ಮತದಾನದ ದಿನ ಮೇ 10 ರಂದು ಕೇಂದ್ರ ಸರ್ಕಾರದ ಮೈಕ್ರೋ ಅಬ್ಸರ್ವರ್ ಕರ್ತವ್ಯಗಳ ಬಗ್ಗೆ ತರಬೇತಿ
ದಾವಣಗೆರೆ :ರಾಜ್ಯ ವಿಧಾನಸಭೆಗೆ ಮೇ 10 ರಂದು ಮತದಾನ ನಡೆಯಲಿದ್ದು ಚುನಾವಣಾ ಆಯೋಗದಿಂದ ನೇಮಿಸಲ್ಪಟ್ಟ ವೀಕ್ಷಕರಿಗೆ ಸಂಪೂರ್ಣ ಮಾಹಿತಿಯನ್ನು ನೀಡಲು ಕೇಂದ್ರ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಮೈಕ್ರೋ ಅಬ್ಸರ್ವರ್ಗಳನ್ನಾಗಿ ನೇಮಕ ಮಾಡಲಾಗಿದೆ.
ಇವರಿಗೆ ಮೇ 6 ರಂದು ಜಿಲ್ಲಾಧಿಕಾರಿಗಳ ಕಚೇರಿಯ ತುಂಗಭದ್ರ ಸಭಾಂಗಣದಲ್ಲಿ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ತರಬೇತಿಯನ್ನು ನೀಡಲಾಯಿತು. ಪ್ರತಿ ಮತಗಟ್ಟೆಗೂ ಮೈಕ್ರೋ ಅಬ್ಸರ್ವರ್ಗಳನ್ನು ನೇಮಕ ಮಾಡಲಾಗಿದ್ದು ಸಂಪೂರ್ಣ ಉಸ್ತುವಾರಿಯನ್ನು ನೋಡಿಕೊಂಡು ಎಲ್ಲಾ ಮತದಾನ ಪ್ರಕ್ರಿಯೆಗಳ ಬಗ್ಗೆ ಚುನಾವಣಾ ವೀಕ್ಷಕರಿಗೆ ವರದಿ ಮಾಡುವರು.
ಮುಕ್ತ, ಶಾಂತಯುತ ಹಾಗೂ ಪಾರದರ್ಶಕ ಮತದಾನವಾಗಲು ಮೈಕ್ರೋ ಅಬ್ಸರ್ವರ್ಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ಸಿಬ್ಬಂದಿ ತಲುಪಿದ ಮಾಹಿತಿ, ಮತದಾನ ದಿನ ಅಣಕು ಮತದಾನ ಸಮಯಕ್ಕೆ ಸರಿಯಾಗಿ ಆರಂಭವಾಗಿದೆಯೇ ಇಲ್ಲವೋ ಪರಿಶೀಲನೆ, ನಂತರ ಮತದಾನ ಪ್ರಕ್ರಿಯೆ ಯಾವುದೇ ಅಡಚಣೆ ಇಲ್ಲದ ರೀತಿಯಲ್ಲಿ ನಡೆಯುತ್ತಿರುವ ಬಗ್ಗೆ ಮತ್ತು ಮತದಾರರು ಯಾವುದೇ ಭಯವಿಲ್ಲದೇ ಮತದಾನ ಮಾಡುತ್ತಿರುವ ಬಗ್ಗೆ ಸಂಪೂರ್ಣವಾದ ವರದಿಯನ್ನು ಚುನಾವಣಾ ವೀಕ್ಷಕರಿಗೆ ನೀಡಬೇಕು. ಆದರೆ ಮತದಾನ ಮಾಡುವ ಸ್ಥಳಕ್ಕೆ ಯಾವ ಸಿಬ್ಬಂದಿಯೂ ಹೋಗುವಂತಿಲ್ಲ, ಮತದಾನ ಎನ್ನುವುದು ರಹಸ್ಯವಾದ ಪ್ರಕ್ರಿಯೆಯಾಗಿದೆ ಎಂದು ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿಕೊಟ್ಟರು.
ತರಬೇತಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ, ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳ ಚುನಾವಣಾ ವೀಕ್ಷಕರಾದ ಟಿ.ಎನ್.ಹರಿಹರನ್, ಜಗಳೂರು ಮತ್ತು ಹರಿಹರ ವೀಕ್ಷಕರಾದ ರಂಜೀತ್ ಕುಮಾರ್ ಜೆ., ಮಾಯಕೊಂಡ ಮತ್ತು ಚನ್ನಗಿರಿ ವೀಕ್ಷಕರಾದ ದೇಬಾಶಿಸ್ ದಾಸ್, ಹೊನ್ನಾಳಿ ವೀಕ್ಷಕರಾದ ಕೆ.ಕೆ.ಸುದಾಮಾ ರಾವ್ ಉಪಸ್ಥಿತರಿದ್ದರು.