ಹುತಾತ್ಮ ಸೈನಿಕ ನೆನಪಿಗಾಗಿ ವರ್ತುಲ ರಸ್ತೆಯ ವೃತ್ತದ ಬಳಿ ಅಮರ ಜವಾನ್ ಸ್ಮಾರಕ ನಿರ್ಮಾಣ – ರಾಜನಹಳ್ಳಿ ಶಿವಕುಮಾರ್
![amar_jawan_sainik_circle_name_in_ring_road[1]](https://garudavoice.com/wp-content/uploads/2021/06/amar_jawan_sainik_circle_name_in_ring_road1.jpg)
ದಾವಣಗೆರೆ: ಹುತಾತ್ಮ ಸೈನಿಕರ ನೆನಪಿಗಾಗಿ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯಲ್ಲಿ ಬರುವ ವರ್ತುಲ ರಸ್ತೆಯ ವೃತ್ತದ ಬಳಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಯ್ದಿರಿಸಲಾದ ಬಯಲು ಜಾಗದಲ್ಲಿ ಪ್ರಾಧಿಕಾರದ ಸಭೆಯ ನಿರ್ಣಯದಂತೆ ಅಮರ ಜವಾನ್ ಸ್ಮಾರಕ ನಿರ್ಮಿಸಲು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ತಿಳಿಸಿದ್ದಾರೆ.
ದೂಡಾ ಕಚೇರಿ ಸಭಾಂಗಣದಲ್ಲಿ ಕೈಗೊಂಡ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ದೂಡಾ ವತಿಯಿಂದ ಕೈಗೊಂಡ ನಿರ್ಣಯ ಕೈಗೊಂಡಂತೆ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಎಸ್.ವಿ.ರವೀಂದ್ರನಾಥ ಇವರ ವತಿಯಿಂದ ಶಂಕುಸ್ಥಾಪನೆ ನೆರವೇರಿಸಿ, ಕಾಮಗಾರಿ ಕಾರ್ಯವನ್ನು ಕೈಗೊಳ್ಳಲಾಗಿದೆ.
ಅಮರ ಜವಾನ್ ಸ್ಮಾರಕದ ಜೊತೆಗೆ ಹುತಾತ್ಮರಾದ ಸೈನಿಕರ ನೆನಪಿಗಾಗಿ ದೇಶದಲ್ಲಿಯೇ ಉತ್ತಮವಾದ ಸ್ಮಾರಕ ಹಾಗೂ ಸೌಂದರ್ಯೀಕರಣ ಉದ್ಯಾನವನವನ್ನಾಗಿ ನಿರ್ಮಿಸಲು ಪ್ರಾಧಿಕಾರದ ವತಿಯಿಂದ ರೂ.63 ಲಕ್ಷ ಕಾಮಗಾರಿ ಪ್ರಗತಿಯಲ್ಲಿದ್ದು, ಹಾಲಿ ಮುಕ್ತಾಯ ಹಂತದಲ್ಲಿದೆ. ಉದ್ಯಾನವನಕ್ಕೆ ಹೆಚ್ಚುವರಿಯಾಗಿ ಪ್ರಾಧಿಕಾರದಿಂದ 01 ಕೋಟಿ ರೂ. ಹಣ ನಿಗದಿ ಮಾಡಿ ಹೆಚ್ಚು ಅಭಿವೃದ್ಧಿ ಮಾಡಲು ಸಂಸದ ಜಿ.ಎಂ.ಸಿದ್ದೇಶ್ವರವರು ಸೂಚನೆ ನೀಡಿದ್ದಾರೆ ಎಂದರು.
ಸೈನಿಕ ಸಂಘದ ಮಾಜಿ ಅಧ್ಯಕ್ಷ ಸತ್ಯ ಪ್ರಕಾಶ ಇವರು ಮೈದಾನದ ಮಧ್ಯ ಭಾಗದಲ್ಲಿ ಫ್ಲಾಟ್ ಫಾರ್ಮ್, ಕೆಳಭಾಗದಲ್ಲಿ ಪ್ರವಾಸಿಗರಿಗೆ ಧ್ಯಾನ ಮಾಡಲು ಒಂದು ಚಿಕ್ಕ ಕೊಠಡಿ ಹಾಗೂ ಮೈದಾನದ ಮೂಲೆಯಲ್ಲಿ(ಸರ್ಕಲ್) ಒಂದು ಓಪನ್ ಆಡಿಟೋರಿಯಂ ರೀತಿಯ ವೇದಿಕೆ ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕೆಂದರು. ಈ ಬಗ್ಗೆ ಪ್ರಾಧಿಕಾರದ ತಾಂತ್ರಿಕ ಶಾಖೆಯ ಸಿಬ್ಬಂದಿಗಳೊಂದಿಗೆ ಹಾಗೂ ಪ್ರಾಧಿಕಾರದ ಸದಸ್ಯರೊಂದಿಗೆ ಚರ್ಚಿಸಿ, ಬಯಲು ಜಾಗದಲ್ಲಿ ಲ್ಯಾಂಡ್ ಸ್ಕೇಪಿಂಗ್ ಮಾಡಲು ಆರ್ಕಿಟೆಕ್ಟರ್‌ರವರಿಗೆ 3 ಅಡಿ ಮಾದರಿಯಲ್ಲಿ ನಕ್ಷೆಗಳನ್ನು ತಯಾರಿಸಿ ಕಚೇರಿಗೆ ಒಂದು ಡೆಮೋ ಮಾದರಿ ನೀಡಬೇಕೆಂದು ಪ್ರಾಧಿಕಾರದ ಅಧ್ಯಕ್ಷರು ಆಯುಕ್ತರಿಗೆ, ಮತ್ತು ಸೈನಿಕ ಸಂಘದ ಮಾಜಿ ಸದಸ್ಯರಿಗೆ ತಿಳಿಸಿದರು.