ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ‘ಯಡಿಯೂರಪ್ಪ’ ಹೆಸರಿಡಲು ಕೇಂದ್ರಕ್ಕೆ ಶಿಫಾರಸು
ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಎಸ್ ಯಡಿಯೂರಪ್ಪನವರ ಹೆಸರಿಡಲು ಕೇಂದ್ರಕ್ಕೆ ಶಿಫಾರಸು, ಮತ್ತು ಶರಾವತಿ ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ, ಎಂದು ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಹೇಳಿದ್ದಾರೆ, ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿಡಲು ಸಚಿವ ಸಂಪುಟ ನಿರ್ಧರಿಸಿದೆ. ಈ ಕುರಿತು ಶೀಘ್ರವೇ ಕೇಂದ್ರ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಬಸವರಾಜ ಎಸ್ ಬೊಮ್ಮಾಯಿ ಹೇಳಿದರು. ಶಿವಮೊಗ್ಗ ನಗರದ ಎನ್ಇಎಸ್ ಮೈದಾನದಲ್ಲಿ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದ ಅವರು, ಬೆಂಗಳೂರಿನ ನಂತರ ರಾಜ್ಯದಲ್ಲಿ ಅತ್ಯಂತ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ಶಿವಮೊಗ್ಗ ಭವಿಷ್ಯದ ನಗರವಾಗಿದೆ. ಬರೀ 18 ತಿಂಗಳ ಅವಧಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 27 ರಂದು ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ, ಆರ್ಥಿಕ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಇದು ಪೂರಕವಾಗಲಿದೆ ಎಂದರು.2006 ಕ್ಕೂ ಮೊದಲಿನ ಹಾಗೂ ಇಂದಿನ ಶಿವಮೊಗ್ಗದಲ್ಲಿ ಊಹಿಸಲಾಗದ ವ್ಯತ್ಯಾಸವಿದೆ. ಜಿಲ್ಲೆ ಎಲ್ಲ ರೀತಿಯಿಂದಲೂ ಅಭಿವೃದ್ಧಿ ಹೊಂದುತ್ತಿದೆ. ಇಂದು ಸುಮಾರು 1000 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.ಸಂಸದ ಬಿ ವೈ ರಾಘವೇಂದ್ರ ಅವರ ಜನೋಪಯೋಗಿ ನಾಯಕರಿಂದ ಇಂದು ಸಾಧ್ಯವಾಗಿದೆ ಎಂದರು.
ಶರಾವತಿ ಯೋಜನೆ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ*. ಇದಕ್ಕಾಗಿ ಈಗಾಗಲೇ ಸಮೀಕ್ಷೆ ನಡೆಸಲಾಗಿದ್ದು ಕೇಂದ್ರಕ್ಕೆ ವರದಿ ಸಲ್ಲಿಸಿ ಶೀಘ್ರ ಅನುಮೋದನೆ ಪಡೆಯಲಾಗುವುದು ಎಂದರು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ 500 ಕೋಟಿ ರೂ. ಮಂಜೂರು ಮಾಡಿದೆ. ಅದರ ಶಂಕುಸ್ಥಾಪನೆ, ಮಿಲೆಟ್ ಉತ್ಸವಕ್ಕೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದಾರೆ,ಎಂದರು.
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಅವರು 21.60 ಕೋಟಿ ವೆಚ್ಚದ ಅಂಗನವಾಡಿ, ಶಾಲೆ ಅಭಿವೃದ್ದಿ, ರಸ್ತೆ, ಉದ್ಯಾನವನ, ಬಾಕ್ಸ್ ಚರಂಡಿ ಅಭಿವೃದ್ದಿ, 6.45 ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್ಗಳಲ್ಲಿ ಅಭಿವೃದ್ದಿ, 15.15 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿ ಸೇರುತ್ತಿರುವ ಮಲಿನ ನೀರು ತಡೆಗಟ್ಟುವ ಕಾಮಗಾರಿ. 10.62 ಕೋಟಿ ವೆಚ್ಚದಲ್ಲಿ ನಾನಾ ರ್ಡ್ಗಳಲ್ಲಿ ರಸ್ತೆ, ಬಾಕ್ಸ್ ಚರಂಡಿ, ಸಮುದಾಯ ಭವನ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ನಗರದ ಹೊರವಲಯದ ಗೋವಿಂದಪುರದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿ ನಿರ್ಮಿಸಲಾಗುತ್ತಿರುವ 3 ಸಾವಿರ ಮನೆಗಳ ಪೈಕಿ ಪೂರ್ಣಗೊಂಡಿರುವ 288 ಮನೆಗಳನ್ನು ಹಸ್ತಾಂತರಿಸಿ 700 ಫಲಾನುಭವಿಗಳಿಗೆ ಅಂತಿಮ ಹಂಚಿಕೆ ಪತ್ರ ವಿತರಿಸಿದರು.
ನಗರದಲ್ಲಿ 3.48 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗಿರುವ 2 ಕೆರೆಗಳ ಲೋಕಾರ್ಪಣೆ, ನಗರದಲ್ಲಿ 25.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಂಕ್ರೀಟ್ ರಸ್ತೆ, ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ 15.41 ಕೋಟಿ ರೂ. ವೆಚ್ಚದ ಕಟ್ಟಡ 1.74 ಕೋಟಿ ರೂ. ವೆಚ್ಚದ ಸ್ಮಾರ್ಟ್ ಎಜುಕೇಶನ್ ಪ್ರಾಜೆಕ್ಟ್, 58 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಮತ್ತು ಮಲಿನ ನೀರು ಶುದ್ಧೀಕರಣ ಘಟಕ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರೀಯ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿಎಸ್ ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ, ಬೈರತಿ ಬಸವರಾಜ, ನಾರಾಯಣ ಗೌಡ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಈಶ್ವರಪ್ಪ, ಆಯನೂರು ಮಂಜುನಾಥ್, ಭಾರತಿ ಶೆಟ್ಟಿ, ಡಿಎಸ್ ಅರುಣ್, ಕೆಬಿ ಅಶೋಕ್ ನಾಯಕರ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿಡಿ ಮೇಘರಾಜ್, ನಗರ ಬಿಜೆಪಿ ಅಧ್ಯಕ್ಷರಾದ ಜಗದೀಶ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಗುರುಮೂರ್ತಿ, ಕಾಡ ಅಧ್ಯಕ್ಷರಾದ ಪವಿತ್ರ ರಾಮಯ್ಯ, ಮಹಾನಗರಪಾಲಿಕೆ ಮೇಯರ್ ಶಿವಕುಮಾರ್, ಎಸ್ ಎಸ್ ಜ್ಯೋತಿಪ್ರಕಾಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.