ರಾಮೇಶ್ವರ ಕಫೆಯಲ್ಲಿ ಸ್ಪೋಟ: ತನಿಖೆ ತೀವ್ರವಾಗಿ ನಡೆಯುತ್ತಿದೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಖಚಿತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಮಾರ್ಚ್ 01: ಬೆಂಗಳೂರಿನ ರಾಮೇಶ್ವರ ಕಫೆಯಲ್ಲಿ ನಡೆದಿರುವ ಸ್ಪೋಟ ಘಟನೆಯ ತನಿಖೆ ತೀವ್ರವಾಗಿ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಖಚಿತವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರಾಥಮಿಕ ತನಿಖೆಯ ಪ್ರಕಾರ ಅದು ಸಣ್ಣ ಪ್ರಮಾಣದ ಸುಧಾರಿತ ಸ್ಪೋಟಕವಾಗಿತ್ತು ಎಂದು ತಿಳಿದುಬಂದಿದೆ, ಪೂರ್ಣ ವರದಿಗಾಗಿ ಕಾಯುತ್ತಿದ್ದೇನೆ ಎಂದು ತಿಳಿಸಿದರು.
ಕ್ಯಾಶಿಯರ್ ಬಳಿ ಟೋಕನ್ ಪಡೆದು ಅಲ್ಲಿ ತಿಂಡಿ ತಿಂದಿರುವ ವ್ಯಕ್ತಿ, ಬ್ಯಾಗ್ ಇಟ್ಟು ಬಂದಿದ್ದಾನೆ ಎಂಬ ಮಾಹಿತಿ ದೊರೆತಿದೆ ಎಂದರು. ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಸಿ ಟಿವಿ ಕ್ಯಾಮರಾ ಪರೀಕ್ಷಿಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಗೃಹ ಸಚಿವರಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಲಾಗಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದರು.
ಕಠಿಣ ಕ್ರಮ
ರಾಜ್ಯದಲ್ಲಿ ಇಂಥದ್ದು ನಡೆಯಬಾರದಿತ್ತು. ಮಂಗಳೂರಿನಲ್ಲಿ ಆಗಿದ್ದು ಬಿಟ್ಟರೆ ಪುನ: ಇಂಥ ಘಟನೆ ಸಂಭವಿಸಿದೆ. ಯಾರು ಇದನ್ನು ಮಾಡಿದ್ದಾರೆ ಎಂದು ಪತ್ತೆ ಹಚ್ಚಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಲಲಾಗುವುದು ಎಂದರು.
ರಾಜಕಾರಣ ಮಾಡಬಾರದು
ವಿರೋಧ ಪಕ್ಷಗಳು ಈ ವಿಷಯಗಳ ಬಗ್ಗೆ ರಾಜಕಾರಣ ಮಾಡಬಾರದು. ಎಲ್ಲರೂ ಸಹಕರಿಸಬೇಕು ಎಂದರು. ಪೋಲಿಸರೊಂದಿಗೆ ಮಾತನಾಡಿದ್ದು, ಸದ್ಯದಲ್ಲಿಯೇ ಪೂರ್ಣ ಚಿತ್ರಣ ಸಿಗಲಿದೆ. ವಿಚಾರಣೆ ತ್ವರಿತಗತಿಯಲ್ಲಿ ನಡೆದಿದೆ ಎಂದರು ಹೇಳಿದರು.
ದೇಶದಲ್ಲಿ ಶೇ 5 ರಷ್ಟು ಮಾತ್ರ ಬಡತನ:ಪರಿಶೀಲನೆ ಅಗತ್ಯ
ನೀತಿ ಆಯೋಗದವರು ನೀಡಿರುವ ವರದಿ ಪ್ರಕಾರ ಕಳೆದ 10 ವರ್ಷಗಳಲ್ಲಿ ಬಡತನ ಶೇ 5ರಷ್ಟು ಮಾತ್ರ ಇದೆ ಎಂದು ಹೇಳಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ ಅದನ್ನು ಪರಿಶೀಲಿಸಬೇಕಿದೆ. ಅದು ಸಮೀಕ್ಷೆಯ ವರದಿಯಲ್ಲ. ಅವರು ಹೇಳಿರುವುದು ಸತ್ಯವೋ ಅಸತ್ಯವೋ ಎಂದು ತಿಳಿಯಬೇಕಿದೆ. ಬಡತನ 5% ಕಡಿಮೆಯಾಗಿದ್ದರೆ ಅದು ಖುಷಿ ಪಡುವ ವಿಚಾರ. ಪರಿಸ್ಥಿತಿ ನೋಡಿದರೆ ಆ ರೀತಿ ಕಾಣುವುದಿಲ್ಲ. ಬಡತನ ರೇಖೆಗಿಂತ ಕೆಳಗಿರುವ 82 ಕೋಟಿ ಕುಟುಂಬಗಳಿಗೆ ಅಕ್ಕಿ ಕೊಡಲಾಗುತ್ತಿದೆ ಎಂದರು.
ಬಿಜೆಪಿ 50 ಕೋಟಿ ಆಮಿಷ ಒಡ್ಡುತ್ತಿದೆ :ನಮ್ಮ ಶಾಸಕರು ಆಮಿಷಕ್ಕೆ ಬಲಿಯಾಗುವುದಿಲ್ಲ
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶವನ್ನು ಬಿಜೆಪಿ ಗುರಿಯಾಗಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಬಿಜೆಪಿ ಎಂದಿಗೂ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೇ ಇಲ್ಲ. ಆಪರೇಷನ್ ಕಮಲ ಮಾಡಿಯೇ ಬಂದಿದ್ದಾರೆ. 113 ಕ್ಕಿಂತ ಹೆಚ್ಚು ಗೆದ್ದೇ ಇಲ್ಲ. 2018 ರಲ್ಲಿ 100 ಗೆದ್ದಿದ್ದರು. ಕರ್ನಾಟಕದಲ್ಲಿಯೂ ಆಪರೇಷನ್ ಕಮಲ ಪ್ರಯತ್ನ ಮಾಡುತ್ತಾರೆ. ಆದರೆ ನಮ್ಮ ಶಾಸಕರು ಅವರ ಆಸೆ ಆಮಿಷಗಳಿಗೆ ಬಲಿಯಾಗುವುದಿಲ್ಲ. ಅವರು ಈಗ 50 ಕೋಟಿ ಆಮಿಷವೊಡ್ಡುತ್ತಿದ್ದಾರೆ ಎಂದು ತಿಳಿಸಿದರು.
—