ಎಸ್ಸೆಸ್-ಎಸ್ಸೆಸ್ಸೆಂಗೆ ಸ್ವಕುಳ ಸಾಳಿ ಸಮಾಜದ ಬೆಂಬಲ

ಎಸ್ಸೆಸ್-ಎಸ್ಸೆಸ್ಸೆಂಗೆ ಸ್ವಕುಳ ಸಾಳಿ ಸಮಾಜದ ಬೆಂಬಲ

ದಾವಣಗೆರೆ : ದಾವಣಗೆರೆ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳನ್ನು ಬೆಂಬಲಿಸಲು ಸ್ವಕುಳ ಸಾಳಿ ಸಮಾಜ ತೀರ್ಮಾನಿಸಿದೆ.
ನಗರದ ಶ್ರೀ ವೀರ ಮದಕರಿ ನಾಯಕ (ಹೊಂಡದ ಸರ್ಕಲ್) ವೃತ್ತದ ಬಳಿಯ ಸ್ವಕುಳ ಸಾಳಿ ಸಮಾಜ ಮಂದಿರದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಎಸ್ಸೆಸ್ ಅವರನ್ನು ಅಭಿನಂದಿಸಿ, ಚುನಾವಣೆಯಲ್ಲಿ ಬೆಂಬಲ ನೀಡುವ ತೀರ್ಮಾನವನ್ನು ಪ್ರಕಟಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ಜಿ.ಪಿ. ಮೋಹನ್ ಅವರು ಶಾಮನೂರು ಶಿವಶಂಕರಪ್ಪ ಅವರನ್ನು ಸಮಾಜದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸುವುದರ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಎಸ್ಸೆಸ್ ಮತ್ತು ಎಸ್ಸೆಸ್ಸೆಂ ಇಬ್ಬರೂ ಅತ್ಯಧಿಕ ಮತಗಳಿಂದ ಜಯಗಳಿಸಲಿ ಎಂದು ಶುಭ ಹಾರೈಸಿದರು.
ಅತಿಥಿ ಗಣ್ಯರನ್ನು ಸ್ವಾಗತಿಸಿ, ಪ್ರಸ್ತಾವಿಕ ಭಾಷಣ ಮಾಡಿದ ಸ್ವಕುಳ ಸಾಳಿ ಸಮಾಜದ ಕಾರ್ಯದರ್ಶಿ ಧರ್ಮರಾಜ ಏಕಬೋಟೆ, ಹಿಂದುಳಿದ ಸಮಾಜಗಳಲ್ಲೊಂದಾದ ಸ್ವಕುಳ ಸಾಳಿ ಸಮಾಜಕ್ಕೆ ಎಸ್ಸೆಸ್ ಮತ್ತು ಎಸ್ಸೆಸ್ಸೆಂ ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.
ಎಸ್.ಎಸ್. ಮಲ್ಲಿಕಾರ್ಜುನ್ ಅವರು ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ಸ್ವಕುಳ ಸಾಳಿ ಸಮಾಜಕ್ಕೆ ನಿವೇಶನವನ್ನು ಮಂಜೂರು ಮಾಡಿಸಿಕೊಟ್ಟಿದ್ದರು. ಆ ನಿವೇಶನದಲ್ಲೀಗ ಸಮುದಾಯ ಭವನವನ್ನು ನಿರ್ಮಿಸಲುದ್ದೇಶಿಸಲಾಗಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ಸಮಾರಂಭವನ್ನು ನಡೆಸುವುದಾಗಿ ಧರ್ಮರಾಜ ಏಕಬೋಟೆ ತಿಳಿಸಿದರು.
ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಎಸ್ಸೆಸ್, ಸ್ವಕುಳ ಸಮಾಜದ ಅನೇಕ ಹಿರಿಯರೊಂದಿಗೆ ಹೊಂದಿರುವ ತಮ್ಮ ಒಡನಾಟವನ್ನು ಸಮಾಜ ಬಾಂಧವರೊಂದಿಗೆ ಹಂಚಿಕೊಂಡರಲ್ಲದೇ, ಈ ಸಮಾಜವು ನಿರ್ಮಿಸಲುದ್ದೇಶಿಸಿರುವ ಸಮುದಾಯ ಭವನಕ್ಕೆ ಸಹಾಯ-ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಿ. ಮಾಲತೇಶ ರಾವ್ ಜಾಧವ್, ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ, ಕೆಪಿಸಿಸಿ ಕಾರ್ಯದರ್ಶಿ ಅಸಗೋಡು ಜಯಸಿಂಹ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸ್ವಕುಳ ಸಾಳಿ ಸಮಾಜದ ಉಪಾಧ್ಯಕ್ಷ ಸುರೇಂದ್ರ ವಾಂಜ್ರೆ, ಸ್ವಕುಳ ಸಾಳಿ ಸಮಾಜದ ಖಜಾಂಚಿ ಗಣೇಶ ಕ್ಷೀರಸಾಗರ, ಆನಂದ ಸಫಾರೆ, ಮಹಿಳಾ ಮಂಡಳಿ ಕಾರ್ಯದರ್ಶಿ ಶ್ರೀಮತಿ ಸುಜಾತ ರೋಖಡೆ, ಶಿವಾಜಿ ಢಗೆ, ವರದಾ ಢಗೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸ್ವಕುಳ ಸಾಳಿ ಸಮಾಜದ ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥಿಸಿದರು.  ಸಮಾಜದ ಕಾರ್ಯದರ್ಶಿ ಮಂಜುನಾಥ ಕಾಂಬ್ಳೆ ವಂದಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!