ರಾಜಸ್ಥಾನದ ಟೈಲರ್ ಹತ್ಯೆ ಪ್ರಕರಣ: ದಾವಣಗೆರೆಯಲ್ಲಿ ಯಾವುದೇ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ಇಲ್ಲ – ಎಸ್ ಪಿ ರಿಷ್ಯಂತ್
ದಾವಣಗೆರೆ: ರಾಜಸ್ಥಾನದ ಉದಯ ಪುರದಲ್ಲಿ ಟೈಲರ್ ಕೊಲೆ ಪ್ರಕರಣ ಸಂಬಂಧ ನಗರದಲ್ಲಿ ಯಾವುದೇ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಎಸ್ಪಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜಸ್ಥಾನದ ಘಟನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಇದುವರೆಗೂ ನಗರದಲ್ಲಿ ಎಲ್ಲಿಯೂ ಶಾಂತಿಗೆ ಭಂಗ ಉಂಟಾಗುವ ಘಟನೆಗಳು ನಡೆದಿಲ್ಲ. ಈ ಘಟನೆ ಬೇರೆ ರಾಜ್ಯದಲ್ಲಿ ನಡೆದಿದೆ. ಇದಕ್ಕೂ ಕರ್ನಾಟಕಕ್ಕೂ ಯಾವುದೇ ಸಂಬಂಧ ಇಲ್ಲ. ಇಂಥಹ ಸಂದರ್ಭದಲ್ಲಿ ಯಾವುದೇ ವಿಷಯಗಳಿದ್ದರೂ ಕೂಡ ಸಾರ್ವಜನಿಕರು ಪೊಲೀಸ್ ಇಲಾಖೆ ಗಮನಕ್ಕೆ ತಂದರೆ ಅದನ್ನು ಸರಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಅವರು ಮನವಿ ಮಾಡಿದ್ದಾರೆ.
ಅಹಿತಕರ ಘಟನೆಗೆ ಕಾರಣರಾಗುವವರು ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ. ಅಲ್ಲದೇ ಈ ಘಟನೆ ಸಂಬಂಧ ನಗರದಲ್ಲಿ ಯಾವುದೇ ಪರ-ವಿರೋಧ ಪ್ರತಿಭಟನೆಗಳಿಗೆ ಅವಕಾಶ ನೀಡುವುದಿಲ್ಲ. ಜಿಲ್ಲೆಯಲ್ಲಿ ಯಾವುದೇ ಸೂಕ್ಷö್ಮ ವಿಚಾರಗಳಿದ್ದರೂ ಅಧಿಕಾರಿಗಳ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಗರದಲ್ಲಿ ಪೊಲೀಸರ ಕಟ್ಟೆಚ್ಚೆರದ ಜೊತೆಗೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಕೂಡ ವಹಿಸಲಾಗಿದೆ.ಯಾರಾದರು ಪ್ರಚೋಧನಕಾರಿ ಸ್ಟೇಟಸ್, ಕಾಮೆಂಟ್ ಹಾಕಿಕೊಳ್ಳುವವರ ವಿರುದ್ಧವೂ ಕೂಡ ಮೊಕದ್ದಮೆ ದಾಖಲಿಸಿ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ