ಸಂತ ಸೇವಾಲಾಲ್ ನಿಂದಿಸಿರುವ ಮಾದಿಗ ದಂಡೋರ ಸಮಿತಿ ಕೂಡಲೇ ಬಹಿರಂಗ ಕ್ಷಮೆಗೆ ಆಗ್ರಹ
ದಾವಣಗೆರೆ: ಬಂಜಾರ ಸಮುದಾಯದ ಕುಲಗುರುಗಳಾದ ಸಂತ ಸೇವಾಲಾಲ್ ಅವರನ್ನು ನಿಂದಿಸಿರುವ ಮಾದಿಗ ದಂಡೋರ ಸಮಿತಿ ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಸದಾಶಿವ ಆಯೋಗ ವರದಿ ವಿರೋಧಿ ಸಮಿತಿ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಲಕ್ಷ್ಮಣ್ ರಾಮವತ್, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ಇತ್ತೀಚಿಗೆ ನ್ಯಾಮತಿ ತಾಲ್ಲೂಕಿನಲ್ಲಿ ಮಾದಿಗ ದಂಡೋರ ಸಮಿತಿಯಿಂದ ಹೋರಾಟ ನಡೆಸಿ, ಬಂಜಾರ ಕುಲಗುರು ಸಂತ ಸೇವಾಲಾಲ್ ಅವರ ಹೆಸರನ್ನು ಹೋರಾಟದ ಹಾಡಿನ ಮೂಲಕ ಏಕವಚನದಲ್ಲಿ ನಿಂದಿಸಿರುವುದು ಖಂಡನೀಯ. ಕೂಡಲೇ ಮಾದಿಗ ದಂಡೋರ ಸಮಿತಿಯವರು ಬಹಿರಂಗ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರ ವಿರುದ್ಧ ಉಗ್ರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಹಲವು ಸಮುದಾಯದವರು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅದರಂತೆ ಮಾದಿಗ ಜನಾಂಗದವರು ಕೂಡ ಮೀಸಲಾತಿ ಬೇಕೆಂದಲ್ಲಿ ಹೋರಾಟ ನಡೆಸಲಿ. ಅದನ್ನು ಬಿಟ್ಟು ಬಂಜಾರ ಸಮುದಾದವರ ಮೇಲೆ ಹಗೆ ಸಾಧಿಸುವುದು ಸರಿಯಲ್ಲ ಎಂದರು.
ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ೧೦೧ ಜಾತಿಗಳಿರುವ ಪರಿಶಿಷ್ಟ ಜಾತಿಯಲ್ಲಿ ನ್ಯಾ. ಸದಾಶಿವ ಆಯೋಗದ ವರದಿ ಮುಂದಿಟ್ಟುಕೊಂಡು ರಾಜಕೀಯ ಪಕ್ಷಗಳು ದಲಿತರ ಒಗ್ಗಟ್ಟನ್ನು ಮುರಿಯುವಂತಹ ಷಡ್ಯಂತ್ರ ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಸದಾಶಿವ ಆಯೋಗದ ವರದಿಯಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿ ಯಾರಿಗೂ ಇಲ್ಲ. ಸರ್ಕಾರ ವರದಿಯನ್ನು ಜಾರಿ ಮಾಡಬೇಕೆಂದಲ್ಲಿ ಮೊದಲು ಅದರ ಸಾಧಕ-ಬಾಧಕಗಳ ಕುರಿತು ವಿಶೇಷ ಅಧಿವೇಶನದಲ್ಲಿ ಚರ್ಚಿಸಿ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿ ನಂತರ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್, ಶೀತಲ್ ಬಂಜಾರ, ಶಶಿನಾಯ್ಕ್ ಆವರಗೆರೆ, ಕೃಷ್ಣ ಮೂರ್ತಿ, ಸಿ. ಅರುಣ್ ಕುಮಾರ್ ಇದ್ದರು.