ಏತ ನೀರಾವರಿ ಯೋಜನೆಗೆ ಬಿಜೆಪಿಯ ಸಿಎಂ ಕಾರಣ ಎಂದ ಸಂಸದ.! ಯೋಜನೆಗೆ 3 ಸಿಎಂ ಕಾರಣ ಎಂದು ಕಿವಿ ಹಿಂಡಿದ ಸಿರಿಗೆರೆ ಶ್ರೀ ಗಳು

ಸಿರಿಗೆರೆ: ಸಿರಿಗೆರೆಯ ತರಳಬಾಳು ಮಠದ ಪರಮಪೂಜ್ಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಇಂದು ಭರಮಸಾಗರ ಕೆರೆ ವೀಕ್ಷಣೆ ಮಾಡಿ, ಏತ ನೀರಾವರಿ ಯೋಜನೆಯ ಮೂಲಕ ಕೆರೆಗೆ ನೀರು ಬರುತ್ತಿರುವುದನ್ನು ಕಂಡು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ರವರು ಈ ಯೋಜನೆಯ ಮೂಲಕ ಸುತ್ತಮುತ್ತಲಿನ ರೈತರ ಜೀವನ ಅಸನಾಗಲಿದೆ ಎಂದರು, ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರೆ ಕಾರಣ ಅವರು 1200 ಕೋಟಿ ರೂ ಅನುದಾನ ಬಿಡುಗಡೆ ಮಾಡಿದ್ದರು ಎಂದು ಹೇಳುವ ಮೂಲಕ 2018 ರಲ್ಲಿಯೇ ಯೋಜನೆಯನ್ನು ಬಜೆಟ್ ನಲ್ಲಿ ಸೇರಿಸಿ ಅನುಮೋದಿಸಿದ ಸಿದ್ದರಾಮಯ್ಯನವರನ್ನು ನಂತರ ಬಂದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ನೆನೆಯದೆ ಇದ್ದದ್ದು ಮಾತ್ರ ಅವರ ಏಕಮುಖ ಹೇಳಿಕೆಯೋ ಅಥವಾ ಸಂಸದರ ವಯೋಸಹಜ ಮರುವೋ ಎಂದು ಸಾರ್ವಜನಿಕರಿಗೆ ಅನಿಸಿದ್ದು ಮಾತ್ರ ಸತ್ಯ.

ಮಾಜಿ ಸಚಿವರಾದ ಎಚ್. ಆಂಜನೇಯ ಮಾತನಾಡಿ ಏತ ನೀರಾವರಿ ಯೋಜನೆ 2018 ರ ತರಳಬಾಳು ಹುಣ್ಣಿಮೆಗೆ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಬಂದಾಗ, ಪರಮಪೂಜ್ಯರು ಬರದ ನಾಡಿಗೆ ನೀರು ಒದಗಿಸುವ ಏತನೀರಾವರಿ ಯೋಜನೆಯ ನೀಲಿನಕ್ಷೆ ರೂಪಿಸಿದ್ದು, ಇದಕ್ಕೆ 1200 ಕೋಟಿ ರೂ ಗಳ ಅವಶ್ಯಕತೆ ಇದ್ದು, ಈ ಬಾರಿಯ ಬಜೆಟ್ನಲ್ಲಿ ಈ ಯೋಜನೆಯನ್ನು ಸೇರಿಸಬೇಕು ಎಂದು ತಿಳಿಸಿದರು, ಸಿದ್ದರಾಮಯ್ಯ ನವರು 15 ದಿನದಲ್ಲಿ ಈ ಯೋಜನೆಯನ್ನು ಬಜೆಟ್ ನಲ್ಲಿ ಸೇರಿಸಿ ಅನುಮೋದಿಸುವ ಮೂಲಕ ಏತ ನೀರಾವರಿ ಯೋಜನೆಗೆ ಬುನಾದಿ ಹಾಕಿದರು ಎಂದು ಸ್ಮರಿಸಿದರು.

ನಂತರ ಬಂದ ಮುಖ್ಯಮಂತ್ರಿಗಳು ಯೋಜನೆಗೆ ಸಹಕಾರ ನೀಡಿದ್ದರಿಂದ ಯೋಜನೆ ಇಷ್ಟು ಬೇಗ ಯಶಸ್ವಿಯಾಗಲು ಸಾಧ್ಯವಾಗಿದ್ದು ಎಂದು ತಿಳಿಸಿದರು.

ಗುರುಗಳು ಕೆರೆ ವೀಕ್ಷಣೆಗೆ ತೆರಳಿದ್ದಾಗ ಅವರ ಕಾಲಿಗೆ ಗಾಯವಾಗಿ ರಕ್ತ ಬಂದು ತುಂಗಭದ್ರೆಯ ನೀರಿನೊಂದಿಗೆ ಬೆರೆತು ತುಂಗಭದ್ರೆ ಪಾವನಳಾದಳು ಎಂದು ಭಾವುಕರಾದರು, 300 ವರ್ಷಗಳ ಹಿಂದೆ ರಾಜಾ ಭರಮಣ್ಣನಾಯಕ ಈ ಕೆರೆ ನಿರ್ಮಿಸುವಾಗ ಬಹುಶಃ ಮುಂದೆ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಎಂಬ ಸ್ವಾಮಿಗಳು ಬಂದು ಈ ಕೆರೆಯನ್ನು ತುಂಬಿಸುತ್ತಾರೆ ಎಂದು ಅಂದುಕೊಂಡಿರಬಹುದು ಎಂದದ್ದು ವಿಶೇಷವಾಗಿತ್ತು, ಕೆರೆಯ ಮುಂಭಾಗ ಗುರುಗಳ ಪ್ರತಿಮೆ ಮಾಡಿಸಬೇಕು, ಇಂತಹ ಮಹತ್ತರವಾದ ಯೋಜನೆಯನ್ನು ರೂಪಿಸಿದ ಗುರುಗಳ ದರ್ಶನವನ್ನು ಇಲ್ಲಿ ಓಡಾಡುವ ಪ್ರತಿಯೊಬ್ಬರು ನೋಡುವಂತಾಗಲಿ ಎಂದು ತಮ್ಮ ಆಶಯವನ್ನು ತಿಳಿಸಿದರು.

ಶಾಸಕ ಎಂ. ಚಂದ್ರಪ್ಪ ನವರೂ ಮಾತನಾಡಿ ತಾವು ಸದಾ ಗುರುಗಳ ಆಶಯದಂತೆ ಕೆಲಸ ಮಾಡುವುದಾಗಿ ತಿಳಿಸುತ್ತಾ, ಮಾಜಿ ಸಚಿವ ಆಂಜನೇಯ ನವರ ಗುರುಗಳ ಪ್ರತಿಮೆಯ ಹೇಳಿಕೆಗೆ ಪರ್ಯಾಯವಂತೆ, ತಾವೇ ಗುರುಗಳ ಕಂಚಿನ ಪ್ರತಿಮೆ ಮಾಡಿಸುವುದಾಗಿ ಈಗಾಗಲೇ ಅದಕ್ಕೆ ಎರಡು ಕೋಟಿ ರೂಪಾಯಿ ಕಾಯ್ದಿರಿಸಿರುವುದಾಗಿ ಹೇಳಿದ್ದು ಮತ್ತು ಭಾಷಣದ ಮದ್ಯೆಯೇ ಗುರುಗಳಿಗೆ ಮತ್ತೊಮ್ಮೆ ನಮಸ್ಕರಿಸಿ ಬಂದದ್ದು ಮಾತ್ರ ಚುನಾವಣೆ ಹತ್ತಿರ ಇದೆ ಎಂಬುದನ್ನು ನೆನಪಿಸುವಂತೆ ಇತ್ತು.

ಈ ಯೋಜನೆಯ ರೂವಾರಿಗಳಲ್ಲಿ ಒಬ್ಬರಾದ ನೀರಾವರಿ ಇಲಾಖೆಯ ಎಂ.ಡಿ ಮಲ್ಲಿಕಾರ್ಜುನ್ ಬಿ ಗುಂಗ್ಗೆ ಮಾತನಾಡಿ 55 ಕಿಲೋಮೀಟರ್ ಉದ್ದದ ಇಂತಹ ಯೋಜನೆಯನ್ನು ರಾಜ್ಯದಲ್ಲಿ ಎಲ್ಲಿಯೂ ಮಾಡಿರಲಿಲ್ಲ, ನೀರಾವರಿ ಯೋಜನೆಗಳನ್ನು ಮಾಡುವಾಗ ನಾನಾ ರೀತಿಯ ಅಡಚಣೆಗಳು ಇರುತ್ತವೆ, ಗುರುಗಳ ಕೃಪೆಯಿಂದ ಎಲ್ಲಾ ಅಡಚಣೆಗಳು ಬೇಗ ನಿವಾರಣೆಯಾಗಿ ಅವಧಿಗೂ ಮುನ್ನವೇ ಕೆಲಸ ಮುಗಿಸಲು ಸಾಧ್ಯವಾಗಿತ್ತು ಎಂದು ತಿಳಿಸುತ್ತಾ, ಯೋಜನೆಯಲ್ಲಿ ನಡೆದ ಅನುಭವಗಳನ್ನು ಹೇಳುತ್ತಿದ್ದರು. ಅಷ್ಟರಲ್ಲಿ ವರುಣನ ಆಗಮನದ ಮುನ್ಸೂಚನೆಯಿಂದ ಅವರ ಭಾಷಣ ಮೊಟಕುಗೊಳಿಸಲಾಯಿತು ಅವರ ಮಾತುಗಳನ್ನು ಕೇಳುತ್ತಿದ್ದರೆ ಇಂತಹ ಯೋಜನೆಯಲ್ಲಿ ನಾವುಗಳು ಏಕೆ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಎಂದು ನೆರೆದಿದ್ದ ಸಭಿಕರಿಗೆ ಬೇಸರವಾಗಿದಂತು ಸತ್ಯ.

ಅಂತಿಮವಾಗಿ ಪರಮಪೂಜ್ಯರು ತಮ್ಮ ಆಶೀರ್ವಚನದಲ್ಲಿ ಈ ಯೋಜನೆಯ ಯಶಸ್ಸಿಗೆ 3 ಮುಖ್ಯಮಂತ್ರಿಗಳು ಕಾರಣ ಎಂದು ತಿಳಿಸುತ್ತಾ ಮನೆಯಲ್ಲಿ ಮಗು ಹುಟ್ಟಿದಾಗ ಬರುವ ನೆಂಟರು ಮಗುವಿನ ಹೋಲಿಕೆಯನ್ನು ತಂದೆ-ತಾಯಿ ದೊಡ್ಡಪ್ಪ ಅಜ್ಜಿ-ತಾತ ರಿಗೆ ಹೋಲಿಸುವಂತೆ ಈ ಯೋಜನೆಯ ಯಶಸ್ಸನ್ನು 3 ಮುಖ್ಯಮಂತ್ರಿಗಳಿಗೂ ನೀಡಿದರು.

ಮುಂದಿನ ದಿನಗಳಲ್ಲಿ ಭಕ್ತರು ತಮಗೆ ಬರುವ ಆದಾಯದಲ್ಲಿ ಶೇಕಡ ಇಂತಿಷ್ಟು ಎಂದು ಮನೆಯ ಹೆಣ್ಣುಮಕ್ಕಳು ಹಾಗೂ ತಾಯಂದಿರಿಗೆ ಬಂಗಾರ ಮಾಡಿಸಿಕೊಡಬೇಕು ಎಂದು ಭಕ್ತರಿಂದ ಮಾತು ತೆಗೆದುಕೊಂಡರು, ಮನೆಯ ಮಹಿಳೆಯರು ಬ್ಯಾಂಕ್ ಇದ್ದಂತೆ ಎಂದು ತಿಳಿಸಿದ ಅವರು ಈ ಯೋಜನೆ ಮಾಡುವಾಗ ಕೆಲವರು ಮನೆ ಕಳೆದುಕೊಂಡಿದ್ದು, ಅವರ ತ್ಯಾಗವನ್ನು ತಾವುಗಳು ಎಂದೂ ಮರೆಯಬಾರದು ಎಂದು ತಿಳಿಸುತ್ತಾ ಮುಂದಿನ ಸಭೆಯಲ್ಲಿ ಅವರನ್ನು ಕರೆದು ಸನ್ಮಾನಿಸಬೇಕು ಎಂದು ತಮ್ಮ ಅಭಿಲಾಷೆ ತಿಳಿಸಿದರು

ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೂ ಹಾಗೂ ಸಿಬ್ಬಂದಿಗಳಿಗೂ ಪರಮಪೂಜ್ಯ ರಿಂದ ಸನ್ಮಾನಿಸಲಾಯಿತು.

1200 ಕೋಟಿ ರೂ ಗಳ ಈ ಯೋಜನೆಗೆ ಸಿದ್ದರಾಮಯ್ಯನವರು ಬಜೆಟ್ನಲ್ಲಿ ಸೇರಿಸಿ ಅನುಮೋದಿಸಿದರು, ಮುಂದೆ ಬಂದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಗೆ ಸಂಬಂಧಪಟ್ಟ ಕಾರ್ಯಗಳನ್ನು ಮುಂದುವರಿಸಿದರು, ನಂತರ ಬಂದ ಬಿ.ಎಸ್. ಯಡಿಯೂರಪ್ಪ ನವರು 1200 ಕೋಟಿಯ ಈ ಯೋಜನೆಯನ್ನು 250 ಕೋಟಿ ರೂ ಗಳಿಗೆ ಸೀಮಿತಗೊಳಿಸಿ ಆದೇಶ ಹೊರಡಿಸಿದರು, ಇದನ್ನು ಒಪ್ಪದ ಪರಮಪೂಜ್ಯರು ರೈತರ ಹಿತದೃಷ್ಟಿಯಿಂದ ಒತ್ತಾಯ ಮಾಡಿ ಈ ಯೋಜನೆಗೆ 1200 ಕೋಟಿ ಹಣವನ್ನು ಬಿಡುಗಡೆಗೊಳಿಸಲು ಯಶಸ್ವಿಯಾದರು ಎಂಬುದು ನಿನ್ನೆಯ ಸಭೆಯಿಂದ ಅರ್ಥವಾಯಿತು.

ಅಂತಿಮವಾಗಿ ಈ ಯೋಜನೆಯ ಯಶಸ್ಸನ್ನು ಯಾರಿಗೆ ನೀಡುತ್ತೀರಾ ಎಂಬುದು ನಿಮಗೆ ಬಿಟ್ಟಿದ್ದು.

ಕೆ.ಎಲ್.ಹರೀಶ್ ಬಸಾಪುರ.

Leave a Reply

Your email address will not be published. Required fields are marked *

error: Content is protected !!