮಾಣಕ್ಕಿಂತ ಕಡಿಮೆ ಇದೆ. ವಿಶೇಷವಾಗಿ ಈ ಕ್ಷೇತ್ರದ ನಗರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಕಡಿಮೆ ಇದೆ.ಲ ಕೆಲ ಮತಗಟ್ಟೆಗಳಲ್ಲಿ ಶೇ.30 ರಿಂದ ಶೇ. 50 ರಷ್ಟಿದೆ. ಮತದಾನ ಪ್ರಮಾಣದ ಹೆಚ್ಚಳಕ್ಕೆ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಸಲಹೆ ನೀಡಿದರು.
ಯವ ಮತದಾರರಲ್ಲಿ ಹಾಗೂ ನಗರ ವಾಸಿಗಳಲ್ಲಿ ಮತದಾನದ ಬಗ್ಗೆ ಇರುವ ನಿರಾಸಕ್ತಿಯನ್ನು ತೊಡೆದುಹಾಕು ವಿಶೇಷ ಕಾರ್ಯಕ್ರಮ ರೂಪಿಸಿ. ಜಿಲ್ಲೆಯಲ್ಲಿ 18 ರಿಂದ 19ವಯೋಮಾನದ ಯುವ ಮತದಾರರ ನೋಂದಣಿ ಹೆಚ್ಚಳಕ್ಕೆ ಕಾಳಜಿ ವಹಿಸಿ, ಯುವ ಮತದಾರರನ್ನು ನೋಂದಾಯಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸಲು ಸೂಚಿಸಿದರು.
`ಸಿ` ವಿಜ಼ಲ್ ಜಾಗೃತಿ `ಸಿ` ವಿಜ಼ಲ್ (ಸಿ ವಿಜ಼ನ್ ವಿಜ಼ಲ್ ಲೆನ್ಸಿ ಆ್ಯಪ್) ಹಾಗೂ ಚುನಾವಣಾ ಆಯೋಗದ ಸಹಾಯವಾಣಿ 1950 ಹಾಗೂ ವೊಟರ್ ಹೆಲ್ಪ್‍ಲೈನ್ ಆ್ಯಪ್ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಮೂಡಿಸಿ. ಚುನಾವಣಾ ಆಯೋಗ ರೂಪಿಸಿರುವ ಮತದಾನ ಜಾಗೃತಿ ಹಾಗೂ ಚುನಾವಣಾ ಜಾಗೃತಿ ವಿಡಿಯೋಗಳನ್ನು ವಿವಿಧ ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಅಧಿಕಾರಿಗಳು ಶೇರ್ ಮಾಡಿ ಎಂದರು.
ಚುನಾವಣಾ ಅಕ್ರಮ, ಆಮಿಷಗಳಿಗೆ ಸಿ ವಿಜ಼ನ್ ಆ್ಯಪ್ ಮೂಲಕ ದೂರು ಸಲ್ಲಿಸಬಹುದು. ಚುನಾವಣಾ ಮಾಹಿತಿ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಲು ವೊಟರ್ ಹೆಲ್ಪ್‍ಲೈನ್ ಆ್ಯಪ್ ಡೌನ್‍ಲೊಡ್ ಮಾಡಿಕೊಳ್ಳಲು ಅರಿವು ಮೂಡಿಸಿ. ಚುನಾವಣಾ ಸಂಬಂಧ ಯಾವುದೇ ಮಾಹಿತಿ ಅಥವಾ ದೂರುಗಳಿದ್ದಲ್ಲಿ ಸಹಾಯವಾಣಿ 1950ಗೆ ಸಂಪರ್ಕಿಸಬಹುದು. ಈ ಕುರಿತಂತೆ ಸಾರ್ವಜನಿಕರಿಗೆ ತಿಳುವಳಿಕೆ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಸೌಲಭ್ಯ: ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ನೆರಳಿನ ವ್ಯವಸ್ಥೆ, ವಿಶ್ರಾಂತಿ ಕೊಠಡಿ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸಬೇಕು. ಬೇಸಿಗೆ ಕಾಲವಾದ್ದರಿಂದ ನೆರಳಿನ ವ್ಯವಸ್ಥೆ ಅವಶ್ಯಕ ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ ಇಟ್ನಾಳ ಅವರು ಮಾತನಾಡಿ, ಮತದಾನ ದಿನಾಂಕ ಮತ್ತು ಸಮಯ ಕುರಿತಂತೆ ಮತದಾರರಿಗೆ ಹೆಚ್ಚಿನ ಮಾಹಿತಿ ನೀಡಲು ಮೊಬೈಲ್ ಕಾಲರ್ ಟೂನ್ ಮಾಡಿ ಪ್ರಸಾರ ಮಾಡಲು ಉದ್ದೇಶಿಸಲಾಗಿದೆ. ಕಳೆದ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಪ್ರದೇಶದಲ್ಲಿ ಹೆಚ್ಚಿನ ಮತದಾನಕ್ಕೆ ಜಾಗೃತಿ ಮೂಡಿಸಲಾಗುವುದು. ವೋಟರ್ ಹೆಲ್ಪ್‍ಲೈನ್ ಬಗ್ಗೆ ಸ್ತ್ರೀ ಶಕ್ತಿ ಸಂಘಗಳು –ವಿದ್ಯಾರ್ಥಿಗಳು, ಯುವ ಮತದಾರರಿಗೆ ಜಾಗೃತಿ ಮೂಡಿಸಲು ಉದ್ದೇಶಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಹೊರತರಲಾದ `ಮತಶಕ್ತಿ ಇ-ಪೇಪರ್` ಬಿಡುಗಡೆ ಮಾಡಲಾಯಿತು.
ಸಭೆಗೆ ಮುನ್ನ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರು ದಾವಣಗೆರೆ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.