ಸಿಲಿಂಡರ್ ದರ ಹೆಚ್ಚಳಕ್ಕೆ ಎಸ್‌ಯುಸಿಐಸಿ ಖಂಡನೆ

ಸಿಲಿಂಡರ್ ದರ ಹೆಚ್ಚಳಕ್ಕೆ ಎಸ್‌ಯುಸಿಐಸಿ ಖಂಡನೆ

ದಾವಣಗೆರೆ: ಈಗಾಗಲೇ ದಿವಾಳಿಯಾಗಿರುವ ಜನರ ಮೇಲೆ ಗೃಹಬಳಕೆಯ ಅನಿಲ ಸಿಲಿಂಡರ್ ಮೇಲೆ ರೂ 50ರ ದರ ಹೆಚ್ಚಳದ ಹೇರಿಕೆಯನ್ನು ನಾವು ಕಟುವಾಗಿ ಖಂಡಿಸುವುದಾಗಿ ಎಸ್ ಯು ಸಿ ಐ- ಸಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳಿ ಹೇಳಿದ್ದಾರೆ.

ಇದು ಕಳೆದ 12 ತಿಂಗಳಲ್ಲಿ 6ನೇ ಏರಿಕೆಯಾಗಿದೆ. ಈ ಬಜೆಟಿನಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಅಡುಗೆ ಅನಿಲದ ಸಬ್ಸಿಡಿಯನ್ನು ಶೇ. 75ರಷ್ಟು ಕಡಿತ ಮಾಡಿರುವುದರಿಂದ ಈ ದರ ಏರಿಕೆಯು ತೀರಾ ಅನಿರೀಕ್ಷಿತವೇನು ಅಲ್ಲ. ಆದರೆ ಜಾಗತಿಕವಾಗಿ ಕಚ್ಚಾತೈಲದ ದರ ಇಳಿಕೆಯಾಗಿದೆ ಮತ್ತು ಭಾರತವು ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲವನ್ನು ಆಮದು ಮಾಡುವ ಪ್ರಮಾಣವು ಹೆಚ್ಚಾಗಿದೆ ಎಂಬುದನ್ನು ನಾವು ಗಮನಿಸಬೇಕು.

ಬಡವರಿಗೆ ‘ಉಜ್ವಲ’ ಯೋಜನೆಯಡಿ ಉಚಿತವಾಗಿ ಅನಿಲ ಸಂಪರ್ಕ ನೀಡಲಾಗಿದೆ ಎಂದು ನಮ್ಮ ಪ್ರಧಾನಿಗಳು ಕೊಚ್ಚಿಕೋಳ್ಳುತ್ತಾರೆ, ಆದರೆ ಈ ಉಜ್ವಲ ಫಲಾನುಭವಿಗಳು ಕೂಡ ಸಿಲಿಂಡರಿಗೆ ಇದೇ ಮಾರುಕಟ್ಟೆ ದರವನ್ನು ಕೊಟ್ಟು ಖರೀದಿಸಬೇಕು ಎಂಬುದನ್ನು ಜಾಣ್ಮೆಯಿಂದ ಮರೆಮಾಚುತ್ತಾರೆ.

ವಾಣಿಜ್ಯ ಬಳಕೆಯ ಸಿಲಿಂಡರುಗಳ ಬೆಲೆಯನ್ನು ರೂ. 352ರಷ್ಟು ತೀವ್ರವಾಗಿ ಏರಿಕೆ ಮಾಡಿದ್ದು, ಪರಿಣಾಮವಾಗಿ ಹೋಟೆಲುಗಳು ಮತ್ತಿತರ ಉದ್ಯಮಗಳ ಮಾಲಿಕರು ಈ ಹೊರೆಯನ್ನು ನೇರವಾಗಿ ಸಾಮಾನ್ಯ ಗ್ರಾಹಕರಿಗೇ ವರ್ಗಾಯಿಸುತ್ತಾರೆ. ಇದರಿಂದ ಪರೋಕ್ಷ ತೆರಿಗೆಗಳು ಮೂಲಕ ಮತ್ತೆ ಸರ್ಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತದೆ. ಈ ಬಿಸಿ ಎಲ್ಲ ವರ್ಗದ ಜನರನ್ನೂ ತಟ್ಟುತ್ತದೆ, ಆದರೆ ಅತಿ ಶ್ರೀಮಂತರು ಕಡಿಮೆ ಆದಾಯ ತೆರಿಗೆಯ ಸುಖವನ್ನು ಅನುಭವಿಸುತ್ತಾ, ತಮ್ಮ ಸಂಪತ್ತನ್ನು ಹಿಗ್ಗಿಸಿ ಕೊಳ್ಳುತ್ತಾರೆ.

ಜನಸಾಮಾನ್ಯರು ಬಳಸುವ ಈ ಅಡುಗೆ‌ ಅನಿಲದ ದರ ಏರಿಕೆ ಮಾಡಿರುವ ಬಿಜೆಪಿ ಸರ್ಕಾರದ ಕ್ರಮವನ್ನು ಖಂಡಿಸುತ್ತಾ, ಇದರ ವಿರುದ್ಧ ಹೋರಾಡಲು ಮುಂದಾಗುವಂತೆ ಜನರಿಗೆ ಅವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!