ಕ್ಷಮಿಸಿ ಬಿಡು ಅಪ್ಪು ? ಚನ್ನಗಿರಿಯ ಮುಖ್ಯ ರಸ್ತೆಯೊಂದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಿ ಎಂಬ ಮನವಿಗೆ ಸ್ಪಂದಿಸದ ಪುರಸಭೆ
ದಾವಣಗೆರೆ : ಅಪ್ಪು ಖ್ಯಾತಿಯ ನಟ, ಕನ್ನಡಿಗರ ಆರಾಧ್ಯ ದೈವ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿ ಇನ್ನು ನೆನಪು ಮಾತ್ರ. ಇವರ ಸಾಮಾಜಿಕ ಕಳಕಳಿಯ ಕೆಲಸ ಪ್ರತಿಯೊಬ್ಬರಿಗೂ ಮಾದರಿ. ಜನರ ಒಳಿತಿಗಾಗಿ ಸರಕಾರದಿಂದ ಜಾಹೀರಾತು ಹಣ ಪಡೆಯದೇ ಅದೇ ಹಣವನ್ನು ಜನರ ಒಳಿತಿಗಾಗಿ ಬಳಸಲು ಸೂಚಿಸಿ ಸರ್ಕಾರಕ್ಕೂ ಮಾದರಿಯಾದ ಪುನೀತ್ ರಾಜ್‌ಕುಮಾರ್ ಅವರ ಹೆಸರಲ್ಲಿ ಒಂದು ರಸ್ತೆಗೆ ಅಧಿಕೃತವಾಗಿ ಹೆಸರು ಇಡಲಿಲ್ಲ ಎಂಬುದು ಚನ್ನಗಿರಿ ನಾಗರಿಕರ ಅಳಲು.
ಚನ್ನಗಿರಿ ನಾಗರೀಕರ ಪರವಾಗಿ ಚಂದ್ರಶೇಖರ ಚನ್ನಗಿರಿ ಪ್ರಜಾಕೀಯ ಅವರು ಚನ್ನಗಿರಿಯ ಮುಖ್ಯರಸ್ತೆ ಒಂದಕ್ಕೆ ಪುನೀತ್ ರಾಜ್‌ಕುಮಾರ್ ಎಂದು ನಾಮಕರಣ ಮಾಡುವಂತೆ ನಾಗರಿಕರ ಪರವಾಗಿ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೆ ಒಂದೇ ಒಂದು ಸಭೆ ಮಾಡದೆ ಈ ವಿಷಯದ ಕುರಿತು ತೀರ್ಮಾನ ತಗೊಳ್ಳದೆ ಇರುವುದು ಬೇಸರದ ಸಂಗತಿ. ಹಾಗಾಗಿ ಚಂದ್ರಶೇಖರ ಅವರು ಕ್ಷಮಿಸಿ ಬಿಡು ಅಪ್ಪು ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಮನವಿ ಸಲ್ಲಿಸಿ 5 ತಿಂಗಳಾದರೂ ಸಹ ಚನ್ನಗಿರಿ ಪುರಸಭೆ ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಂಡಿಲ್ಲ. ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಶಾಸಕರು ತಮ್ಮ ಹೆಸರನ್ನು ದಪ್ಪ ಅಕ್ಷರಗಳಲ್ಲಿ ಬರೆಯಲು ಬಿಟ್ಟು, ತಮ್ಮ ಸ್ವಂತ ದುಡಿಮೆ ನಂಬಿ ಜನರ ಹಾಗೂ ಸರ್ಕಾರಕ್ಕೆ ಕೈಲಾದ ಸಹಾಯ ಮಾಡುವ ಹಾಗೂ ದಾನಗಳಲ್ಲೇ ಶ್ರೇಷ್ಠವಾದ ಕಣ್ಣು ದಾನ ಮಾಡುವ ಮೂಲಕ ಇಡೀ ದೇಶಕ್ಕೇ ಮಾದರಿಯಾಗಿರುವ ಇಂತಹ ನಟರ ಹೆಸರನ್ನು ಒಂದು ರಸ್ತೆಗೆ ಇಟ್ಟು ಮುಂದಿನ ಪೀಳಿಗೆಗೆ ಇವರ ಸಾಧನೆ ಬಗ್ಗೆ ಪರಿಚಯ ಮಾಡಿಕೊಡದಿರುವುದು ಎಷ್ಟರ ಮಟ್ಟಿಗೆ ಸರಿ ಎಂದಿದ್ದಾರೆ ಚಂದ್ರಶೇಖರ.
ಅವರು ಕೇವಲ ಚಿತ್ರನಟರಲ್ಲದೇ 2 ಅನಾಥಾಶ್ರಮಗಳು, 46 ಉಚಿತ ಶಾಲೆಗಳು, 16 ವೃದ್ದಾಶ್ರಮಗಳು, 19 ಗೋಶಾಲೆಗಳು, 1800ಕ್ಕಿಂತ ಹೆಚ್ಚು ಮಕ್ಕಳ ಶಿಕ್ಷಣ ಹಾಗೂ ಮೈಸೂರಿನಲ್ಲಿ ಶಕ್ತಿ ಧಾಮ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರ ಜೀವನಕ್ಕೆ ಆಸರೆಯಾಗಿ, ಸಮಾಜಕ್ಕೆ ಅವರದೇ ಆದ ನಿಸ್ವಾರ್ಥ ಸೇವೆಯನ್ನು ಯಾರಿಗೂ ತಿಳಿಯದ ಹಾಗೆ ಸಲ್ಲಿಸುತ್ತಾ ಇದ್ದರು.ಪುನೀತ್ ರಾಜ್‌ಕುಮಾರ್ ಅವರ ತ್ಯಾಗ ಮನೋಭಾವ, ಸಾಮಾಜಿಕ ಕಳಕಳಿ ಗಮನಿಸಿದ ರಾಜ್ಯದ ಅದೆಷ್ಟೋ ಯುವಕರು, ಹಿರಿಯರು, ಹಳ್ಳಿಗರು ಸಾಲು ಸಾಲಾಗಿ ನಿಂತು ಕಣ್ಣು ದಾನ ಮಾಡಲು ಮುಂದಾಗಿದ್ದು ಇತಿಹಾಸವಾಗಿದೆ. ಇಂತಹ ಮಹಾನುಭಾವರಿಗೆ ಗೌರವ ಸಲ್ಲಿಸುವುದು ನಮ್ಮೇಲ್ಲರ ಆದ್ಯ ಕರ್ತವ್ಯ. ಆದ್ದರಿಂದ ಚನ್ನಗಿರಿ ನಗರದಲ್ಲಿಯೂ ಯಾವುದಾದರೂ ಒಂದು ಮುಖ್ಯ ರಸ್ತೆಗೆ ಅಥವಾ ವೃತ್ತಕ್ಕೆ ಅವರ ಹೆಸರನ್ನಿಟ್ಟು ಗೌರವ ಸೂಚಿಸಬೇಕೆಂದು ಚನ್ನಗಿರಿ ನಾಗರೀಕರ ಅಭಿಪ್ರಾಯವಾಗಿದ್ದು, ಮುಂಬರುವ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡಿಸಿ ಕಾನೂನು ಬದ್ಧ ನಾಮಕರಣ ಮಾಡಬೇಕೆಂದು ನವೆಂಬರ್ 6, 2021ರಂದು ಚಂದ್ರಶೇಖರ್ ಮನವಿ ಸಲ್ಲಿಸಿದ್ದರು.