ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಸಿಎಂ ಹೇಳುವುದರಲ್ಲಿ ತಪ್ಪೇನಿಲ್ಲ – ಪಕ್ಷೇತರ ಅಬ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಮಾರ್ಮಿಕ ನುಡಿ

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಅಪಾರ ಗೌರವವಿದೆ, ಕಳೆದ ಒಂದು ವರ್ಷದ ರಾಜಕಾರಣದಲ್ಲಿ ಇಷ್ಟೊಂದು ಹೆಸರು ಗಳಿಸಲು ಸಿದ್ದರಾಮಯ್ಯ ಸರ್ ಸಹ ಪ್ರಮುಖ ಕಾರಣ.

ದಾವಣಗೆರೆಯಲ್ಲಿ ಹೋರಾಟ ಮಾಡಿದ್ದೇನೆ. ಎಐಸಿಸಿ ಮಟ್ಟದಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಿಕೆ ವಿಚಾರದಲ್ಲಿ ನನ್ನ ಹೆಸರು ಪ್ರಸ್ತಾಪವಾಗಲು ಸಿಎಂ ಅವರ ಸಹಕಾರ ಇದ್ದರಿಂದಲೇ ಆಗಿದ್ದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂದು ಸಿಎಂ ಹೇಳುವುದರಲ್ಲಿ ತಪ್ಪೇನಿಲ್ಲ. ರಾಜಕಾರಣದಲ್ಲಿ ತಂತ್ರ – ಪ್ರತಿತಂತ್ರ ಇದ್ದೇ ಇರುತ್ತದೆ. ನನ್ನ ಪ್ರಕಾರ ಅಹಿಂದ ವರ್ಗದವರು ನನಗೆ ಮತ ನೀಡಿದರೆ ನಾನು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ವಿನಯ್ ಕುಮಾರ್ ಒಂದು ವೇಳೆ ಗೆದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಏನೂ ಕೆಲಸ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದೂ ಹೇಳಿದ್ದಾರೆ. ಇದು ನನಗೆ ಆಶೀರ್ವಾದವೆಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ನಾನು ಮೋದಿ ಅವರ ಬಳಿ ಕೆಲಸ ಕೇಳಲು ಹೋಗಲ್ಲ. ಸಂಸದನಾದರೆ ಅವರ ಬಳಿಯೇ ಅನುದಾನ ಕೇಳಬೇಕು ಎಂದೇನಿಲ್ಲ. ನಾನು ಈಗಲೂ ಕಾಂಗ್ರೆಸ್ ನಲ್ಲಿಯೇ ಇದ್ದೇನೆ. ನಾಲ್ಕು ದಿನಗಳು ಆದ ಬಳಿಕ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆಯಲ್ಲಿಯೇ ಮುಂದುವರಿಯುತ್ತಿದ್ದೇನೆ. ಆದರೆ, ಯಾವುದೇ ಸರ್ಕಾರ ಇರಲಿ, ಬರಲಿ. ಕೇಂದ್ರ ಸರ್ಕಾರದ ಅನುದಾನದ ತಂದು ಹೇಗೆ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುದು ನನಗೆ ಗೊತ್ತು. ನನಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಆಗುವುದಿಲ್ಲ ಎಂದು ಹೇಳಿದರು.

ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋತ ಅಭ್ಯರ್ಥಿಗಳಲ್ಲಿ ಅಸಮಾಧಾನ ಇದೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ದೊರೆತಿಲ್ಲ. ನನ್ನ ಜನಪ್ರಿಯತೆ, ಕಾರ್ಯವೈಖರಿ ಸೇರಿದಂತೆ ಕಡಿಮೆ ಅವಧಿಯಲ್ಲಿ ಜನರ ಮನ ಗೆದ್ದಿರುವುದರಿಂದ ಪಂಚಮಸಾಲಿ ಸಮಾಜವು ನನಗೆ ಬೆಂಬಲ ನೀಡುತ್ತಿದೆ. ಕಳೆದ ಬಾರಿ ಯಾವುದೇ ಆಯ್ಕೆ ಇರಲಿಲ್ಲ. ಈ ಬಾರಿ ನಾನು ಸ್ಪರ್ಧೆ ಮಾಡಿರುವುದರಿಂದ ಈ ಸಮಾಜಕ್ಕೂ ಆಯ್ಕೆ ಇದೆ. ಹಾಗಾಗಿ, ನಾನು ಹೋದ ಕಡೆಗಳಲ್ಲಿ ನನ್ನನ್ನು ಬೆಂಬಲಿಸುವುದಾಗಿ ಭರವಸೆ ಸಿಗುತ್ತಿದೆ. ಬಿಜೆಪಿ ಪಕ್ಷಕ್ಕೆ ಮತ ನೀಡುತ್ತಿದ್ದೆವು. ಮೋದಿ ಅವರ ಮುಖ ನೋಡಿ ಬಿಜೆಪಿಗೆ ಮತ ಹಾಕುತ್ತಿದ್ದೆವು. ಈ ಬಾರಿ ನೀವು ಸ್ಪರ್ಧೆ ಮಾಡಿರುವುದರಿಂದ ನಿಮ್ಮನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ. ಎಲ್ಲಾ ಸಮುದಾಯದವರ ಅಭಿಪ್ರಾಯವೂ ಇದೇ ಆಗಿದೆ ಎಂದು ತಿಳಿಸಿದರು.
ಕಾಗಿನೆಲೆ ಶ್ರೀಗಳು ಹಾಗೂ ಸಿದ್ದರಾಮಯ್ಯ ಅವರು ನಾಮಪತ್ರ ವಾಪಸ್ ಪಡೆಯುವಂತೆ ಹೇಳಿದ್ದು ನಿಜ. ನಾನು ಅಲ್ಲಗೆಳೆಯುವುದಿಲ್ಲ. ಎರಡು ದಿನ ಕಾಲಾವಕಾಶ ಬೇಕು ಎಂದು ಹೇಳಿದ್ದೆ. ಸಿಎಂ ಸಿದ್ದರಾಮಯ್ಯರ ಮುಂದೆ ದಿಢೀರನೇ ನಿರ್ಧಾರ ಹೇಳಲು ಆಗದು ಎಂಬುದು ನನಗೆ ಗೊತ್ತಿತ್ತು. ಆದ್ರೆ, ಸಿಎಂ ಅವರನ್ನು ಭೇಟಿ ಮಾಡಿದ ಬಳಿಕ ಬೇರೆಯದ್ದೇ ಬೆಳವಣಿಗೆ ಆಗಿತ್ತು. ಇದು ಎಲ್ಲರಿಗೂ ಗೊತ್ತು ಎಂದರು.
ನನ್ನ ಮೊಬೈಲ್ ಕಾಲ್ ರೆಕಾರ್ಡ್ ತೆಗೆಸಿ ನೋಡಲಿ. ನಾನು ಶಾಸಕ ಬೈರತಿ ಬಸವರಾಜ್, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪರ ಜೊತೆ ಮಾತುಕತೆ ನಡೆಸಿಲ್ಲ. ಅವರ ಬೆಂಬಲಿಗರ ಜೊತೆ ಚರ್ಚೆ ನಡೆಸಿಲ್ಲ. ಆರು ವರ್ಷಗಳ ಹಿಂದೆ ಬೈರತಿ ಬಸವರಾಜ್ ಅವರನ್ನು ಭೇಟಿ ಮಾಡಿದ್ದೆ. ಆಗ ನನಗೆ ರಾಜಕೀಯದ ಗಂಧ ಗಾಳಿಯೂ ಗೊತ್ತಿರಲಿಲ್ಲ. ಐಎಎಸ್ ಕೋಚಿಂಗ್ ಸೆಂಟರ್ ಆರಂಭಿಸುವ ಮುನ್ನ ಭೇಟಿ ಮಾಡಿದ್ದೆ. ಆ ಬಳಿಕ ಅವರನ್ನು ನಾನು ಭೇಟಿ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೈರತಿ ಬಸವರಾಜ್ ಅವರ ಮನೆ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ. ನನ್ನ ಮನೆ ಎಲ್ಲಿದೆ ಬಸವರಾಜ್ ಅವರಿಗೂ ಗೊತ್ತಿಲ್ಲ. ನಾನು ಕೆ. ಎಸ್. ಈಶ್ವರಪ್ಪರನ್ನು ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಇದಕ್ಕೆ ಮುಂಚೆಯೇ ನಾನು ನಿರ್ಧಾರ ತೆಗೆದುಕೊಂಡಿದ್ದೆ. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು. ಇಲ್ಲಿನ ಸ್ಥಳೀಯರೇ ಸಿದ್ದರಾಮಯ್ಯರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನನ್ನನ್ನು ಸೋಲಿಸಬೇಕೆಂಬ ಕಾರಣಕ್ಕೆ ಈ ರೀತಿಯ ಮಾಹಿತಿ ನೀಡಿರಬಹುದು ಎಂದು ನನಗೆ ಅನಿಸುತ್ತಿದೆ. ನಾನು ಗೆದ್ದರೂ ಮೋದಿ ಅವರ ಬಳಿ ಯಾಕೆ ಹೋಗಲಿ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರೇ ನನಗೆ ಆದರ್ಶ, ಸ್ಫೂರ್ತಿ. ತೆಗಳಲಿ, ಹೊಗಳಲಿ ಅವರು ನನಗೆ ಮಾಡಿದ ಆಶೀರ್ವಾದ ಎಂದು ತೆಗೆದುಕೊಳ್ಳುತ್ತೇನೆ. ನಾನು ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದರು. ಆದ್ರೂ ಸ್ಪರ್ಧೆ ಮಾಡಿದ್ದೇನೆ. ಇದರಿಂದಾಗಿ ಅವರಿಗೂ ಕೋಪ, ಅಸಮಾಧಾನ ಆಗಿರಬಹುದು. ನಾನು ವೈಯಕ್ತಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಜಿಲ್ಲೆಯ ಜನರು ತೋರಿದ ಪ್ರೀತಿ, ವಿಶ್ವಾಸ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸ್ಪರ್ಧೆ ಮಾಡಿದ್ದೇನೆ. ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!