ರೈತನ ಮಗಳ ಸಾಧನೆಯಿಂದ ಜಿಲ್ಲೆಗೆ ಕೀರ್ತಿ: ರಾಷ್ಟ್ರೀಯ ಕಾನೂನು ಶಾಲಾ ಪ್ರವೇಶಕ್ಕೆ ಅರ್ಹತೆ ಗಳಿಸಿದ ರೇವತಿ ನಾಯಕ

ದಾವಣಗೆರೆ: ರಾಷ್ಟ್ರೀಯ ಕಾನೂನು ಶಾಲೆ ದೇಶಾದ್ಯಂತ ನಡೆಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ(ಸಿಎಲ್‌ಎಟಿ)ಯಲ್ಲಿ ದಾವಣಗೆರೆಯ ಕುಮಾರಿ ರೇವತಿ ನಾಯಕ ಅವರು ರಾಷ್ಟ್ರ ಮಟ್ಟದಲ್ಲಿ ಸಾಮಾನ್ಯ ವರ್ಗದಲ್ಲಿ 16,583 ನೇ ರ‍್ಯಾಂಕ್ ಮತ್ತು ಪರಿಶಿಷ್ಟ ವರ್ಗದ ರಾಷ್ಟ್ರ ಮಟ್ಟದ 176 ನೇ ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪಂಜಾಬ್‌ನ ರಾಜೀವ್ ಗಾಂಧಿ ನ್ಯಾಷನಲ್ ಕಾನೂನು ಶಾಲೆ ಇಂಡಿಯಾ ಯೂನಿವರ್ಸಿಟಿಯಲ್ಲಿ ರಾಷ್ಟ್ರೀಯ ಪ್ರಥಮ ಆಯ್ಕೆ ಪಟ್ಟಿಯಲ್ಲಿ ಪ್ರವೇಶ ಪಡೆದಿದ್ದಾರೆ. ಪ್ರತಿವರ್ಷ ನಡೆಯುವ ಈ ಪ್ರವೇಶ ಪರೀಕ್ಷೆಯಲ್ಲಿ ದೇಶದ ನಾನಾ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಾರೆ. 2021ರ ಜುಲೈನಲ್ಲಿ 23 ರಂದು ದೇಶದ 22 ರಾಷ್ಟ್ರೀಯ ಕಾನೂನು ಶಾಲೆಗಳಲ್ಲಿ ಇರುವ 2308 ಆಸನಗಳ ಪ್ರವೇಶಕ್ಕಾಗಿ 76 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ರೇವತಿ ನಾಯಕ ಅವರಿಗೆ ದಾವಣಗೆರೆಯ ಸಿವಿಲ್ ಇಂಜಿನಿಯರ್ ಸುರೇಶ್ ಶಾಸ್ತ್ರಿ ಅವರು ಸತತ ತರಬೇತಿ ನೀಡಿದ್ದರು.ಈ ಹಿಂದೆ ಅಂದರೆ 2012 ರಲ್ಲಿ ದಾವಣಗೆರೆಯವರೆ ಆದ ಸುರೇಶ್ ಶಾಸ್ತ್ರೀ ಅವರ ಮಗ ಎಸ್.ಆರ್.ಅಶ್ವಿಜ್ ಶಾಸ್ತ್ರೀ ಅವರು ದೇಶಕ್ಕೆ ತೃತೀಯ ರ‍್ಯಾಂಕ್ ಗಳಿಸಿದ್ದರು ಮತ್ತು ದೆಹಲಿಯಲ್ಲಿ ಆಲ್ ಇಂಡಿಯಾ ಲಾ ಅಡ್ಮಿಷನ್ ಟೆಸ್ಟ್ ನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದರು.
ಕುಮಾರಿ ರೇವತಿ ನಾಯಕ ಅವರು ನಗರದ ಸಿದ್ದಗಂಗಾ ಶಾಲೆ ಮತ್ತು ಎವಿಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ರೇವತಿ ನಾಯಕ ದಾವಣಗೆರೆ ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ಪುತ್ರಿ. ಇವರ ಈ ಸಾಧನೆಗೆ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ವಿ.ರಾಮಚಂದ್ರಪ್ಪ, ಸಿದ್ದಗಂಗಾ ವಿದ್ಯಾಸಂಸ್ಥೆಯ ಜಸ್ಟೀನ್ ಡಿಸೋಜಾ,ಡಾ.ಜಯಂತ್, ಸಾಹಿತಿ ಬಿ.ಎನ್.ಮಲ್ಲೇಶ್,ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಎಸ್.ಹಾಲೇಶಪ್ಪ ಮೊದಲಾದವರು ಶುಭ ಹಾರೈಸಿದ್ದಾರೆ.