ಷರತ್ತು ಬದ್ಧ ಗಣೇಶೋತ್ಸವ ಆಚರಣೆಗೆ ಅನುಮತಿ: ಡಿಸಿ ಮಹಾಂತೇಶ್ ಬೀಳಗಿ

ದಾವಣಗೆರೆ: ಈ ಬಾರಿಯ ಗಣೇಶೋತ್ಸವ ಆಚರಣೆಗೆ ಸರ್ಕಾರ ಷರತ್ತು ಬದ್ಧ ಅನುಮತಿ ಮಾತ್ರ ನೀಡಿದ್ದು, ಅದರಂತೆ ಜಿಲ್ಲೆಯಲ್ಲಿಯೂ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಿ, ಸಾರ್ವಜನಿಕವಾಗಿ ಅಥವಾ ಮನೆಗಳಲ್ಲಿ ಗಣೇಶೋತ್ಸವ ಆಚರಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸೋಮವಾರ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳಿಂದ ಪಡೆಯಲಾಗುವ ಅನುಮತಿಯನ್ನು ಒಂದೇ ಕಡೆ ಒದಗಿಸಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದರು.

ಗಣೇಶೋತ್ಸವ ಆಚರಣೆ ನಮ್ಮ ದೇಶದಲ್ಲಿ ಭಾವನಾತ್ಮಕ ಸಂಬಂಧ ಹೊಂದಿದ್ದು, ಸುದೀರ್ಘ ಪರಂಪರೆಯೂ ಇದೆ. ಭಾವೈಕ್ಯತೆ ಸಾರುವ ಉದ್ದೇಶವೂ ಕೂಡ ಗಣೇಶೋತ್ಸವ ಹೊಂದಿದೆ. ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕಾಗಿದ್ದ ಗಣೇಶೋತ್ಸವವನ್ನು ಮಹಾಮಾರಿ ಕೊರೊನಾ ಹರಡುವಿಕೆ ಭೀತಿಯಿಂದ, ಷರತ್ತು ಬದ್ಧವಾಗಿ ಸರಳ ರೀತಿಯಲ್ಲಿ ಆಚರಿಸಲೇಬೇಕಾದ ಅನಿವಾರ್ಯತೆ ಒದಗಿಬಂದಿದೆ. ಹೀಗಾಗಿ ಸಾರ್ವಜನಿಕವಾಗಿ ಕೂರಿಸಲಾಗುವ ಗಣೇಶಮೂರ್ತಿಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಪ್ರತಿಷ್ಠಾಪನೆ ಮಾಡಬೇಕು.

ಎರಡ್ಮೂರು ವಾರ್ಡ್ನವರು ಸೇರಿ, ಒಂದೆಡೆ ಪ್ರತಿಷ್ಠಾಪಿಸಿ ಆಚರಿಸುವುದು ಸೂಕ್ತ. ಸರ್ಕಾರದ ಸೂಚನೆಯಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ನಾಲ್ಕು ಅಡಿ, ಮನೆಯೊಳಗೆ ಕೂರಿಸುವ ಮೂರ್ತಿ ಎರಡು ಅಡಿ ಮೀರುವಂತಿಲ್ಲ. ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಣೆ ಮಾಡುವ ಆಯೋಜಕರು ಕೋವಿಡ್ 19 ರ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಮತ್ತು ಕನಿಷ್ಟ 01 ಡೋಸ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.

ಗಣೇಶೋತ್ಸವವನ್ನು 5 ದಿನಕ್ಕಿಂತ ಹೆಚ್ಚು ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸಾರ್ವಜನಿಕವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ಗರಿಷ್ಟ 20 ಜನಕ್ಕೆ ಸೀಮಿತವಾಗುವ ರೀತಿ ಆವರಣ ನಿರ್ಮಿಸಬೇಕು, ದರ್ಶನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರತಿ ವ್ಯಕ್ತಿಗೆ ಬಣ್ಣದಿಂದ ಬಾಕ್ಸ್ ಗುರುತಿಸಬೇಕು.

ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತಿರಬೇಕು. ಈ ಬಾರಿ ಗಣೇಶೋತ್ಸವ ಆಚರಣೆ ಅಂಗವಾಗಿ ಯಾವುದೇ ಬಗೆಯ ಸಾಂಸ್ಕೃತಿಕ, ಸಂಗೀತ, ನೃತ್ಯ ಕಾರ್ಯಕ್ರಮ, ಡಿಜೆ ಸಹಿತ ಮನೋರಂಜನೆ ಕಾರ್ಯಕ್ರಮ ಆಯೋಜನೆ ಅವಕಾಶ ಇರುವುದಿಲ್ಲ. ಗಣೇಶ ಮೂರ್ತಿ ತರುವಾಗ ಹಾಗೂ ವಿಸರ್ಜಿಸುವ ಸಂದರ್ಭಗಳಲ್ಲಿ ಮೆರೆವಣಿಗೆ ಹೊರಡಿಸುವಂತಿಲ್ಲ.

ಸಾರ್ವಜನಿಕ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಯನ್ನು ಆಯೋಜಕರು ಮಾಡಬೇಕು, ಅಲ್ಲದೆ ಭಕ್ತಾದಿಗಳು ಮತ್ತು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಯಾವುದೇ ಕಾರಣಕ್ಕೂ ನಮ್ಮ ವರ್ತನೆ ಕೋವಿಡ್ ಸೋಂಕು ಹರಡುವ ರೀತಿ ಇರಬಾರದು. ಒಂದು ವೇಳೆ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಸೇರಿದಂತೆ ತಾಲ್ಲೂಕುಗಳ ತಹಸಿಲ್ದಾರರು, ನಗರಸಭೆ, ಪುರಸಭೆಗಳ ಮುಖ್ಯಾಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!