ಜನತಾದರ್ಶನ ಅರ್ಜಿಗಳ ವಿಲೇವಾರಿಯಲ್ಲಿ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸಚಿವ ಎಸ್ ಎಸ್ ಮಲ್ಲಿಕಾರ್ಜುನ
ದಾವಣಗೆರೆ: 75 ನೇ ಗಣರಾಜ್ಯೋತ್ಸವದ ಸಂದೇಶವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಭಾಶಯಗಳನ್ನು ಕೋರಿದರು.
ಮಹಾತ್ಮ ಗಾಂಧೀಜಿಯವರು ಸೇರಿದಂತೆ ಇನ್ನೂ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ 1947 ರ ಆಗಸ್ಟ್ 15 ರಂದು ನಮ್ಮ ದೇಶ ಸ್ವಾತಂತ್ರ್ಯ ಕಂಡಿತು. ಬಳಿಕ ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಅವಿರತ ಪರಿಶ್ರಮದ ಫಲವಾಗಿ 1950 ರ ಜನವರಿ 26 ರಂದು ಭಾರತದ ಸಂವಿಧಾನವನ್ನು ಜಾರಿಗೆ ತರಲಾಯಿತು. ಈ ದಿನವನ್ನು ನಾವು ಪ್ರತಿ ವರ್ಷ ಗಣರಾಜ್ಯ ದಿನವನ್ನಾಗಿ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ.
ಭಾರತೀಯರಾದ ನಾವು ದೇಶವನ್ನು ಸರ್ವಸ್ವತಂತ್ರ, ಸಮಾಜವಾದಿ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸುವುದಾಗಿ ಘೋಷಿಸಿದ್ದು, ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯ, ಸಮಾನತೆ ಹಾಗೂ ನ್ಯಾಯವನ್ನು ರಕ್ಷಿಸುವುದಾಗಿ ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ನಮ್ಮ ಭಾರತವು ವೈವಿಧ್ಯತೆಯಲ್ಲಿ ‘ಏಕತೆಯನ್ನು ತೋರುವ ಮೂಲಕ ಜಗತ್ತಿಗೆ ಮಾದರಿ ಅನಿಸಿದೆ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ ಆಳ್ವಿಕೆ. ಸಂವಿಧಾನ ಎಂದರೆ ಹಕ್ಕುಗಳು, ಕರ್ತವ್ಯಗಳು, ತತ್ವಗಳು ಮತ್ತು ಕಾನೂನಿನ ಮೂಲಕ ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯುವ ಪವಿತ್ರ ಗ್ರಂಥ ಸಂವಿಧಾನ. ಎಂತಹ ಸವಾಲುಗಳು ಬಂದರೂ ಅವುಗಳನ್ನು ಎದುರಿಸಿ ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯ ನೆಲೆಗಟ್ಟು ಭದ್ರವಾಗಿ ನಿಂತಿದೆ. ಇದಕ್ಕೆ ಸಂವಿಧಾನದ ಅಡಿಪಾಯ ಹಾಕಿದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನಾವೆಲ್ಲರೂ ಚಿರ ಋಣಿಗಳಾಗಿರಬೇಕು.
ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ ಮತ್ತು ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕಿದೆ. ನಮ್ಮ ದೇಶದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಾಗಿದೆ. ಯುವಜನಾಂಗ ತಮ್ಮ ಹೊಣೆಯರಿತು ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣವಂತರಾಗಿ, ದುಡಿಮೆಯಲ್ಲಿ ನಿರತರಾಗಿ ಜಾತ್ಯಾತೀತ ಭಾವನೆಗಳನ್ನು ಬೆಳೆಸಿಕೊಳ್ಳಬೇಕು.
ನಮ್ಮ ಕರ್ನಾಟಕ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ, ಪಾರಸಿಕ, ಜೈನರು ಸೇರಿದಂತೆ ಎಲ್ಲಾ ಧರ್ಮ, ಜಾತಿ ಜನಾಂಗದವರು ಸಹೋದರರಂತೆ ಬಾಳುತ್ತಿದ್ದೇವೆ.
ಬುದ್ದ ಬಸವ, ಅಂಬೇಡ್ಕರ್ ರವರ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳನ್ನು ದೊರೆಕಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ನುಡಿದಂತೆ
ನಡೆದಿದ್ದು ನೀಡಿದ ಪ್ರಮುಖ ಭರವಸೆಗಳನ್ನು ಈಡೇರಿಸಿದೆ. ಅವುಗಳಲ್ಲಿ ಮೊದಲನೆಯದಾಗಿ
1) ಶಕ್ತಿಯೋಜನೆ:
ನಮ್ಮ ಸರ್ಕಾರ ರಚನೆಯಾದ ತಕ್ಷಣ ಜಾರಿಗೊಳಿಸಿದ ಮೊದಲನೆ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಯಾಗಿರುತ್ತದೆ. ರಾಜ್ಯ ಸಾರಿಗೆ ನಿಗಮದ ಸಾರಿಗೆ ಬಸ್ ಗಳಲ್ಲಿ ರಾಜ್ಯದ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಈ ಯೋಜನೆಯು 2023 ರ ಜೂನ್ 11 ರಿಂದ ಜಾರಿಗೆ ಬಂದಿದೆ. ದಾವಣಗೆರೆ ವಿಭಾಗದಲ್ಲಿ ಇಲ್ಲಿಯವರೆಗೂ ಒಟ್ಟು 2,26,41,100 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಪ್ರಯಾಣ ವೆಚ್ಚವಾಗಿ ಸರ್ಕಾರ ರೂ.61. ಕೋಟಿ 67 ಲಕ್ಷ ನಿಗಮಕ್ಕೆ ನೀಡಿದೆ.
2) ಅನ್ನಭಾಗ್ಯ ಯೋಜನೆ:
ಈ ಹಿಂದೆ ನಮ್ಮದೇ ಸರ್ಕಾರ ಪ್ರತಿ ಸದಸ್ಯರಿಗೆ 10 ಕೆ.ಜಿ.ಅಕ್ಕಿ ನೀಡುತ್ತಿದ್ದು ನಂತರ ಇದು ಇಳಿಕೆಯಾಗಿತ್ತು. ನಮ್ಮ ಸರ್ಕಾರ ಮತ್ತೆ 10 ಕೆ.ಜಿ.ಅಕ್ಕಿ ನೀಡಲು ತೀರ್ಮಾನಿಸಿ 5 ಕೆ.ಜಿ.ಅಕ್ಕಿ ಮತ್ತು 5 ಕೆ.ಜಿ. ಅಕ್ಕಿ ಬದಲಾಗಿ ರೂ.170 ಹಣವನ್ನು ನೇರವಾಗಿ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮಾ ಮಾಡಲಾಗುತ್ತಿದ್ದು ಜಿಲ್ಲೆಯಲ್ಲಿ ಮೂರು ಲಕ್ಷ ಮುವತ್ನಾಲ್ಕು ಸಾವಿರ ಬಿಪಿಎಲ್ ಪಡಿತರ ಚೀಟಿದಾರರಿಗೆ ಈ ಸೌಲಭ್ಯ ಪಡೆಯುತ್ತಿದ್ದಾರೆ. ಅಲ್ಲದೇ 45,521 ಅಂತ್ಯೋದಯ ಪಡಿತರ ಚೀಟಿಗಳಿಗೆ ತಲಾ 35 ಕೆ.ಜಿ. ಆಹಾರಧಾನ್ಯ ವಿತರಿಸಲಾಗುತ್ತಿದೆ.
3) ಗೃಹಜ್ಯೋತಿ ಯೋಜನೆ:
ಕರ್ನಾಟಕ ಸರ್ಕಾರದ 3 ನೇ ಮಹತ್ವದ ಗ್ಯಾರಂಟಿ ಯೋಜನೆಯಾದ ಗೃಹಜ್ಯೋತಿ. ಯೋಜನೆಯಡಿ ರಾಜ್ಯದಲ್ಲಿನ ಪ್ರತಿ ಮನೆಗೆ ತಿಂಗಳಿಗೆ ಗರಿಷ್ಠ 200 ಯುನಿಟ್ ಗಳ ವರೆಗಿನ ಬಳಕೆಯ ಮಿತಿಯಲ್ಲಿ ಶೂನ್ಯ ವಿದ್ಯುತ್ ಬಿಲ್ ಒದಗಿಸಲಾಗುತ್ತದೆ. ದಾವಣಗೆರೆ ಜಿಲ್ಲೆಯಲ್ಲಿ 4,81,870 ಬೆಸ್ಕಾಂ ಗ್ರಾಹಕರಿದ್ದು ಇದರಲ್ಲಿ ಗೃಹಜ್ಯೋತಿ ಯೋಜನೆಯಡಿ 4,24,057 ಗ್ರಾಹಕರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
4) ಗೃಹಲಕ್ಷ್ಮಿ ಯೋಜನೆ:
ಕರ್ನಾಟಕ ಸರ್ಕಾರದ 4ನೇ ಮಹತ್ವದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯಡಿ ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಗೃಹಲಕ್ಷ್ಮಿಯೋಜನೆಯಡಿ 3,38,867 ಕುಟುಂಬದ ಯಜಮಾನಿಯರ ಖಾತೆಗೆ ನೇರವಾಗಿ ಪ್ರತಿ ತಿಂಗಳು ಎರಡು ಸಾವಿರದಂತೆ ಇಲ್ಲಿಯವರೆಗೆ ರೂ. 279.00 ಕೋಟಿ ಜಮೆ ಮಾಡಲಾಗಿದೆ.
5) ಯುವನಿಧಿ ಯೋಜನೆ:
ಕರ್ನಾಟಕ ಸರ್ಕಾರದ 5ನೇ ಮಹತ್ವದ ಗ್ಯಾರಂಟಿ ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗಿ ಪದವೀಧರ ಯುವಕ-ಯುವತಿಯರಿಗೆ ರೂ. 3000 ಗಳನ್ನು ಹಾಗೂ ಡಿಪ್ಲಮೋದಾರರಿಗೆ ರೂ. 1500 ಗಳನ್ನು ಮಾಸಿಕವಾಗಿ ಎರಡು ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಜನವರಿ 12 ರಿಂದ ಯೋಜನೆಗೆ ಚಾಲನೆ ನೀಡಿದ್ದು ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವೆರಗೆ 3616 ನಿರುದ್ಯೋಗಿಗಳು ನೊಂದಾಯಿಸಿಕೊಂಡಿದ್ದಾರೆ.
ಕಂದಾಯ ಇಲಾಖೆ: ಜಿಲ್ಲೆಯ ವಾಡಿಕೆ 659 ಮಿ.ಮೀ ಮಳೆಗೆ 470 ಮಿ.ಮೀ ಸರಾಸರಿ
ಮಳೆಯಾಗಿರುತ್ತದೆ. ಇದರಿಂದ ಮುಂಗಾರು, ಹಿಂಗಾರಿನಲ್ಲಿ ತೀವ್ರ ಮಳೆ ಕೊರತೆಯಾಗಿರುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ. ಈಗಾಗಲೇ ಶಾಸಕರ ಅಧ್ಯಕ್ಷತೆಯಲ್ಲಿ ಬರ ಪರಿಹಾರ ಟಾಸ್ಕ್ ಪೋರ್ಸ್ ಸಮಿತಿ ರಚಿಸಿ, ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಬರ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಸನ್ಮಾನ್ಯ ಮುಖ್ಯಮಂತ್ರಿಯವರ, ನಿರ್ದೇಶನದಂತೆ ಕಂದಾಯ ಸಚಿವರು, ಕೃಷಿ ಸಚಿವರು ಹಾಗೂ ಉಸ್ತುವಾರಿ ಸಚಿವನಾಗಿ ನಾನು ಸಹ ಬರಪೀಡಿತ ತಾಲ್ಲೂಕುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆ ಕೊರತೆಯಿಂದ ಜಿಲ್ಲೆಯಲ್ಲಿ 1,50,621-00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು ಬೆಳೆಸಮೀಕ್ಷೆ ಹಾಗೂ 481321 ಪ್ಲಾಟ್‌ಗಳಲ್ಲಿ ಪೂಟ್ಸ್ ತಂತ್ರಾಂಶದ ಮೂಲಕ 4,13,888 ಪ್ಲಾಟ್‌ಗಳನ್ನು ನೊಂದಾಯಿಸಿ ಜಿಲ್ಲೆಯಲ್ಲಿ ಈವರೆಗೆ 74,188 ರೈತರಿಗೆ ಮೊದಲ ಹಂತವಾಗಿ ರೂ.2000 ಗಳಂತೆ ಒಟ್ಟು ರೂ.14.21 ಕೋಟಿ ಬರ ಪರಿಹಾರದ ಹಣ ಪಾವತಿಸಲಾಗಿದೆ. ತುರ್ತು ಬರ ಕಾಮಗಾರಿಗಳಿಗಾಗಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 18.78 ಕೋಟಿ ಅನುದಾನ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಬರ ಪರಿಹಾರ ಕಾಮಗಾರಿಗಳಿಗಾಗಿ ಯಾವುದೇ ಅನುದಾನದ ಕೊರತೆ ಇರುವುದಿಲ್ಲ.
ಜನತಾದರ್ಶನ ಅರ್ಜಿಗಳ ವಿಲೇವಾರಿಯಲ್ಲಿ ದಾವಣಗೆರೆ ಜಿಲ್ಲೆ ರಾಜ್ಯಕ್ಕೆ ಪ್ರಥಮಸಚಿವ ಎಸ್ ಎಸ್ ಮಲ್ಲಿಕಾರ್ಜುನ
ಮಾನ್ಯ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮವನ್ನು ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹಮ್ಮಿಕೊಂಡು ಸಾರ್ವಜನಿಕರಿಂದ ಒಟ್ಟು 1585 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ ಇದರಲ್ಲಿ 1580 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದ್ದು ದಾವಣಗೆರೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ.
ಉದ್ಯೋಗ ಮೇಳ;
ನಿರುದ್ಯೋಗಿ ಯುವ ಜನರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಮಾಡಿ 80 ಕ್ಕೂ ಹೆಚ್ಚಿನ ಕಂಪನಿಗಳು ಭಾಗವಹಿಸುವಂತೆ ಮಾಡುವ ಮೂಲಕ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಲಾಗಿದೆ.
ಗ್ರಾಮಠಾಣ ಇ-ಸ್ವತ್ತು ಇತ್ಯರ್ಥ:
ಚನ್ನಗಿರಿ ತಾಲ್ಲೂಕಿನ ಆಲೂರು ಗ್ರಾಮ ಗ್ರಾಮಠಾಣಾ ವ್ಯಾಪ್ತಿಗೆ ಒಳಪಡದೆ ಸಮಸ್ಯೆಯಾಗಿದ್ದ ಇ-ಸ್ವತ್ತು ವಿತರಣೆ ಕ್ರಮ ಮತ್ತು ದಾವಣಗೆರೆ ತಾಲ್ಲೂಕು ಮಾಳಗೊಂಡನಹಳ್ಳಿಯಲ್ಲಿ ಅಮೃತನಗರ ಕಂದಾಯ ಗ್ರಾಮ ಮಾಡಿ ಹಕ್ಕು ಪತ್ರ ವಿತರಣೆಗೆ ಕ್ರಮ ವಹಿಸಿದೆ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ;
ಈ ವರ್ಷ ಜಿಲ್ಲೆಗೆ ರೂ. 195.39 ಕೋಟಿ ಮೊತ್ತಕ್ಕೆ ಕ್ರಿಯಾ ಯೋಜನೆ ರೂಪಿಸಿ ಇಲ್ಲಿಯವರೆಗೆ ಒಟ್ಟು 27.35 ಲಕ್ಷ ಮಾನವದಿನ ಸೃಜನೆ ಮಾಡಿ ರೂ. 114.16 ಕೋಟಿ ವೆಚ್ಚ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 125 ಅಮೃತ ಸರೋವರ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಟ್ಟು 305 ಗ್ರಾಮಗಳಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ರೂ.581 ಕೋಟಿ ಮೊತ್ತ ಕುಡಿಯುವ ನೀರಿನ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ.
ಜಾನುವಾರುಗಳಿಗೆ ಮೇವು;
ಜಿಲ್ಲೆಯಲ್ಲಿ 3.29 ಲಕ್ಷ ಜಾನುವಾರುಗಳು, 3.4 ಲಕ್ಷ ಕುರಿ, ಮೇಕೆಗಳಿದ್ದು ಮುಂಗಾರು ಮಳೆ ಕೊರತೆಯಾದರೂ ಸಹ ಮುಂದಿನ 44 ವಾರಗಳಿಗಾಗುವಷ್ಟು ಮೇವಿನ ಲಭ್ಯತೆ ಇದೆ. 4694 ರೈತರಿಗೆ ಮೇವು ಬೆಳೆಯಲು ಮಿನಿ ಕಿಟ್ ಗಳನ್ನು ವಿತರಿಸಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ :
ಜಿಲ್ಲೆಯಲ್ಲಿ ವೈಜ್ಞಾನಿಕ ತಾಂತ್ರಿಕ ವಿಧಾನಗಳನ್ನು ಅಳವಡಿಸಿಕೊಂಡು ಸುಸ್ಥಿರ, ಸುರಕ್ಷಿತ ಮತ್ತು ವೈಜ್ಞಾನಿಕ ಗಣಿಗಾರಿಕೆಯನ್ನು ಉತ್ತೇಜಿಸಲು ಕ್ರಮ ವಹಿಸಲಾಗುತ್ತದೆ.
ತೋಟಗಾರಿಕೆ ಇಲಾಖೆ:
ಜಿಲ್ಲೆಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ, ಪ್ರಾಥಮಿಕ ಸಂಸ್ಕರಣಾ ಘಟಕ, ಪ್ಯಾಕ್ ಹೌಸ್‌ಗಳು, ಈರುಳ್ಳಿ ಶೇಖರಣೆ ಘಟಕ, ಹಣ್ಣು ಮಾಗಿಸುವ ಘಟಕ, ಶೀತಲಗೃಹ, ಹಸಿರು ಮನೆ, ನೆರಳು ಪರದೆಗಳ ನಿರ್ಮಾಣಕ್ಕೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ರೂ. 717.11 ಲಕ್ಷ ಬಿಡುಗಡೆಯಾಗಿದ್ದು ಒಟ್ಟು 2326 ಫಲಾನುಭವಿಗಳಿಗೆ ರೂ. 625.25 ಲಕ್ಷ ಸಹಾಯಧನ ವಿತರಿಸಲಾಗಿದೆ.
ಹನಿನೀರಾವರಿ ಸಹಾಯಧನಕ್ಕಾಗಿ ಜಿಲ್ಲೆಗೆ ಒಟ್ಟು 820.69 ಲಕ್ಷಗಳು ಬಿಡುಗಡೆಯಾಗಿದ್ದು, ಹನಿನೀರಾವರಿ ಅಳವಡಿಸಿಕೊಂಡ’ ಒಟ್ಟು 1165 ರೈತ ಫಲಾನುಭವಿಗಳಿಗೆ ರೂ.736.42 ಲಕ್ಷ ಸಹಾಯಧನ ವಿತರಿಸಲಾಗಿದೆ. ತೋಟಗಾರಿಕೆಯಲ್ಲಿ ಯಾಂತ್ರಿಕರಣ ಕಾರ್ಯಕ್ರಮಕ್ಕಾಗಿ ವಿವಿಧ ಯಂತ್ರೋಪಕರಣಗಳನ್ನು ಖರೀದಿಸಿದ ರೈತರಿಗೆ ಸಹಾಯಧನ ನೀಡಲಾಗುತ್ತಿದ್ದು, ಒಟ್ಟು 262 ರೈತ
ಮಹಾನಗರ ಪಾಲಿಕೆ ವ್ಯಾಪ್ತಿ:
ಬಡಾವಣೆಗಳಿಗೆ 24*7 ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ.
ಫಲಾನುಭವಿಗಳಿಗೆ ರೂ.118.00 ಲಕ್ಷಗಳ ಸಹಾಯಧನ ವಿತರಿಸಲಾಗಿದೆ. ಜಲಸಿರಿ ಯೋಜನೆಯಡಿ ನಗರದ 50 ವಲಯಗಳಲ್ಲಿ ನೀರು ಸರಬರಾಜು ಮಾಡುವ ಕಾಮಗಾರಿಗಳು ಕೆಲವು ಇನ್ನೂ ಪ್ರಗತಿಯಲ್ಲಿದ್ದು ಮಾರ್ಚ್ ವೇಳೆಗೆ ಪಾಲಿಕೆಯ ಎಲ್ಲಾ
ಪಾಲಿಕೆಯ ಖಾಯಂ ಪೌರಕಾರ್ಮಿಕರಿಗೆ ಜಿ+1 ಮಾದರಿಯಲ್ಲಿ 381 ಮನೆಗಳನ್ನು ನಿರ್ಮಾಣ ಮಾಡಿ ಹಸ್ತಾಂತರ ಮಾಡಿದೆ. ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ ರೂ.125.00 ಕೋಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಸ್ವಚ್ಛ ಸರ್ವೇಕ್ಷಣ-2023 ಸಮೀಕ್ಷೆಯಲ್ಲಿ ದಾವಣಗೆರೆ ನಗರಕ್ಕೆ ರಾಜ್ಯದ 6 ನೇ ಸ್ವಚ್ಛ ನಗರವೆಂಬ ಶ್ರೇಯಾಂಕ ಲಭಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು:
ದಾವಣಗೆರೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗೆ ನಗರೋತ್ಥಾನ 4 ನೇ ಹಂತದಲ್ಲಿ ಹರಿಹರ ನಗರಸಭೆಗೆ- ರೂ.30.00 ಕೋಟಿ, ಚನ್ನಗಿರಿ, ಮಲೆಬೆನ್ನೂರು ಮತ್ತು ಹೊನ್ನಾಳಿ ಪುರಸಭೆಗಳಿಗೆ ತಲಾ ರೂ.10.00 ಕೋಟಿ ಹಾಗೂ ಜಗಳೂರು, ನ್ಯಾಮತಿ ಪಟ್ಟಣ ಪಂಚಾಯಿತಿಗಳಿಗೆ 2.5.00 ಕೋಟಿ, ಹಂಚಿಕೆಯಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದ್ದು, ಬಿಡುಗಡೆಯಾದ ಅನುದಾನ ಪೂರ್ಣ ಬಳಸಲಾಗಿದೆ.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು ರೂ. 1000 ಕೋಟಿ ಅನುದಾನದಲ್ಲಿ ಒಟ್ಟು 114 ಕಾಮಗಾರಿಗಳನ್ನು ತೆಗೆದುಕೊಂಡಿದ್ದು 104 ಪೂರ್ಣವಾಗಿವೆ. 10 ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು ಸ್ಮಾರ್ಟ್ ಯೋಜನೆ ಜೂನ್ 2024 ಮುಕ್ತಾಯಗೊಳ್ಳಲಿರುವುದರಿಂದ ಬರುವ ಮಾರ್ಚ್ ಒಳಗೆ ಎಲ್ಲಾ ಕಾಮಗಾರಿ ಪೂರ್ಣವಾಗಲಿವೆ.
ಕಲ್ಯಾಣ ಇಲಾಖೆ:
ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳಿಂದ ನಡೆಸುತ್ತಿರುವ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಒಟ್ಟು 167 ವಿದ್ಯಾರ್ಥಿ ನಿಲಯ ಮತ್ತು 23 ಮುರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಜಿಲ್ಲೆಯ 25500 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ನಿಲಯ ಕಟ್ಟಡಗಳ ನಿರ್ಮಾಣಕ್ಕಾಗಿ 15 ನಿವೇಶನಗಳನ್ನು ಒದಗಿಸಲಾಗಿದೆ.
ಆರೋಗ್ಯ ಇಲಾಖೆ;
ಆಯುಷ್ಮಾನ್ ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಕಾರ್ಡ್ ವಿತರಿಸಲಾಗುತ್ತಿದ್ದು, ಬಿ.ಪಿ.ಎಲ್.ಹೊಂದಿದ ಕುಟುಂಬಗಳಿಗೆ 5 ಲಕ್ಷ ಉಚಿತ, ಎ.ಪಿ.ಎಲ್.ಕುಟುಂಬಗಳಿಗೂ ಸಹ ಪಾವತಿ ಆಧಾರದ ಮೇಲೆ ರೂ.1.50 ಲಕ್ಷ ನೀಡಲಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆ ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ 100 ಹಾಸಿಗೆಗಳಿಂದ 250 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗಿದೆ.
ನಮ್ಮ ಸರ್ಕಾರವು ಜಿಲ್ಲೆಯನ್ನು ಮತ್ತಷ್ಟು ಅಭಿವೃದ್ಧಿಯತ್ತಕೊಂಡೊಯ್ಯಲು ಬದ್ದವಾಗಿದ್ದು ಮುಂಬರುವ ದಿನಗಳಲ್ಲಿ ಎಲ್ಲೆಲ್ಲಿ ಅಭಿವೃದ್ಧಿಯಾಗಬೇಕೆಂದು ಗುರುತಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳಲ್ಲಿನ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ.
ವಿಶ್ವದಲ್ಲೆ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದಲ್ಲಿ 2023 ರ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ರಾಜ್ಯದಲ್ಲಿಯೇ ವಿನೂತನವಾಗಿ ಆಚರಿಸಲಾಗಿದೆ. ಅಲ್ಲದೆ ನಮ್ಮ ಘನ ಸರ್ಕಾರವು ಸಂವಿಧಾನದ ಸದಾಶಯಗಳನ್ನು ಜನಸಾಮಾನ್ಯರಿಗೂ ತಲುಪಿಸಬೇಕೆನ್ನುವ ಮಹದುದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಇಂದಿನಿಂದ ಫೆಬ್ರವರಿ 23 ರ ವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯ 194 ಗ್ರಾಮ ಪಂಚಾಯಿತಿಗಳು ಮತ್ತು 7 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹಜಾಥಾ ಸಂಚರಿಸಲಿದೆ.
ಗ್ರಾಮಗಳಿಗೆ ಜಾಥಾ ಬಂದಾಗ, ಸಾರ್ವಜನಿಕರು ಭಾಗಿಯಾಗುವ ಮೂಲಕ ಸಂವಿಧಾನದ ಮೌಲ್ಯಗಳನ್ನು ತಿಳಿದುಕೊಂಡು ನಮ್ಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಲು ಮನವಿ ಮಾಡುತ್ತಾ ಮತ್ತೊಮ್ಮೆ, ತಮ್ಮೆಲ್ಲರಿಗೂ 75 ನೇ ಗಣರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು.