ಸಿಂಗಾರ ಸಿರಿಯೇ, ಚುಟು ಚುಟು ಕೋರಿಯೋಗ್ರಫರ್..ಹೀರೋ ಆದ ಭೂಷಣ್ ಮಾಸ್ಟರ್ ಈಗ ಡೈರೆಕ್ಟರ್…
ಬೆಂಗಳೂರು: ಚುಟು ಚುಟು ಅಂತೈತಿ, ಸಿಂಗಾರ ಸಿರಿಯೇ, ಕಣ್ಣು ಹೊಡಿಯಾಕ ಹೀಗೆ ಸಾಕಷ್ಟು ಹಾಡಿನ ಮೂಲಕ ನೃತ್ಯ ಸಂಯೋಜನೆ ಮಾಡಿ ಖ್ಯಾತಿ ಗಳಿಸಿದವರು ಭೂಷಣ್ ಮಾಸ್ಟರ್. ನಟಸಾರ್ವಭೌಮ, ಬೆಲ್ ಬಾಟಂ, ರಾಬರ್ಟ್ ಸೇರಿದಂತೆ 50ಕ್ಕೂ ಅಧಿಕ ಹಾಡುಗಳಿಗೆ ಕೋರಿಯೋಗ್ರಾಫರ್ ಆಗಿ ದುಡಿದಿರುವ ಭೂಷಣ್, ರಾಜ ರಾಣಿ ರೋರರ್ ರಾಕೆಟ್ ಸಿನಿಮಾ ಮೂಲಕ ಹೀರೋ ಆಗಿ ಭರವಸೆ ಮೂಡಿಸಿದ್ದಾರೆ.
ಈಗ ಭೂಷಣ್ ಮಾಸ್ಟರ್ ಮತ್ತೊಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ನೃತ್ಯ ನಿರ್ದೇಶನ, ನಾಯಕನಾಗಿ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಂದರೆ ಭೂಷಣ್ ಮಾಸ್ಟರ್ ಸಿನಿಮಾ ನಿರ್ದೇಶನಕ್ಕಿಳಿದಿದ್ದಾರೆ. ಇಂದು ಅವರ ಹುಟ್ಟುಹಬ್ಬ. ಜನ್ಮದಿನದ ವಿಶೇಷವಾಗಿ ತಮ್ಮ ಮುಂದಿನ ನಡೆ ಬಗ್ಗೆ ಸಣ್ಣ ವಿಡಿಯೋ ತುಣುಕಿನ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸಖತ್ ಫನ್ ಆಗಿ, ಕ್ರಿಯೇಟಿವ್ ಆಗಿ ನಿರ್ದೇಶನದ ಅಖಾಡಕ್ಕಿಳಿಯುವ ಬಗ್ಗೆ ತಿಳಿಸಿದ್ದಾರೆ. ಆದರೆ ಸಿನಿಮಾ ಯಾವುದು? ಯಾವ ಜಾನರ್? ಹೀರೋ? ಮತ್ತಿತರ ಮಾಹಿತಿ ಬಗ್ಗೆ ಗುಟ್ಟುಬಿಟ್ಟುಕೊಟ್ಟಿಲ್ಲ. ಸದ್ಯ ಭೂಷಣ್ ಮಾಸ್ಟರ್ ಕಥೆ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ. ಡಾಕ್ಟರ್, ಇಂಜಿನಿಯರ್ ಆಗಲು ಕೋರ್ಸ್ ಬೇಕು.
ಆದರೆ ಡೈರೆಕ್ಟರ್ ಆಗಲು ಫೋರ್ಸ್ ಎಂಬ ವಿಡಿಯೋ ಝಲಕ್ ಮೂಲಕ ಕಿಕ್ ಕೊಟ್ಟಿರುವ ಅವರು, ಶೀಘ್ರದಲ್ಲೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ಸಮಾಚಾರ ಹಂಚಿಕೊಳ್ಳಲಿದ್ದಾರೆ. ಈಗಾಗಲೇ ಭಾರತೀಯ ಚಿತ್ರರಂಗದ ಮೈಕಲ್ ಜಾಕ್ಸನ್, ನೃತ್ಯ ನಿರ್ದೇಶನ, ನಟನೆ, ನಿರ್ಮಾಣದ ಜೊತೆಗೆ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಈಗ ಅವರ ಹಾದಿಯಲ್ಲೇ ಹೆಜ್ಜೆ ಇಡುತ್ತಿರುವ ಭೂಷಣ್ ಮಾಸ್ಟರ್ ಮೇಲೆ ನಿಮ್ಮದೊಂದು ಆಶೀರ್ವಾದ ಇರಲಿ.