ಆಸ್ಟ್ರೇಲಿಯಾದಲ್ಲಿ ತಮ್ಮ ಲಗೇಜ್ ತಾವೇ ಹೊತ್ತೊಯ್ದ ಪಾಕಿಸ್ತಾನದ ಆಟಗಾರರು
ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಬಂದಿಳಿದ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ಬಹುದೊಡ್ಡ ಅವಮಾನವಾಗಿದೆ. ವಿಮಾನ ನಿಲ್ದಾಣದಲ್ಲಿ ಅವರನ್ನು ಸ್ವಾಗತಿಸಲು ಯಾರೂ ಬಂದಿರಲಿಲ್ಲ. ಹೀಗಾಗಿ ಆಟಗಾರರೇ ತಮ್ಮ ಲಗೇಜ್ ಹೊತ್ತುಕೊಂಡು ಹೋದ ದೃಶ್ಯ ಈಗ ವೈರಲ್ ಆಗಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಲಾಹೋರ್ ವಿಮಾನ ನಿಲ್ದಾಣದಿಂದ ಹೊರಟು ಸಿಡ್ನಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪಾಕಿಸ್ತಾನ ಆಟಗಾರರನ್ನು ಸ್ವಾಗತಿಸಲು, ಕರೆದೊಯ್ಯಲು ಪಾಕಿಸ್ತಾನ ರಾಯಭಾರ ಕಚೇರಿ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ಯಾವುದೇ ಅಧಿಕಾರಿಗಳು ಬಂದಿಲ್ಲ. ಈ ಮೂಲಕ ಆಟಗಾರರಿಗೆ ಅವಮಾನ ಮಾಡಲಾಗಿದೆ ಎಂದು ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಆಟಗಾರರು ಸ್ವತಃ ತಮ್ಮ ಲಗೇಜ್ ಅನ್ನು ತಾವೇ ಟ್ರಕ್ ನಲ್ಲಿ ತುಂಬಿಸಿ ಹೊಟೇಲ್ ಗೆ ತೆರಳಿದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಹಿರಿಯ ಆಟಗಾರ ಮೊಹಮ್ಮದ್ ರಿಜ್ವಾನ್ ತಮ್ಮ ಸಹ ಆಟಗಾರರ ಕಿಟ್ ಬ್ಯಾಗ್ಗಳನ್ನು ಲೋಡ್ ಮಾಡಲು ಟ್ರಕ್ ಒಳಗೆ ನಿಂತಿದ್ದರು. ಬಾಬರ್ ಅಜಂ ಮತ್ತು ಶಾಹೀನ್ ಅಫ್ರಿದಿ ಸೇರಿದಂತೆ ಹಲವು ಆಟಗಾರರು ಲಗೇಜ್ಗಳನ್ನು ಟ್ರಕ್ ನಲ್ಲಿ ತುಂಬಿಸಲು ಎಲ್ಲರಿಗೂ ನೆರವಾದರು. ಇದರಿಂದ ಆಸ್ಟ್ರೇಲಿಯಾದಲ್ಲಿ ಪಾಕ್ ಆಟಗಾರರ ವಾಸ್ತವ್ಯ ಮತ್ತು ಮುಂದಿನ ಟೆಸ್ಟ್ ಸರಣಿ ವ್ಯವಸ್ಥೆಗಳ ಬಗ್ಗೆ ಹಲವಾರು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ -ಆಸ್ಟ್ರೇಲಿಯಾ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಆರಂಭವಾಗಲಿದ್ದು, ಜನವರಿ 7 ವರೆಗೆ ನಡೆಯಲಿದೆ. ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನವು ಈವರೆಗೆ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. ಆದರೆ ಈಗ ಹೊಸ ನಾಯಕ ಶಾನ್ ಮಸೂದ್ ನೇತೃತ್ವದಲ್ಲಿ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕು.
ವಿಶ್ವಕಪ್ ನಲ್ಲಿ ಹೀನಾಯ ಸೋಲು ಅನುಭವಿಸಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಾಯಕ ಬಾಬರ್ ಅಜಂ ನಾಯಕ ಸ್ಥಾನದಿಂದ ಕೆಳಗೆ ಇಳಿದಿದ್ದು, 34 ವರ್ಷದ ಮಸೂದ್ ಅವರನ್ನು ಟೆಸ್ಟ್ ತಂಡದ ನಾಯಕರನ್ನಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೇಮಿಸಿದೆ.