ಅಗ್ನಿ ಅವಘಡಕ್ಕೆ ತುತ್ತಾದ ಮನೆ.!ರೈತ ಕುಟುಂಬಕ್ಕೆ ಸಾಂತ್ವನ ಹೇಳಿದ ನಿವೃತ್ತ ಇಂಜಿನಿಯರ್ ಹೆಚ್.ಎಂ.ಮಲ್ಲಿಕಾರ್ಜುನ
ಹರಪನಹಳ್ಳಿ: ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಪ್ರಗತಿಪರ ರೈತ ಆನಂದಪ್ಪ ಅವರ ಮನೆ ಶುಕ್ರವಾರ ತಡರಾತ್ರಿ ಆಕಸ್ಮಿಕ ಅಗ್ನಿ ಅವಘಡದಿಂದ ಸಂಪೂರ್ಣ ಸುಟ್ಟು ಹೋಗಿದ್ದು, ಘಟನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರು, ನಿವೃತ್ತ ಇಂಜಿನಿಯರ್ ಹೆಚ್.ಎಂ.ಮಲ್ಲಿಕಾರ್ಜುನ ಅವರು ಭೇಟಿ ನೀಡಿ ರೈತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಗ್ನಿ ಅವಘಡದಲ್ಲಿ ಕುರಿಗಳು, ಬಟ್ಟೆ, ಅಡುಗೆ ಪರಿಕರಗಳು ಹಾಗೂ ದವಸ ಧಾನ್ಯಗಳು ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಕುಟುಂಬದ ಮುಖ್ಯಸ್ಥರಾದ ರೈತ ಆನಂದಪ್ಪ ಅವರು ಹೆಚ್.ಎಂ.ಮಲ್ಲಿಕಾರ್ಜುನ ಅವರ ಬಳಿ ಅಳಲು ತೊಡಿಕೊಂಡರು.
ಘಟನಾ ಸ್ಥಳಕ್ಕೆ ಆಗಮಿಸಿದ್ದ ಕಂದಾಯ ಅಧಿಕಾರಿಗಳಿಗೆ ವಸ್ತುಸ್ಥಿತಿ ವರದಿಯನ್ನು ಸರ್ಕಾರಕ್ಕೆ ಕೂಡಲೇ ಸಲ್ಲಿಸಲು ಮನವಿ ಮಾಡಿದ ಹೆಚ್.ಎಂ.ಮಲ್ಲಿಕಾರ್ಜುನ ಅವರು ನಂತರ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಶೀಘ್ರವಾಗಿ ಪರಿಹಾರ ವಿತರಿಸುವಂತೆ ಮನವಿ ಮಾಡಿದರು. ಅಲ್ಲದೇ ರೈತ ಕುಟುಂಬಕ್ಕೆ ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ಅಗ್ನಿ ಅವಘಡಕ್ಕೆ ಮನೆ ತುತ್ತಾದ ಕುಟುಂಬದ ಸದಸ್ಯರು ಹಾಗೂ ಗ್ರಾಮದ ಮುಖಂಡರಾದ ಪರುಸಪ್ಪ,ಭೀಮಣ್ಣ, ಲೋಕಪ್ಪ, ನಾಗರಾಜ್, ರಾಮಪ್ಪ, ರಾಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್ ಮತ್ತಿತರರು ಹಾಜರಿದ್ದರು.