ಮನೆ ಖಾಲಿ ಮಾಡಲು ಆದೇಶ ಹೊರಡಿಸಿದ ಕೋರ್ಟ್, ಬೀದಿಗೆ ಬಿದ್ದ ಬಡ ಕುಟುಂಬಗಳು

ದಾವಣಗೆರೆ : ಮನೆ ಇಲ್ಲದ ಬಡ ಜನತೆಗೆ ಸರ್ಕಾರ ಜನತಾ ಮನೆಗಳನ್ನು ನಿರ್ಮಿಸಿಕೊಡಲು ಹಕ್ಕುಪತ್ರಗಳ ಸಹಿತ ಮಂಜೂರು ಮಾಡಿತ್ತು. ಅಲ್ಲಿ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಂಡು ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಜಮೀನಿನ ಮಾಲಿಕನ ತಕರಾರಿಂದ ಈ ಕುಟುಂಬಗಳು ಬೀದಿಗೆ ಬಿದ್ದಿವೆ.1989ರಲ್ಲಿ ಅಂದಿನ ಸರ್ಕಾರ ಹರಿಹರ ತಾಲೂಕಿನ ಮಳಲಹಳ್ಳಿ ಗ್ರಾಮದ ಮನೆ ಇಲ್ಲದ ಬಡ ಜನತೆಗೆ ಜನತಾ ಮನೆಗಳನ್ನು ಹಕ್ಕು ಪತ್ರಗಳ ಸಮೇತ ಮಂಜೂರು ಮಾಡಿತ್ತು. ಸರ್ಕಾರ ಒಂದು ಎಕರೆ ಜಮೀನು ಖರೀದಿ ಮಾಡಿ ಮನೆಗಳನ್ನು ನಿರ್ಮಿಸುವ ಯೋಜನೆ ನಿರ್ಮಿಸಿತ್ತು. ಕೋರ್ಟ್ ಹೊರಡಿಸಿದ ಒಂದು ಆದೇಶದಿಂದ ಇದ್ದಕ್ಕಿದ್ದಂತೆ ನ್ಯಾಯಾಲಯದ ಅಮೀನರು ಪೊಲೀಸರ ಮೂಲಕ ಮನೆಗಳನ್ನು ಖಾಲಿ ಮಾಡಿಸಿದ್ದಾರೆ. ಹಾಗಾಗಿ ಆ ಬಡಕುಟುಂಬಗಳು ಇದೀಗ ರಸ್ತೆಯಲ್ಲೇ ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.

ಕೋರ್ಟ್ ಹೊರಡಿಸಿದ ಆದೇಶವೇನು?
ಹರಿಹರದ ಮಳಲಹಳ್ಳಿ ಗ್ರಾಮದಲ್ಲಿ ಸುಮಾರು 35 ವರ್ಷಗಳ ಹಿಂದೆ ಅಂದರೆ 1989ರಲ್ಲಿ ಓಂಕಾರಪ್ಪ ಎಂಬುವರ ಒಂದು ಎಕರೆ ಜಮೀನಿನಲ್ಲಿ ಸರ್ಕಾರ ಮನೆ ರಹಿತ 35ಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿತ್ತು. ಅದರಲ್ಲಿ ಹಲವರು ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ಇನ್ನು ಕೆಲವರು ಸರ್ಕಾರಿ ವಸತಿ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಇತ್ತಕಡೆ ಮಾಲೀಕ ಓಂಕಾರಪ್ಪ ಸರ್ಕಾರಕ್ಕೆ ನೀಡಿದ ಜಮೀನಿಗಿಂತ ಹೆಚ್ಚು ಜಮೀನನ್ನು ಇಲ್ಲಿನ ಜನರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಹೀಗಾಗಿ ಕೋರ್ಟ್ ಕಾರ್ಯಕಲಾಪಗಳಿಗೆ ಹಾಜರಾಗಬೇಕಾಗಿದ್ದ ಗ್ರಾಪಂ ಹಾಗೂ ಸರ್ಕಾರಿ ಅಧಿಕಾರಿಗಳು ಹಾಜರಾಗದೆ, ಸರಿಯಾಗಿ ಸ್ಪಂದಿಸದ ಹಿನ್ನೆಲೆ ಕೋರ್ಟ್ ಅನಧಿಕೃತ ಮನೆಗಳ ತೆರವಿಗೆ ಆದೇಶ ನೀಡಿದೆ.

ಕೋರ್ಟ್ ಆದೇಶದ ಬೆನ್ನಲ್ಲೇ ಅಮೀನರು ಮನೆಗಳನ್ನು ಖಾಲಿ ಮಾಡಿಸಿ ಬೀಗ ಜಡಿದು ಕಾನೂನಿನ ಪ್ರಕಾರ ಮನೆ ಬೀಗಗಳನ್ನು ಓಂಕಾರಪ್ಪನವರಿಗೆ ಹಸ್ತಾಂತರ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಶಾಸಕ ಎಸ್. ರಾಮಪ್ಪ ಆಗಮಿಸಿ ಗ್ರಾಮಸ್ಥರು, ಅಧಿಕಾರಿಗಳು ಹಾಗೂ ಓಂಕಾರಪ್ಪನವರ ಜತೆ ಚರ್ಚೆ ನಡೆಸಿದ್ದಾರೆ. ಸೂರು ಕಳೆದುಕೊಂಡು ಬೀದಿಗೆ ಬಿದ್ದ ಕುಟುಂಬಗಳಿಗೆ ಅಂದಿನ ಸರ್ಕಾರ ನೀಡಿದ್ದ ಅದೇ ಮಾದರಿಯಲ್ಲಿ ವಸತಿ ಸಚಿವ ಸೋಮಣ್ಣನವರ ಬಳಿ ಚರ್ಚಿಸಿ ಸೂರು ಕಲ್ಪಿಸಿಕೊಡುವುದಾಗಿ ಎಸ್. ರಾಮಪ್ಪ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!