someshwara; ಮಯೂರ್ ಗ್ಲೋಬಲ್ ಶಾಲೆಯ ಧನ್ವಿಗೆ ಸೋಮೇಶ್ವರ ಗಾನಸಿರಿ ಪ್ರಥಮ ಪ್ರಶಸ್ತಿ
ದಾವಣಗೆರೆ: ನಗರದ someshwara ಸೋಮೇಶ್ವರ ವಿದ್ಯಾಲಯದಿಂದ ಹಮ್ಮಿಕೊಂಡಿದ್ದ “ಸೋಮೇಶ್ವರ ಗಾನಸಿರಿ” ಸಂಗೀತ ಕಾರ್ಯಕ್ರಮದಲ್ಲಿ ದಾವಣಗೆರೆಯ ಮಯೂರ್ ಗ್ಲೋಬಲ್ ಶಾಲೆಯ ವಿದ್ಯಾರ್ಥಿನಿ ಕು.ಧನ್ವಿ ಹಿರೇಮಠ ಪ್ರಥಮ ಬಹುಮಾನದೊಂದಿಗೆ ಶ್ರೀ ಸೋಮೇಶ್ವರ ಗಾನಸಿರಿ-2023 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು.
ನಗರದ ನಿಟುವಳ್ಳಿಯಲ್ಲಿರುವ ನೇತ್ರಾವತಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಧನ್ವಿ ಹಿರೇಮಠ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ.ಸುರೇಶ್, ಕಳೆದ 17 ವರ್ಷದಿಂದ ನಮ್ಮ ಸಂಸ್ಥೆ ಈ ವಿನೂತನ ಸಂಗೀತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ವಿನೂತನ ಕಾರ್ಯಕ್ರಮ, ಶಾಲೆಗಳಲ್ಲಿರುವ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಕಾರ್ಯಕ್ರಮವಾಗಿದೆ ಎಂದರು. ನಮ್ಮ ಸಂಸ್ಥೆ ನಡೆಸುವ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಜಿಲ್ಲೆಯ ಹಲವು ಶಾಲೆಗಳ ಮಕ್ಕಳು ಭಾಗವಹಿಸುತ್ತಾರೆ. ಈ ಬಾರಿಯೂ ನಿರೀಕ್ಷೆ ಮೀರಿ ವಿದ್ಯಾರ್ಥಿಗಳು ಆಗಮಿಸಿದ್ದಾರೆ ಎಂದರು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪೋಷಕರಾದ ಶ್ರೀಮತಿ ಜಯಶೀಲಾ ಉದ್ಘಾಟನೆ ಮಾಡಿದರು. ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 5 ಸಾವಿರ ನಗದು, ಸೋಮೇಶ್ವರ ಗಾನಸಿರಿ ಪ್ರಶಸ್ತಿ, ಫಲಕ ಒಳಗೊಂಡ ಪ್ರಥಮ ಬಹುಮಾನಕ್ಕೆ ಮಯೂರ್ ಗ್ಲೋಬಲ್ ಶಾಲೆಯ ಕು. ದಾನವಿ ಆಯ್ಕೆಯಾದರು. ಇನ್ನು 3 ಸಾವಿರ ನಗದು ಪ್ರಶಸ್ತಿ ಫಲಕ ಒಳಗೊಂಡ ದ್ವಿತೀಯ ಬಹುಮಾನ ಕು. ಗೌತಮಿ ಹೆಚ್. ಆರ್. ಪಡೆದರೆ ತೃತೀಯ ಬಹುಮಾನಕ್ಕೆ ಸಮಿತ್.ಎಸ್. ಮುತಾಲಿಕ್, ಧ್ಯಾನ್ ಆಯ್ಕೆಯಾದರು.
ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಖುಷಿ ಟಿ. ಪಿ, ದ್ವಿತೀಯ ಸ್ಥಾನ ಕು. ಗಾನವಿ ಹಾಗೂ ತೃತೀಯ ಸ್ಥಾನಕ್ಕೆ ಕು ಅನ್ವಯಿ, ಕು. ಚಿನ್ಮಯಿ ಎ. ಎನ್ ಆಯ್ಕೆಯಾದರು. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ವಿದುಷಿ ಶ್ರೀಮತಿ ರಜನಿ ರಘುನಾಥ್ ಕುಲಕರ್ಣಿ, ವೀಣಾ ವಿದ್ವಾಂಸರಾದ ಶ್ರೀಮತಿ ಗೀತಾ ಮಾಲತೇಶ್ ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲರಾದ ಶ್ರೀಮತಿ ಪ್ರಭಾವತಿ, ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯಶಿಕ್ಷಕರು, ಬೋಧನಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.