ಹರಿಜನ ಕಾಲೋನಿಯಲ್ಲಿ ಉಪಹಾರ ಸೇವಿಸಿದ ಕಂದಾಯ ಸಚಿವ: ಗ್ರಾಮಸ್ಥರ ಹಲವು ಮನವಿಗೆ ಸ್ಫಂದಿಸಿದ ಸಚಿವ

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಕಂದಾಯ ಸಚಿವ ಆರ್.ಅಶೋಕ್ ಅವರು ಇಂದು ಬೆಳಿಗ್ಗೆ ಹರಿಜನ ಕಾಲೋನಿಗೆ ಭೇಟಿ ನೀಡಿ, ದಲಿತರ ಮನೆಯಲ್ಲಿ ಉಪಹಾರ ಸೇವನೆ ಮಾಡುವ ಮೂಲಕ ಅವರ ಕುಂದುಕೊರತೆಗಳನ್ನು ಆಲಿಸಿದರು.

ರಾತ್ರಿ ಇಲ್ಲಿಯ ಸರ್ಕಾರಿ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದ ಅವರು, ಬೆಳಿಗ್ಗೆ ಏಳುತ್ತಿದ್ದಂತೆ ಶಾಸಕ ರೇಣುಕಾಚಾರ್ಯ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓ, ಉಪವಿಭಾಗಾಧಿಕಾರಿ, ತಹಶಿಲ್ದಾರ್ ಮತ್ತಿತರ ಅಧಿಕಾರಿಗಳೊಂದಿಗೆ ವಾಯು ವಿಹಾರ ಮಾಡಿದರು.

ನಂತರ ದಲಿತ ಕೇರಿಗೆ ಭೇಟಿ ನೀಡಿದ ಸಚಿವರು, ಶಾಂತರಾಜು ಶಾರದಮ್ಮ ಎಂಬುವವರ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರ ಜೊತೆ ಕುಳಿತು ರಾಗಿ ತಾಲಿಪಟ್ಟು, ತರಕಾರಿ ಉಪ್ಪಿಟ್ಟು, ಕೆಂಪಿಂಡಿ, ಶೇಂಗಾಚಟ್ನಿ, ಮೊಳಕೆಕಾಳು, ಜಾಮೂನು ಸೇವಿಸಿದರು.

ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಗ್ರಾಮವಾಸ್ತವ್ಯ ಎಂದರೆ ಬಂದ ಸಿದ್ಧ ಹೋದ ಸಿದ್ಧ ಎಂಬುವುದಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವಿನ ಕಂದಕ ದೂರವಾಗಬೇಕು. ಅಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಮಲಗಬೇಕು. ಅಂಗನವಾಡಿಯಲ್ಲಿ ಊಟ ಮಾಡಬೇಕು. ಆಗ ಮಾತ್ರ ಗ್ರಾಮದ ವಾಸ್ತವಿಕ ಸ್ಥಿತಿ ಗೊತ್ತಾಗುತ್ತದೆ ಎಂದರು.

ಅನೇಕ ಮಂತ್ರಿಗಳು, ಜಿಲ್ಲಾಧಿಕಾರಿ ಹಾಗೂ ಎಸಿಯವರ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಈ ಭಾವನೆ ದೂರವಾಗಬೇಕು ಎಂದು ತಿಳಿಸಿದರು.

ಕರ್ನಾಟಕದ ೨೨೭ ತಾಲ್ಲೂಕುಗಳಲ್ಲಿ ಈಗಾಗಲೇ ಗ್ರಾಮವಾಸ್ತವ್ಯ ಮಾಡಲಾಗಿದ್ದು, ಅಲ್ಲಿಯ ವಸ್ತುಸ್ಥಿತಿ ಅವಲೋಕಿಸಲಾಗಿದೆ. ಕಂದಾಯ ಇಲಾಖೆಯನ್ನು ಮನೆಮನೆಗೆ ತೆಗೆದುಕೊಂಡು ಹೋಗುವಂತೆ ಬೇರೆ ಬೇರೆ ಇಲಾಖೆಗಳನ್ನು ಮನೆ ಬಾಗಿಲಿಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ ಎಂದ ಅವರು, ದಲಿತ ಕೇರಿಯ ಜನರು ಬಹುತೇಕ ಜಮೀನು, ಸೂರು ಕೊಡುವಂತೆ ಮನವಿ ಮಾಡುತ್ತಿದ್ದು ಆದಷ್ಟು ಬೇಗ ಪೂರೈಸುತ್ತೇನೆ. ಆಶ್ರಯ ವತಿಯಿಂದ ಜಮೀನು ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.

ಇಲ್ಲಿಯ ಗ್ರಾಮಸ್ಥರು ಸ್ಮಶಾನಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕಾಗಿ ಇಡೀ ಊರು ಸುತ್ತಿ ಬಂದಿದ್ದೇವೆ. ಬೆಟ್ಟದ ಮೇಲೆ ಜಾಗ ಇದ್ದು, ಹೆಚ್ಚು ಕಲ್ಲು ಇರುವುದರಿಂದ ಶವಗಳನ್ನು ಸುಡಲು ಆಗುವುದಿಲ್ಲ. ಇಲ್ಲಿಯ ಗ್ರಾಮಸ್ಥರಿಗೆ ಜಮೀನು ಕೇಳಿದರೆ ನೀರಾವರಿ ಜಾಗ ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ನಿಮ್ಮ ಊರಿಗೆ ಸ್ಮಶಾನ ಬೇಕೆಂದರೆ ನೀವೆ ಜಾಗ ಕೊಡಬೇಕು. ಈ ಹಿಂದೆ ಇಲ್ಲಿರುವ ಸರ್ಕಾರಿ ಶಾಲೆಗೆ ಯಾರೋ ಜಮೀನನ್ನು ದಾನವಾಗಿ ನೀಡಿದ್ದರಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆದುಕೊಳ್ಳುತ್ತಿದ್ದಾರೆ. ಸ್ಮಶಾನಕ್ಕೆ ಯಾರು ಜಮೀನು ದಾನ ಕೊಡಬೇಡಿ, ಸರ್ಕಾರದಿಂದ ಹಣ ಒದಗಿಸುತ್ತೇವೆ. ಜಮೀನು ಸಿದ್ಧ ಮಾಡಿಕೊಂಡು ತಿಳಿಸಿದರೆ ಸ್ಮಶಾನಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!