ವಸತಿ ಶಾಲೆಗಳ ಪ್ರವೇಶಕ್ಕೆ ಸೆ.16 ರಂದು ಪ್ರವೇಶ ಪರೀಕ್ಷೆ: ಅಪರ ಜಿಲ್ಲಾಧಿಕಾರಿ
ದಾವಣಗೆರೆ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ವಸತಿ ಶಾಲೆಗಳ 06 ನೇ ತರಗತಿ ಪ್ರವೇಶಕ್ಕೆ ಸಿಇಟಿ ಮಾದರಿಯಲ್ಲಿ ಸೆ. 16 ರಂದು ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.
ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಿದ್ಧತೆ ಕೈಗೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟು 3140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಪರೀಕ್ಷೆಯನ್ನು ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ ಸುಗಮ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಸೇರಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ವಸತಿ ಶಾಲೆಗಳಲ್ಲಿ 06ನೇ ತರಗತಿ ಪ್ರವೇಶಕ್ಕಾಗಿ ಈ ಹಿಂದೆ ಅರ್ಜಿ ಆಹ್ವಾನಿಸಲಾಗಿತ್ತು. ಸರ್ಕಾರದ ಸೂಚನೆಯಂತೆ ವಸತಿ ಶಾಲೆಗಳಲ್ಲಿ 06ನೇ ತರಗತಿ ಪ್ರವೇಶ ಪಡೆಯಲು ಸಿಇಟಿ ಮಾದರಿಯಲ್ಲಿ ಪ್ರವೇಶ ಪರೀಕ್ಷೆ ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಇದಕ್ಕಾಗಿ ಸೆ. 16 ರಂದು ಬೆಳಿಗ್ಗೆ 11 ಗಂಟೆಯಿAದ ಮಧ್ಯಾಹ್ನ 1 ಗಂಟೆಯವರೆಗೆ ಪ್ರವೇಶ ಪರೀಕ್ಷೆ ಜರುಗಲಿದೆ. ಜಿಲ್ಲೆಯಲ್ಲಿ ಒಟ್ಟು 3140 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ನಡೆಸಲು ದಾವಣಗೆರೆ ನಗರದಲ್ಲಿ 01, ಚನ್ನಗಿರಿ, ಹೊನ್ನಾಳಿ, ಜಗಳೂರು ಮತ್ತು ಹರಿಹರದಲ್ಲಿ ತಲಾ 02 ಸೇರಿದಂತೆ ಒಟ್ಟು 09 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು ಒಮ್ಮೆ 06 ನೇ ತರಗತಿಗೆ ವಸತಿ ಶಾಲೆಯಲ್ಲಿ ದಾಖಲಾದರೆ, 12 ನೇ ತರಗತಿವರೆಗೂ ಅವರ ವಿದ್ಯಾಭ್ಯಾಸ ವಸತಿ ಶಾಲೆಗಳಲ್ಲಿ ನಿರಾತಂಕವಾಗಿ ಉತ್ತಮ ವ್ಯವಸ್ಥೆಯೊಂದಿಗೆ ಉಚಿತವಾಗಿ ಜರುಗಲಿದೆ ಎಂದರು.
ಪ್ರವೇಶ ಪರೀಕ್ಷೆಯನ್ನು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸುವ ಮೂಲಕ ಸುರಕ್ಷತಾ ಕ್ರಮಗಳೊಂದಿಗೆ ಅಚ್ಚುಕಟ್ಟಾಗಿ ನಡೆಸಬೇಕು. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರೀಕ್ಷಾ ಕೇಂದ್ರಕ್ಕೆ ಸ್ಯಾನಿಟೈಸ್ ಮಾಡಿಸಬೇಕು. ಪರೀಕ್ಷೆ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಸಿಬ್ಬಂದಿ ಕಡ್ಡಾಯವಾಗಿ ಕನಿಷ್ಟ 01 ಡೋಸ್ ಕೋವಿಡ್ ನಿರೋಧಕ ಲಸಿಕೆ ಪಡೆದಿರಬೇಕು. ಪ್ರತಿ ಕೊಠಡಿಗೆ ಗರಿಷ್ಟ 24 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂರಿಸಬೇಕು. ಕೋವಿಡ್ ಪಾಸಿಟೀವ್ ಇರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಲುವಾಗಿ ಚಿಗಟೇರಿ ಜಿಲ್ಲಾಸ್ಪತ್ರೆ ಬಳಿಯ ನರ್ಸಿಂಗ್ ಕಾಲೇಜನ್ನು ಪ್ರತ್ಯೇಕ ಪರೀಕ್ಷಾ ಕೇಂದ್ರವಾಗಿ ಸ್ಥಾಪಿಸಲಾಗಿದೆ ಎಂದರು.
ಅವರಿಗೆ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ ಗಳನ್ನು ಸಂಬಂಧಿಸಿದ ಪರೀಕ್ಷಾ ಕೇಂದ್ರದವರು ವ್ಯವಸ್ಥೆ ಮಾಡಬೇಕು. ಪ್ರತಿ ಕೇಂದ್ರದಲ್ಲೂ ಆಶಾ ಕಾರ್ಯಕರ್ತೆಯರ ತಂಡವು ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಿದ್ದು, ಮಾಸ್ಕ್ ಧರಿಸದವರಿಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ನೀಡುವ ಮಾಸ್ಕ್ ಅನ್ನು ವಿತರಣೆ ಮಾಡಬೇಕು.
ಪರೀಕ್ಷಾ ಕೇಂದ್ರಕ್ಕೆ ವೀಕ್ಷಕರನ್ನು ನಿಯೋಜಿಸಿದ್ದು, ಮೂರು ಸದಸ್ಯರ ತಂಡವು ಪ್ರತೀ ಪರೀಕ್ಷಾ ಕೇಂದ್ರವನ್ನು ಭೇಟಿ ಮಾಡಲಿದ್ದಾರೆ. ಪರೀಕ್ಷಾ ದಿನದಂದು ನಿಗದಿತ ಸಮಯದ ಒಳಗಾಗಿ ಪ್ರಶ್ನೆಪತ್ರಿಕೆ ತಲುಪುವಂತಾಗಬೇಕು, ಇದಕ್ಕಾಗಿ ಮಾರ್ಗಾಧಿಕಾರಿಗಳು, ಪರೀಕ್ಷೆಯಲ್ಲಿ ಅಕ್ರಮ ತಡೆಗಟ್ಟಲು ವಿಚಕ್ಷಣಾ ದಳವನ್ನು ನೇಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಹೇಳಿದರು.
ಸಭೆಯಲ್ಲಿ ಖಜಾನೆ ಇಲಾಖೆ ಉಪನಿರ್ದೇಶಕಿ ಪ್ರಭಾವತಿ ಎಸ್., ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು, ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಚಾರ್ಯರು ಭಾಗವಹಿಸಿದ್ದರು.