ರೌಡಿಸಂ ಓನ್ಲಿ ಫ್ಯಾಷ್‌ನಿಟಿ..! ಭಟ್ ರಿಯಾಲಿಟಿ ಇಸ್ ವೇರಿ ಟಫ್.! ಎಸ್ ಪಿ ರಿಷ್ಯಂತ್

ದಾವಣಗೆರೆ: ರೌಡಿಸಂ ಒನ್ಲಿ ಫ್ಯಾಷ್‌ನಿಟಿ… ಭಟ್ ರಿಯಾಲಿಟಿ ಇಸ್ ವೇರಿ ಟಫ್… ರೌಡಿಸಂ ಮಾಡಿದಾಕ್ಷಣ ನೀವು ಹೀರೋಗಳು ಆಗೋಕೆ ಸಾಧ್ಯವಿಲ್ಲ. ಇದೆಲ್ಲ 4 ದಿನ ಮಾತ್ರ, ನಿಜವಾದ ಬದುಕೇ ಬೇರೆ ಇದೆ… ಇದರೊಳಗೆ ಬಂದೋರು.. ಹಂಗೆ ಹೋಗೋದೇ… ಅದರಲ್ಲೂ ಮರ್ಡರ್ ಕೇಸ್‌ನಲ್ಲಿರುವರು ನೆಟ್ಟಗೆ ಇರಬೇಕು… ಇಲ್ಲಂದ್ರೆ ಗೊತ್ತಿದೆ ಏನ್ಮಾಡಬೇಕೆಂದು… ಹುಷಾರ್….
ಇದು..ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಬುಧವಾರ ರೌಡಿ ಶೀಟರ್‌ಗಳಿಗೆ ಎಸ್ಪಿ ಸಿ.ಬಿ.ರಿಷ್ಯಂತ್ ಕೊಟ್ಟ ಖಡಕ್ ಸಂದೇಶ.. ಏನಪ್ಪ.. ಹೆಸರು ನಿಂದು.. ಎಷ್ಟು ಕೇಸ್ ಇದೆ… ಎಲ್ಲ ಬಿಟ್ಟಿದ್ದೀಯಾ ಹೆಂಗೆ… ಯಾವ ಕೇಸ್‌ನಲ್ಲಿ ಫಿಟ್ ಆಗಿದೀಯಾ… ಮನೆಯಲ್ಲಿ ಎಷ್ಟು ಜನ ಇದ್ದೀರಿ… ಅಪ್ಪ-ಅಮ್ಮ ಏನ್ ಮಾಡುತ್ತಾರೆ…. ಈಗಲೂ ನಡೆಸ್ತಿದೆಯೋ… ಹೆಂಗೆ… ಯಾರೀ ಅವನು…. ಎಂದು ಎಸ್ಪಿ ಕೇಳುತ್ತಿರುವಾಗ.. ರೌಡಿ ಶೀಟರ್‌ಗಳು ಕೈ ಕಟ್ಟಿ, ತಲೆ ಬಗ್ಗಿಸಿ… ಮಂದಗತಿಯಲ್ಲಿ ಉತ್ತರ ಹೇಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ನಿಮ್ಮ ಚಟುವಟಿಕೆಗಳನ್ನು ಬದಲಿಸಿಕೊಳ್ಳದಿದ್ದರೆ ಎಲ್ಲ ಕತ್ತರಿಸಿ ಮೂಲೆಗೆ ಕೂರಿಸೋದೆ ಎಲ್ಲ…
‘ನೀವು ಮಾಡುತ್ತಿರುವುದು ಥರ್ಡ್ ಕ್ಲಾಸ್ ಕೆಲಸ’. ಇನ್ಮುಂದೆ ಇದನ್ನೆಲ್ಲ ಬಿಡಬೇಕು.ನಿಮ್ಮ ವರ್ತನೆಗಳನ್ನು ತಿದ್ದಿಕೊಳ್ಳಬೇಕು. ಇಲ್ಲಿಗೆ ಕರೆಯಿಸಿರುವ 207 ಜನರ ಎಲ್ಲ ಚಲನವನಗಳ ಮೇಲೆ ಇಲಾಖೆ ಕಣ್ಣು ಇಟ್ಟಿದೆ. ಏ ಒಂದು ದಿನ ಕರೆಸ್ತಾರೆ ಏನೋ ಹೇಳಿ ಕಳಿಸ್ತಾರೆ ಅಂದುಕೊಳ್ಳಬೇಡಿ’…ನಮಗೆ ಗೊತ್ತಿದೆ ಏನ್ ಮಾಡಬೇಕೆಂದು… ಇನ್ಮುಂದೆ ಒಂದೇ ಒಂದು ಪ್ರಕರಣ ಕೂಡ ನಿಮ್ಮ ಮೇಲೆ ದಾಖಲಾದರೆ ಪರಿಣಾಮ ನೆಟ್ಟಗಿರುವುದಿಲ್ಲ. ಕಠಿಣ ಕಾನೂನು ಮೂಲಕ ನಿಮ್ಮನ್ನು ಮಟ್ಟಹಾಕಲಾಗುವುದು. ಇದನ್ನೆಲ್ಲ ಬಿಟ್ಟು ಉತ್ತಮ ಜೀವನ ರೂಢಿಸಿಕೊಳ್ಳಿ. ಇದಕ್ಕೆ ಅಗತ್ಯವಾದ ಸಲಹೆ ಸಹಕಾರ ನೀಡಲಾಗುವುದು ಎಂದು ಎಸ್ ಪಿ ಕಿವಿ ಮಾತು ಹೇಳಿದರು. ಇದಕ್ಕೂ ಮುನ್ನ ಅವರು ಠಾಣಾವಾರು ರೌಡಿಶೀಟರ್‌ಗಳ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳ ಮಾಹಿತಿಗಳನ್ನು ಸಂಬಂಧಿಸಿದ ಪಿಎಸ್‌ಐಗಳಿಂದ ಪಡೆದುಕೊಂಡರು.
ಬೆಳ್ಳಂ..ಬೆಳ್ಳಗ್ಗೆ ರೌಡಿ ಶೀಟರ್‌ಮನೆಗೆ ಹೋದ ಪೊಲೀಸರು..ಆಗ ತಾನೆ ಎದ್ದು ಬರುತ್ತಿದ್ದ ರೌಡಿಗಳು ಬರುತ್ತೇನೆ ಹೋಗಿ ಸರ್ ಎಂದರೂ ಪೊಲೀಸರು ಬಿಡಲಿಲ್ಲ..ಒಂಭತ್ತು ಗಂಟೆಯೊಷ್ಟೋತ್ತೀಗೆ ಹೈಸ್ಕೂಲ್ ಮೈದಾನಕ್ಕೆ ಎಲ್ಲ ರೌಡಿಗಳು ಬಂದಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ನೀಡಲು ರೌಡಿಗಳನ್ನು ಎಸ್ಪಿ ರಿಷ್ಯಂತ್ ಕರೆಸಿದ್ದರು. ಸದಾ ಎಸಿ ಕಾರು, ಹಿಂದುಗಡೆ ಬೆಂಬಲಿತ ಪಡೆಯೊಂದಿಗೆ ಪೋಸ್ ಕೊಡುತ್ತಿದ್ದ ರೌಡಿಗಳು ಸುಮಾರು ಮೂರು ಗಂಟೆಗಳ ಕಾಲ ಬಿಸಿಲಿಗೆ ಬಸವಳಿದರು. ಸದಾ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದ ರೌಡಿಗಳು… ತಿಂಡಿ ಇಲ್ಲದೇ ಉಪವಾಸ ಇದ್ದರು… ಹೊಟ್ಟೆ ಹಸಿವು ತಾಳಲಾರದೆ ಬ್ರೆಡ್, ಬಿಸ್ಕತ್ ತಿಂದು, ನೀರು ಕುಡಿದು ಒಂಚೂರು ರಿಲ್ಯಾಕ್ಸ್ ಆದರು. ಕೇವಲ ರೌಡಿಗಳು ಮಾತ್ರವಲ್ಲ ಅವರೊಂದಿಗೆ ಪೊಲೀಸರು ಕೂಡ ಉಪವಾಸ ಇರಬೇಕಾಯಿತು. ಇನ್ನು ಬಿಸಿಲಿನಲ್ಲಿ ಬೆಳಗ್ಗೆಯಿಂದಲೂ ನಿಂತಿದ್ದ ರೌಡಿಗಳು ಎಸ್ಪಿಗಾಗಿ ಕಾಯುತ್ತಿದ್ದರು… ಬಿಸಿಲಿನ ಝಳ ತಾಳಲಾರದೇ ಕೆಲವರು ತಲೆ ಮೇಲೆ ಟವಲ್ ಹಾಕಿಕೊಂಡು ನೆಲದ ಮೇಲೆ ಕುಳಿತರು. ಮೋಟ್ಬಳ್ ಸೀನ, ಕಣುಮ, ಗಾರ ಮಂಜ, ಚಾಕಲೇಟ್ ಸೇರಿದಂತೆ ಅನೇಕ ಪ್ರಮುಖ ರೌಡಿ ಶೀಟರ್ ಗಳು ಬಿಸಲಿಗೆ ಬಸವಳಿದರು.. ಇವರ ಜತೆ ವಯಸ್ಸಾದವರು ಕೂಡ ಇದ್ದು, ಪೊಲೀಸರಿಗೆ ಹಿಡಿ ಶಾಪ ಹಾಕಿದ್ದು ಕಂಡುಬಂತು. ಅಲ್ಲದೇ ವಿಶೇಷ ಚೇತನನೊಬ್ಬನ ಮೇಲೆ ರೌಡಿ ಶೀಟರ್ ಇದ್ದು, ಅದನ್ನು ತೆಗೆಯುವಂತೆ ಎಸ್ಪಿಗೆ ಮನವಿ ಮಾಡಿದರು. ನಾನು 2017 ರ ಹಿಂದೆ ಓಸಿ, ಜೂಜಾಟವಾಡುತ್ತಿದ್ದೇ.. ಆದರೀಗ ಎಲ್ಲ ಬಿಟ್ಟಿದ್ದೀನಿ ಎಂದು ಹೇಳಿದ.. ಹೌದಾ.. ಅದಕ್ಕೆಂದೇ ನಿನ್ನ ಮೇಲೆ ಇನ್ನೂ ಹತ್ತು ಕೇಸ್ ಇದೆ… ಇನ್ನೂ ಯಾವ.. ಯಾವ ಸ್ಟೇಷನ್‌ನಲ್ಲಿ ಎಷ್ಟು ಇದೆ ನೋಡಬೇಕು.. ನೋಡೋಣ ಎಂದು ಕಾರ್ ಹತ್ತಿದರು.
ದಾವಣಗೆರೆ ಜಿಲ್ಲೆಯಲ್ಲಿ 1400 ಕ್ಕೂ ಹೆಚ್ಚು ರೌಡಿ ಶೀಟರ್ ಇದ್ದು, ಕೊಲೆ, ಕೊಲೆ ಯತ್ನ, ರಾಬರಿಯಂತಹ ಕೃತ್ಯಗಳಲ್ಲಿ ಭಾಗಿಯಾದ 207 ಮುಖ್ಯ ರೌಡಿ ಶೀಟರ್‌ಗಳ ಪರೇಡ್ ನಡೆಯಿತು. ಐವರನ್ನು ಜಿಲ್ಲೆಯಿಂದ ಗಡಿ ಪಾರು ಮಡುವಂತೆ ಶಿಫಾರಸ್ಸು ಮಾಡಿದ್ದೇವೆ. ರೌಡಿಗಳ ಮಾಹಿತಿಯನ್ನು ಪರಿಷ್ಕೃತಗೊಳಿಸಲು ರೌಡಿ ಶೀಟರ್ ಗಳ ಪರೇಡ್ ನಡೆಸಲಾಗಿದೆ ಎಂದು ಎಸ್ಪಿ ತಿಳಿಸಿದರು. ಕೊಲೆ, ಕೊಲೆ ಯತ್ನ, ಡಕಾಯಿತಿ ಪ್ರಕರಣಗಳ ಆರೋಪಿಗಳಾದ ರೌಡಿ ಶೀಟರ್‌ಗಳ ಪರೇಡ್ ಮಾಡಿ, ಈಗ ಏನು ಕೆಲಸ ಮಾಡುತ್ತಿದ್ದಾರೆ, ಯಾವೆಲ್ಲಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ, ಬೇರೆ ಏನೆಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಇದ್ದಾರೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಪರೇಡ್ ಮೂಲಕ ಎಲ್ಲಾ ಮಾಹಿತಿ ಸಂಗ್ರಹಿಸಿ, ರೌಡಿ ಶೀಟರ್‌ಗಳ ಮಾಹಿತಿ ಅಪ್ಡೇಟ್ ಮಾಡುತ್ತಿದ್ದೇವೆ ಎಂದು ಎಸ್ಪಿ ಹೇಳಿದರು.
ಕೆಲವು ರೌಡಿ ಶೀಟರ್‌ಗಳು ನ್ಯಾಯಾಲಯದ ದಿನಾಂಕಗಳಲ್ಲಿ ವಿಚಾರಣೆಗೆ ಹಾಜರಾಗುತ್ತಿಲ್ಲ. ನ್ಯಾಯಾಲಯದ ಡೇಟ್‌ಗೆ ಯಾರೆಲ್ಲಾ ಹಾಜರಾಗುತ್ತಿಲ್ಲ, ಯಾರೆಲ್ಲಾ ವಾರೆಂಟ್ ತಪ್ಪಿಸಿಕೊಳ್ಳುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಅಂತಹ ರೌಡಿ ಶೀಟರ್‌ಗಳಿಗೆ ಕಾನೂನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಿದ್ದೇವೆ ಎಂದು ಎಸ್ಪಿ ಹೇಳಿದರು. ಕೊಲೆ, ಕೊಲೆ ಯತ್ನ, ರಾಬರಿ, ಗುಂಪು ಗಲಭೆ, ಕೋಮು ಘರ್ಷಣೆ, ಕೋಮು ಸಾಮರಸ್ಯ ಕದಡುವಂತಹ ಕೃತ್ಯಗಳಲ್ಲಿ ಭಾಗಿಯಾದವರು, ಇತರೆ 50 ಜನ ರೌಡಿ ಶೀಟರ್‌ಗಳನ್ನು ಇಂದಿನ ಪರೇಡ್‌ಗೆ ಕಳಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 40 ಜನರ ಹೆಸರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಸುಮಾರು 37-38 ಜನರ ರೌಡಿ ಶೀಟರ್‌ಗಳ ಹೆಸರನ್ನು ಕೈಬಿಡಲಾಗಿದೆ. ತೀರಾ ವಯಸ್ಸಾದವರು, 10 ವರ್ಷದಿಂದ ಯಾವುದೇ ಅಪರಾಧ ಕೃತ್ಯ, ಚಟುವಟಿಕೆಯಲ್ಲಿ ಭಾಗಿಯಾಗದವರು, ಸನ್ನಡತೆ ಆದಾರದಲ್ಲಿ ಸುಮಾರು ರೌಡಿ ಶೀಟರ್ ಪಟ್ಟಿಯಿಂದ ಬಿಡುವ ಪ್ರಕ್ರಿಯೆ ನಡೆಸಲಾಗಿದೆ. ಹೊಸದಾಗಿ ರೌಡಿ ಶೀಟರ್ ಪಟ್ಟಿಗೆ ಹೆಸರು ಸೇರ್ಪಡೆ ಹಾಗೂ ರೌಡಿ ಶೀರ್ಟ ಪಟ್ಟಿಯಿಂದ ಹೆಸರನ್ನು ಕೈಬಿಡುವ ಸಂಖ್ಯೆ ಸರಿಸುಮಾರು ಸಮಾನವಾಗಿದೆ ಎಂದು ಎಸ್ಪಿ ತಿಳಿಸಿದರು.
ಕೋಮು ಘರ್ಷಣೆ, ಕೊಲೆ, ಕೊಲೆ ಯತ್ನ ಪ್ರಕರಣಗಳ ಆರೋಪಿಗಳನ್ನು 307 ಅಂತಾ ಇಲಾಖೆ ಪರಿಗಣಿಸುತ್ತದೆ. ನ್ಯಾಯಾಲಯದಲ್ಲಿ ಸಣ್ಣ ಪ್ರಮಾಣದಲ್ಲಿ ದಂಡ ಕಟ್ಟಿ, ಜಾಮೀನಿನ ಮೇಲೆ ಹೊರ ಬಂದು, ಮತ್ತೆ ಓಸಿ ದಂಧೆ ಶುರು ಮಾಡಿದ್ದಂತಹರವರ ಮೇಲೆ ಇಲಾಖೆ ಕಣ್ಣೀಟಿದೆ. ಗಡಿಪಾರು ಆದೇಶ ಬಂದ ನಂತರ ಯಾರನ್ನೆಲ್ಲಾ ಜಿಲ್ಲೆಯಿಂದ ಗಡಿಪಾರು ಮಾಡಲಾಗುವುದು ಎಂಬ ಬಗ್ಗೆ ಹೇಳುತ್ತೇನೆ ಎಂದು ಎಸ್ಪಿ ಹೇಳಿದರು.
ಇನ್ನು ವಿಧಾನಸಭೆ ಚುನಾವಣೆ ಸಮೀಪಿಸಿದಾಗ ಪೊಲೀಸ್ ಇಲಾಖೆಗೆ ರೌಡಿ ಶೀಟರ್‌ಗಳ ವಿಚಾರದಲ್ಲಿ ಏನು ಮಾಡಬೇಕೆಂಬ ನಿರ್ದೇಶನ ಬರುತ್ತದೆ. ಅದರಂತೆ ಕ್ರಮ ಕೈಗೊಳ್ಳುತ್ತೇವೆ ಎಂದಷ್ಟೇ ಹೇಳಿ ಹೊರಟರು.