ವರುಣನ ಕೃಪೆಯಿಂದ ಮಾತ್ರ ಸಿಗಂದೂರು ಚೌಡೇಶ್ವರಿಯ ದರ್ಶನ , ಇಲ್ಲದಿದ್ದರೆ ಇನ್ನು ಮೂರು ದಿನಗಳಲ್ಲಿ ಸಿಗಂದೂರು ಲಾಂಚ್ ಸ್ಟಾಪ್ !
ಶಿವಮೊಗ್ಗ (ಸಾಗರ) : ಮಳೆಯ ಕೊರತೆಯಿಂದ ಹಲವು ದಿನಗಳ ಹಿಂದೆಯೇ ವಾಹನಗಳ ಸಾಗಾಟವನ್ನು ನಿಲ್ಲಿಸಿರುವ ಸಿಗಂದೂರು ಲಾಂಚ್ ನಲ್ಲಿ ಜನರ ಸಾಗಾಟವನ್ನು ನಿಲ್ಲಿಸುವ ಬಗ್ಗೆ ಚರ್ಚೆಯಾಗುತ್ತಿದ್ದು, ಇನ್ನು ಮೂರು ದಿನಗಳಲ್ಲಿ ಲಾಂಚ್ ಸಂಚಾರವೇ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇಂದು ಶಿವಮೊಗ್ಗದಲ್ಲಿ ಮಳೆಯಾಗುತ್ತಿದೆ. ಇದೇ ಮಳೆ ಮುಂದುವರೆದರೆ ಮಾತ್ರ ಲಾಂಚ್ ಸಂಚಾರ ಸುಗಮವಾಗಿರುತ್ತದೆ.
ಶರಾವತಿ ಕಣಿವೆಯಯಲ್ಲಿ 20 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಸಿಗಂದೂರು ಲಾಂಚ್ನ್ನು ಸ್ಥಗಿತಗೊಳಿಸಿದರೆ, ಸಿಗಂದೂರನ್ನು ತಲುಪಲು ಜನ 80 ಕಿಮೀ ಸುತ್ತುವರಿದು ಹೋಗಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮಾತನಾಡಿರುವ ಶಾಸಕ ಬೇಳೂರು ಗೋಪಾಲಕೃಷ್ಣರವರು ಅವಶ್ಯ ಬಿದ್ದಲ್ಲಿ ವಿಶೇಷ ಬಸ್ಸಿನ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಶರಾವತಿ ವಿದ್ಯುದಾಗಾರದಲ್ಲಿ ಇನ್ನು 12 ದಿನ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಎಲ್ಲರೂ ದೇವರ ಮೊರೆ ಹೋಗೋಣ, ಇಂದಿನಿಂದ ಸ್ವಲ್ಪ ಮಳೆಯ ವಾತಾವರಣ ಕಾಣಿಸುತ್ತಿದ್ದು, ಸಮಸ್ಯೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.