ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನ; ಪ್ರಚಾರ ವಾಹನಗಳಿಗೆ ಚಾಲನೆ
ದಾವಣಗೆರೆ: ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಡಿ. 23 ಮತ್ತು 24 ರಂದು ನಡೆ ಯುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಮಹಾ ಅವೇಶನದ ಹಿನ್ನೆಲೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ ಪ್ರಚಾರ ವಾಹನಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಡಿ. 23 ಮತ್ತು 24 ರಂದು ದಾವಣಗೆರೆಯಲ್ಲಿ ನಡೆಯುವ ಮಹಾಸಭಾದ 24 ನೇ ಮಹಾ ಅವೇಶನದ ಪ್ರಚಾರ ಕಾರ್ಯಕ್ಕಾಗಿ ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕು, ಗ್ರಾಮಗಳಿಗೆ ತೆರಳಿ ಅವೇಶನ ನಡೆಯುವ ಬಗ್ಗೆ ಸಾರ್ವಜನಿಕರಿಗೆ ಪ್ರಚುರ ಪಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಹಾ ಅಧಿವೇಶನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವರು. ಬಂದವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜಾತಿಗಣತಿ, ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ವಿಷಯಗಳನ್ನು ಪ್ರಮುಖವಾಗಿ ಅಧಿವೇಶನ ದಲ್ಲಿ ಚರ್ಚಿಸಲಾಗುವುದು. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಬೇಡಿಕೆ ಮತ್ತಿತರ ವಿಚಾರಗಳ ಬಗ್ಗೆಯೂ ಅಧಿವೇಶನ ದಲ್ಲಿ ಬೇಡಿಕೆಗಳ ಮಂಡಿಸಿ, ನಿರ್ಣಯ ಕೈಗೊಂಡು ರಾಜ್ಯ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ತಿಳಿಸಿದರು.
ಜಾತಿಗಣತಿ ವಿಚಾರವಾಗಿ ವಿರೋಧ ಇರುವ ಕಾರಣಕ್ಕೆ ಬಹಿರಂಗ ಪಡಿಸುವುದು ಬೇಡ ಎಂಬುದಾಗಿ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿದೆ. ಅಧಿವೇಶನದಲ್ಲಿ ಜಾತಿಗಣತಿ ವಿಚಾರದ ಬಗ್ಗೆ ಚರ್ಚಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಮಾತನಾಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕಾಗಿ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ 300-140 ಸುತ್ತಳತೆಯ వికాల ಸಭಾಂಗಣ, ವೇದಿಕೆ ನಿರ್ಮಾಣ ಮಾಡಲಾಗುವುದು. 2 ಲಕ್ಷಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವರು. 25 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ, ಬೇರೆಡೆಯಿಂದ ಬಂದವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ,ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್, ಕೆ.ಜಿ. ಶಿವ ಕುಮಾರ್, ಡಾ.ಎಂ.ಜಿ. ಈಶ್ವರಪ್ಪ, ಬಾ.ಮ. ಬಸವರಾಜಯ್ಯ, ಬಿ.ಜಿ. ರಮೇಶ್, ಶಂಭು ಉರೇಕೊಂಡಿ, ಐನಳ್ಳಿ ಶುಭಮಂಗಳ, ಪುಷ್ಪಾ ವಾಲಿ, ನಿರ್ಮಲಾ ಸುಭಾಷ್, ಕವಿತಾ ಚಂದ್ರಶೇಖರ್, ಪ್ರಕಾಶ್ ಪಾಟೀಲ್, ಸುಷ್ಮಾ ಪಾಟೀಲ್, ಶಿವುರತನ್, ಎ.ಎಚ್. ಕೊಟ್ರೇಶ್ ಇತರರು ಇದ್ದರು.