ದಾವಣಗೆರೆ ತರಳಬಾಳು ಕೋವಿಡ್ ಕೇರ್ ಸೆಂಟರ್ ನಲ್ಲಿ ಸೊಂಕಿತರಿಗೆ ಯೋಗಪಾಠ
ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಹಾಗೂ ಜಿಲ್ಲಾ ವರದಿಗಾರರ ಕೂಟ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಆಶ್ರಯದಲ್ಲಿ 7ನೇ ಅಂತಾರಾಷ್ಟ್ರೀ ಯೋಗ ದಿನಾಚರಣೆಯ ನಿಮಿತ್ತ ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಹಾಗೂ ಆರೋಗ್ಯಕ್ಕೆ ಯೋಗ ಕಾರ್ಯಕ್ರಮವನ್ನು ನಗರದ ಕೋವಿಡ್ ಕೇರ್ ಸೆಂಟರ್ನಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್ ಆರೋಗ್ಯಕ್ಕೆ ಸಂಬಂಧಿಸಿದ ಯೋಗ ಪದ್ಧತಿಯನ್ನು ನಮ್ಮ ಪೂರ್ವಜರು ಪರಿಚಯಿಸಿದ್ದರೂ ಈವರೆಗೂ ನಾವು ಯಾರೂ ಪಾಲನೆ ಮಾಡಿರುವುದಿಲ್ಲ. ಆದರೆ ಇತ್ತೀಚೆಗೆ ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಂತಾರಾಷ್ಟ್ರೀ ಯೋಗ ದಿನವನ್ನು ಆಚರಣೆಗೆ ತರುವುದರ ಮೂಲಕ ಯೋಗದಿಂದ ಆರೋಗ್ಯವನ್ನು ಹೇಗೆ ಸಂಪಾದಿಸಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. ನಿಮ್ಮೆಲ್ಲರಿಗೂ ಕೊರೋನ ಹೋಗಲಾಡಿಸಲು ಯೋಗ ಅತ್ಯವಶ್ಯವಾಗಿದ್ದು, ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದಿಂದ ಯೋಗ ತರಬೇತಿಯನ್ನು ನೀಡಲಾಗುವುದು. ಆದ್ದರಿಂದ ತಾವುಗಳು ಯೋಗವನ್ನು ಯೋಗ ತರಬೇತುದಾರರ ಸಹಾಯದಿಂದ ಸರಿಯಾಗಿ ಅಭ್ಯಾಸ ಮಾಡಿ, ಮನೆಗೆ ತೆರಳಿದ ನಂತರವೂ ದಿನನಿತ್ಯ ಯೋಗಾಭ್ಯಾಸ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕೊರೋನ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು. ನಂತರ ಮಾತನಾಡಿದ ವಾಸುದೇವ ರಾಯ್ಕರ್, ನೀವುಗಳು ಸುರಕ್ಷಿತರಾಗಿದ್ದೀರಿ ಶೀಘ್ರ ಗುಣಮುಖರಾಗಿ ಮನೆಗೆ ತೆರಳುತ್ತೀರಿ, ಯಾವುದೇ ಆತಂಕ ಬೇಡ ಎಂದು ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದರು.
ವೈದ್ಯಾಧಿಕಾರಿಗಳಾದ ಡಾ. ನಾಗರಾಜ್ ಯೋಗ, ಪ್ರಾಣಾಯಾಮ ದಿನನಿತ್ಯದ ಅಭ್ಯಾಸವಾಗಲಿ, ಮನೆಗೆ ತೆರಳಿದ ನಂತರವೂ ನಿತ್ಯ ಯೋಗಾಭ್ಯಾಸ ಮಾಡಿ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಯೋಗ ಶಿಕ್ಷಕರಿಂದ ಯೋಗ ಪ್ರಾಣಾಯಾಮದ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಇದರ ಸದುಪಯೋಗ ಪಡೆದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸೋಂಕಿತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಯೋಗ ಒಕ್ಕೂಟದ ಪದಾಧಿಕಾರಿಗಳು, ಆಯುಷ್ ಅಧಿಕಾರಿಗಳು ಹಾಜರಿದ್ದರು.