ಜನರ ಮನಸ್ಸಲ್ಲಿ ಉಳಿಯುವಂತಾ 38 ನೇ ಪತ್ರಕರ್ತರ ಸಮ್ಮೇಳನ ಮಾಡೋಣ ಸಚಿವ ಎಸ್.ಎಸ್.ಮಲ್ಲಿಕಾರ್ಜುನ

ಪತ್ರಕರ್ತರ ರಾಜ್ಯ ಮಟ್ಟದ 38ನೇ ಸಮ್ಮೇಳನ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ 

ದಾವಣಗೆರೆ: ಫೆಬ್ರವರಿ 3 ಮತ್ತು 4ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ 38ನೇ ಸಮ್ಮೇಳನ ರಾಜ್ಯದಿಂದ ಬರುವ ಪತ್ರಕರ್ತರ ಮನಸ್ಸಿನಲ್ಲಿ ಉಳಿಯುವಂತಹ ಸಮ್ಮೇಳನ ಮಾಡೋಣ ಎಂದು ಸಮ್ಮೇಳನದ ಗೌರವ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.

ಜೆಜೆಎಂ ಮೆಡಿಕಲ್ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾಲ್ಕೈದು ಬಾರಿ ನನ್ನನ್ನು ಭೇಟಿ ಮಾಡಿ ಸಮ್ಮೇಳನದ ಬಗ್ಗೆ ಚರ್ಚೆ ಮಾಡಿದ್ದೀರಿ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಮ್ಮೇಳನಕ್ಕೆ ಬೇಕಾದ ಎಲ್ಲಾ ಸಿದ್ಧತೆ ಮಾಡಲು ಸೂಚನೆ ನೀಡಿದ್ದೇನೆ. ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿಗಳು ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಸಮ್ಮೇಳನಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.ಒಳ್ಳೆಯ ಸಮ್ಮೇಳನಕ್ಕೆ ಇಲ್ಲಿನ ಪತ್ರಕರ್ತರ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತಿದ್ದು, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಮ್ಮೇಳನ ಯಶಸ್ವಿಗೆ ಶ್ರಮಿಸೋಣ ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮಾತನಾಡಿ, ಸಮ್ಮೇಳನ ಪೂರ್ವಭಾವಿಯಾಗಿ ಎರಡು ಬಾರಿ ಸಭೆ ಮಾಡಲಾಗಿದೆ. ಈಗಾಗಲೇ ಮೂರು ತಂಡಗಳನ್ನು ರಚಿಸಿದ್ದು, ಒಂದು ತಂಡ ಸರ್ಕಾರಿ ವ್ಯಾಪ್ತಿಯಲ್ಲಿ ಬರುವ ಗೆಸ್ಟ್ ಹೌಸ್ ನಲ್ಲಿ 45 ರಿಂದ 50 ರೂಂಗಳನ್ನು ವಿಐಪಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲು ಪಟ್ಟಿ ಮಾಡಲಾಗಿದೆ. ಕ್ರೀಡಾ ವಸತಿ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳಲ್ಲಿ 200 ರೂಂ, ಕೊಂಡಜ್ಜಿಯಲ್ಲಿ 70 ರಿಂದ 75 ರೂಂ, ದಾವಣಗೆರೆ ವಿಶ್ವವಿದ್ಯಾಲಯದಲ್ಲಿ 30 ರೂಂ ಸೇರಿ 600 ರೂಂಗಳನ್ನು ಕಲ್ಪಿಸಲು ವ್ಯವಸ್ಥೆ ಮಾಡಲಿದ್ದು, ಒಟ್ಟು ರೂಂಗಳ ಪಟ್ಟಿ ಮಾಡಿ ಅಧಿಕಾರಿಗಳು ನೀಡಲಿದ್ದಾರೆ. ನೋಡಲ್ ಅಧಿಕಾರಿಗಳನ್ನು ನೇಮಿಸುತ್ತೇವೆ. ಪತ್ರಕರ್ತರ ಸಮನ್ವಯತೆಯಿಂದ ಕೆಲಸ ಮಾಡಿ ಸಮ್ಮೇಳನ ಯಶಸ್ವಿಗೆ ಶ್ರಮಿಸೋಣ ಎಂದರು.

ಜಿಪಂ ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಸಮ್ಮೇಳನ ನಡೆಯುವ ಸ್ಥಳದಲ್ಲಿ ಸ್ಟಾಲ್ ಹಾಕಿ, ಸ್ವಸಹಾಯ ಸಂಘಗಳಿಂದ ಸಂತೆ, ನರೇಗಾ, ಸ್ವಚ್ಛತಾ ಅಭಿಯಾನ ಸೇರಿದಂತೆ ವಿವಿಧ ಇಲಾಖೆಗಳಿಂದ ಜಾಗೃತಿ ಮೂಡಿಸುವ ಜೊತೆಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸುವುದಾಗಿ ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಮೈಸೂರು, ಮಂಗಳೂರು, ಕಲ್ಬುರ್ಗಿ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ನಡೆದ ಸಮ್ಮೇಳನಗಳು ಒಂದಕ್ಕಿಂತ ಒಂದು ಭಿನ್ನವಾಗಿ ನಡೆದು ನೆನಪಿನಲ್ಲಿ ಉಳಿಯುವಂತಹ ಸಮ್ಮೇಳನ ನಡೆದಿವೆ ಅದೇ ರೀತಿಯಲ್ಲಿ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಮೂರು ದಶಕಗಳ ನಂತರ ನಡೆಯುವ ಸಮ್ಮೇಳನ ಕೂಡ ನನೆಪಿನಲ್ಲಿ ಉಳಿಯುವಂತೆ ಮಾಡಬೇಕಾಗಿದೆ. ಎಲ್ಲರ ಸಹಕಾರ ಅವಶ್ಯವಾಗಿದೆ ಎಂದರು.
ರಾಜ್ಯ ಸೇರಿದಂತೆ ಬಾಂಗ್ಲಾ, ಬರ್ಮಾ, ಶ್ರೀಲಂಕಾದಿಂದ ಅತಿಥಿಗಳು ದಾವಣಗೆರೆ ಸಮ್ಮೇಳನಕ್ಕೆ ಬರಲಿದ್ದಾರೆ. ಅಲ್ಲದೇ ಸಾವಿರಾರು ಪ್ರತಿನಿಧಿಗಳು ಆಗಮಿಸಲಿದ್ದಾರೆ. ನಾವು ಮನೆಗೆ ಬಂದ ಅತಿಥಿಗಳಿಗೆ ಹೇಗೆ ಸ್ವಾಗತ ನೀಡುತ್ತೆವೆಯೋ ಅದೇ ರೀತಿಯಾಗಿ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳನ್ನು ಬರಮಾಡಿಕೊಂಡು ಅವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ಮೂಲಕ ನೆನಪಿನಲ್ಲಿ ಉಳಿಯುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಈಗಾಗಲೇ ಹಲವಾರು ಸಮಿತಿಗಳ ಸಭೆ ನಡೆದಿವೆ. ಶೇ.90ರಷ್ಟು ಭಾಗ ಸಮ್ಮೇಳನ ಸಿದ್ಧತೆಗಳು ಮುಗಿದಿವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಡಿಸಿ ಪಿ.ಎನ್.ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ದೂಡಾ ಆಯುಕ್ತ ಬಸವನಗೌಡ ಕೊಟ್ಟೂರು, ಉಪವಿಭಾಗಾಧಿಕಾರಿ ದುರ್ಗಾಶ್ರೀ, ತಹಸೀಲ್ದಾರ್ ಅಶ್ವತ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಸುಂಕದ್, ಸ್ಮಾಟ್೯ಸಿಟಿ ಎಂಡಿ ವೀರೇಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ರವಿಚಂದ್ರ, ವಾರ್ತಾ ಅಧಿಕಾರಿ ಧನಂಜಯ್ಯ,

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್ , ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್.ವಿ.ಬದರಿನಾಥ್, ಕಾರ್ಯದರ್ಶಿ ಜೆ.ಎಸ್.ವೀರೇಶ್, ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಪ್ಪ, ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಕೆ.ಒಡೆಯರ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಸಿ.ವರದರಾಜ್, ಖಜಾಂಚಿ ಮಧು ನಾಗರಾಜ್, ಕಾರ್ಯದರ್ಶಿ ಎ.ಎನ್.ನಿಂಗಪ್ಪ, ಪಿಆರ್ ಒ ಡಿ.ರಂಗನಾಥ್ ರಾವ್ , ಸಂಯುಕ್ತ ಕರ್ನಾಟಕ ಸ್ಥಾನಿಕ ಸಂಪಾದಕ ಮಂಜುನಾಥ್ ಗೌರಕ್ಕಳವರ, ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, ಹಿರಿಯ ಪತ್ರಕರ್ತರಾದ ಎಚ್.ಬಿ.ಮಂಜುನಾಥ್, ಬಾ.ಮ.ಬಸವರಾಜಯ್ಯ, ಮಂಜು ಯಳನಾಡು, ಬಸವರಾಜ ದೊಡ್ಡಮನಿ, ನಾಗರಾಜ ಬಡದಾಳ್, ತಾರನಾಥ್, ರಮೇಶ್ ಜಾಗೀರ್ ದಾರ್ ಹೆಚ್ ಎಂ ಪಿ ಕುಮಾರ್,  ಸೇರಿದಂತೆ ಪತ್ರಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!