ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಕ್ರೀಡೆಗಳು ಸಹಕಾರಿ – ಉಮಾ ಪ್ರಶಾಂತ್
ಹರಿಹರ: ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವುದರೊಂದಿಗೆ, ಸದೃಢ ಮನಸ್ಸು ಮತ್ತು ದೇಹವನ್ನು ಹೊಂದಲು ಕ್ರೀಡೆಗಳು ಸಹಕಾರಿಯಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ತಾಲೂಕಿನ ಕೊಂಡಜ್ಜಿಯಲ್ಲಿ ನಡೆದ ಪೊಲೀಸ್ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳು ಶೈಕ್ಷಣಿಕವಾಗಿ ತೇರ್ಗಡೆ ಹೊಂದುವುದರ ಕಡೆಗೆ ಅತಿ ಹೆಚ್ಚು ಗಮನವಹಿಸುತ್ತಾರೆ. ಆದರೆ ಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಲು ಕ್ರೀಡೆಗಳು ಪ್ರೋತ್ಸಾಹಕಾರಿ ಎಂಬುದನ್ನು ಮರೆತೆಬಿಡುತ್ತಾರೆ ಎಂದು ಹೇಳಿದರು.
18 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕೃಷ್ಣ ಹೌಸ್ ತಂಡ ಚಾಂಪಿಯನ್ ಪಡೆಯಿತು. ಕಾವೇರಿ ಹೌಸ್ ತಂಡ ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು.
ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜೂನಿಯರ್ ವಿಭಾಗದ ಮ್ಯಾರಥಾನ್ ಸ್ಪರ್ಧಿ ಮಹಮ್ಮದ್ ಝಯಾದ್ ಅವರು ಮಾತನಾಡಿದರು.
ದಾವಣಗೆರೆ ನಗರದ ಡಿವೈಎಸ್’ಪಿ ಮಲ್ಲೇಶ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್’ಪಿ ಪ್ರಕಾಶ್ ಪಿ.ಬಿ., ಸಬ್ ಇನ್ಸ್’ಪೆಕ್ಟರ್ ಸೋಮಶೇಖರ್ ಮಾತನಾಡಿದರು. ಪ್ರಾಚಾರ್ಯ ಹೆಚ್.ವಿ.ಯತೀಶ್ ಆಚಾರ್ ಅಧ್ಯಕ್ಷತೆ ವಹಿಸಿದರು.