ರಜನೀಕಾಂತ್ ಮನೆಯಲ್ಲಿ ಕಳ್ಳತನ-ಮಹಿಳೆ, ಕಾರು ಚಾಲಕನ ಬಂಧನ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕೆಲಸದಾಕೆಯಿಂದ ಕಳುವಾದ ಚರಾಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಚೆನ್ನೈನ ಪೋಯಸ್ ಗಾರ್ಡನ್ ಮನೆಯ ಲಾಕರ್‌ನಿಂದ ಬೆಲೆಬಾಳುವ ಚಿನ್ನಾಭರಣಗಳು ನಾಪತ್ತೆಯಾಗಿವೆ ಎಂದು ನಟ ರಜನಿಕಾಂತ್ ಪುತ್ರಿ ಐಶ್ವರ್ಯಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕಾರು ಚಾಲಕ ವೆಂಕಟೇಶನ ಕುಮ್ಮಕ್ಕಿನಿಂದಲೇ ಮನೆಗೆಲಸದವಳಾದ ಈಶ್ವರಿ ಸುಮಾರು 100 ಗ್ರಾಂ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾಳೆ. ಬಳಿಕ ಅವುಗಳನ್ನು ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ಮನೆ ಖರೀದಿಗೆ ಬಳಸಿದ್ದಾಳೆ. ಅಲ್ಲದೆ, ಕೆಲವು ವಸ್ತುಗಳನ್ನು ಖರೀದಿಸಲು ಸಹ ಹಣ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ 18 ವರ್ಷಗಳಿಂದ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಈಶ್ವರಿ, ಐಶ್ವರ್ಯಾ ರಜನಿಕಾಂತ್ ಅವರ ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದರು ಮತ್ತು ಲಾಕರ್ ಅನ್ನು ಹಲವು ಬಾರಿ ತೆರೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕೀ ಇರುವ ಸ್ಥಳವನ್ನು ಈಶ್ವರಿ ಚೆನ್ನಾಗಿ ತಿಳಿದಿದ್ದಳು. ಆಕೆ ಒಂದೇ ಬಾರಿ ಕಳ್ಳತನ ಮಾಡಿರಲಿಲ್ಲ. ಅನೇಕ ಬಾರಿ ಸ್ವಲ್ಪ ಸ್ವಲ್ಪವಾಗಿ ಆಭರಣಗಳನ್ನು ಕದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.