ಇಡಿಯಟ್‌ ಸಿಂಡ್ರೋಮ್‌ ನಿಂದ ವೈದ್ಯರ ಮೇಲೆ ಹೆಚ್ಚಿದ ಒತ್ತಡ: ಪದ್ಮಶ್ರೀ ಡಾ. ಸಿ. ಎನ್‌ ಮಂಜನಾಥ್‌

– ಹೆಚ್ಚಾಗುತ್ತಿರುವ ಒತ್ತಡದಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ವೈದ್ಯರು
– ಜಯನಗರದ ಯನೈಟೆಡ್‌ ಆಸ್ಪತ್ರೆಯಲ್ಲಿ ವೈದ್ಯ ದಿನಾಚರಣೆ

ಬೆಂಗಳೂರು ಜುಲೈ 1: ಜನರಲ್ಲಿ ಇಡಿಯಟ್‌ ಸಿಂಡ್ರೋಮ್‌ (IDIOT SYNDROME – Internet Derived Information Obstruction Treatment) ನಿಂದಾಗಿ ವಿದ್ಯಾವಂತರಿಗೆ ಚಿಕಿತ್ಸೆ ನೀಡುವುದು ಬಹಳ ಕ್ಲಿಷ್ಟಕರವಾಗುತ್ತಿದೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಆವಿಷ್ಕಾರಗಳಿಂದಾಗಿ ಜನರು ಹಾಗೂ ರೋಗಿಗಳಲ್ಲಿ ವೈದ್ಯರ ಮೇಲಿನ ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಇದರಿಂದ ವೈದ್ಯರು ಒತ್ತಡಕ್ಕೆ ಒಳಗಾಗುತ್ತಿದ್ದು ಆನಾರೋಗ್ಯಕ್ಕೂ ತುತ್ತಾಗುತ್ತಿದ್ದಾರೆ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಪದ್ಮಶ್ರೀ ಡಾ. ಸಿ.ಎನ್‌ ಮಂಜುನಾಥ್‌ ಕಳವಳ ವ್ಯಕ್ತಪಡಿಸಿದರು.

ಇಂದು ಜಯನಗರದ ಯುನೈಟೆಡ್‌ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಚಾರಣೆಯ ಅಂಗವಾಗಿ ಹಿರಿಯ ವೈದ್ಯರು ಹಾಗೂ ಅವರ ಕುಟುಂಬ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಜನರು ತಮ್ಮ ಅಂಗೈಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಸಹಾಯದಿಂದ ತಮಗಿರುವ ಅನಾರೋಗ್ಯಗಳು ಹಾಗೂ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ತಗೆದುಕೊಳ್ಳುತ್ತಿದ್ದಾರೆ. ಇಂಟರ್‌ನೆಟ್‌ ನಲ್ಲಿ ಒಂದು ಕಾಯಿಲೆಯ ಬಗ್ಗೆ ನಾಲ್ಕಾರು ವಿಧಧ ಚಿಕಿತ್ಸೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ತಂತ್ರಜ್ಞಾನದಲ್ಲಿ ಆಗುತ್ತಿರುವ ಸ್ಪೋಟ (Explosion of Technology) ಹಾಗೂ ಇದರಿಂದ ರೋಗಿಗಳು ಮತ್ತು ಅವರ ಸಹಾಯಕರ ವೈದ್ಯರ ಮೇಲಿನ ಅತಿಯಾದ ನಿರೀಕ್ಷೆಯ ಮಧ್ಯದಲ್ಲಿ, ವೈದ್ಯರುಗಳು ನಲುಗಿ ಹೋಗುತ್ತಿದ್ದಾರೆ. ವೈದ್ಯರ ಮೇಲೆ ಅವಾಸ್ತವಿಕವಾದಂತಹ ನಿರೀಕ್ಷೆಯನ್ನು ಇಟ್ಟುಕೊಂಡು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಈ ಬದಲಾದ ಸಂಧರ್ಭದಲ್ಲಿ ಒಬ್ಬ ತಜ್ಞ ವೈದ್ಯರಿಗೆ ಕೇವಲ ತಾಂತ್ರಿಕ ಮತ್ತು ವೃತ್ತಿಪರ ಕೌಶಲ್ಯದ ಜೊತೆಗೆ ಸಂವಹನದ ಕೌಶಲ್ಯವನ್ನು ಹೊಂದುವ ಅವಶ್ಯಕತೆ ಬಹಳಷ್ಟು ಹೆಚ್ಚಾಗಿದೆ ಎಂದರು.

ವೈದ್ಯರ ದಿನಾಚರಣೆ ನಮ್ಮ ಮಧ್ಯೆ ಬಿಡುವಿಲ್ಲದೆ ಒತ್ತಡದಿಂದ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ನೀಡುವಂತಹ ದಿನವಾಗಿದೆ. ಬೆಳಿಗ್ಗೆಯಿಂದ ಮಧ್ಯರಾತ್ರಿಯವರೆಗೆ ದುಡಿಯುವ ವೈದ್ಯರ ಮೇಲೆ ದಿನೇ ದಿನೇ ಒತ್ತಡ ಹೆಚ್ಚಾಗುತ್ತಿದೆ. ಯುವ ವೈದ್ಯರು ಸೇರಿಕೊಂಡು ಪ್ರಾರಂಭಿಸಿರುವ ಯುನೈಟೆಡ್‌ ಆಸ್ಪತ್ರೆ ಒತ್ತಡದ ಮಧ್ಯೆಯೇ ಹಿರಿಯ ವೈದ್ಯರನ್ನು ಹಾಗೂ ಅವರ ಅವಿರತ ಸೇವೆಗೆ ಕಾರಣೀಭೂತರಾದ ಕುಟುಂಬದವರನ್ನು ಸನ್ಮಾನಿಸುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಒಬ್ಬ ಯಶಸ್ವಿ ವೈದ್ಯನಿಗೆ ಡಯಾಗ್ನೋಸ್ಟಿಕ್‌ ಗಾಗಿ ಇರುವ ಉಪಕರಣಗಳು ಬಹಳ ಅವಶ್ಯಕ. ಯುನೈಟೆಡ್‌ ಆಸ್ಪತ್ರೆಯಲ್ಲಿರುವ ಅತ್ಯಾಧುನಿಕ 360 ಸ್ಲೈಡ್ಸ್‌ ಸಿಟಿ ಉಪಕರಣ ವೈದ್ಯರ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇನ್ನೂ ಜನರಲ್ಲಿ ಹೆಚ್ಚಾಗಿರುವ ಇಡಿಯಟ್‌ (IDIOT SYNDROME – Internet Derived Information Obstruction Treatment) ಸಿಂಡ್ರೋಮ್‌ ನಿಂದಾಗಿ ಹೈ ಎಜುಕೇಶನ್‌ ಪಡೆದಂತಹ ಜನರ ಚಿಕಿತ್ಸೆಯಲ್ಲಿ ಬಹಳ ತೊಂದರೆಯಾಗುತ್ತಿದೆ. ಇವೆಲ್ಲಾ ಕಾರಣಗಳಿಂದಾಗಿ ವೈದ್ಯರಲ್ಲಿ ಒತ್ತಡ ಹೆಚ್ಚಾಗುತ್ತಿದೆ. ನಿಜವಾಗಿಯೂ ವೈದ್ಯರಿಗೇ ಹೆಲ್ತ್‌ ಕ್ಯಾಂಪ್‌ಗಳ ಅವಶ್ಯಕತೆ ಹೆಚ್ಚಾಗಿದೆ. ಒತ್ತಡದಿಂದ ವೈದ್ಯರುಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ತಮ್ಮ ಆರೋಗ್ಯ ಮತ್ತು ಕುಟುಂಬದ ಕಡೆ ಗಮನ ಹರಿಸುವ ಅಗತ್ಯತೆ ಹೆಚ್ಚಾಗಿದೆ ಎಂದು ಹೇಳಿದರು.

ಯುನೈಟೆಡ್‌ ಆಸ್ಪತ್ರೆಯ ನಿರ್ದೇಶಕರಾದ ಡಾ. ವೀಣಾ ಸಿದ್ದಾರೆಡ್ಡಿ ಮಾತನಾಡಿ, ನಮ್ಮ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಮೇಲಿನ ಒತ್ತಡದ ಬಗ್ಗೆ ನಮಗೆ ಅರಿವಿದೆ. ಸ್ವತಃ ವೈದ್ಯರಾಗಿ ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕೋವಿಡ್‌ ಹಾಗೂ ತುರ್ತುಪರಿಸ್ಥಿತಿಯ ಸಂಧರ್ಭದಲ್ಲಿ ಹಿರಿಯ ಹಾಗೂ ಕಿರಿಯ ವೈದ್ಯರುಗಳು ಸಲ್ಲಿಸಿದೆ ಸೇವೆ ಶ್ಲಾಘನೀಯ ಎಂದರು.

ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ, ಕುಟುಂಬ ಸದಸ್ಯರ ಜೊತೆ ಸಮಯ ಕಳೆಯುವುದಕ್ಕಿಂತಾ ಹೆಚ್ಚಿನ ಸಮಯ ರೋಗಿಗಳ ಸೇವೆಯಲ್ಲಿ ವೈದ್ಯರುಗಳು ಕಳೆದಿದ್ದಾರೆ. ಕೋವಿಡ್‌ ಸಂಧರ್ಭದಲ್ಲಿ ವೈದ್ಯರುಗಳ ಜೊತೆ ಅವರ ಕುಟುಂಬದವರೂ ಕಷ್ಟ ಅನುಭವಿಸಿದ್ದಾರೆ. ಇಂತಹ ವೈದ್ಯರ ಹಾಗೂ ಕುಟುಂಬ ಸದಸ್ಯರುಗಳಿಗೆ ಪ್ರೋತ್ಸಾಹ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!