ಮಕ್ಕಳ ಅನೈತಿಕ ಸಾಗಾಣಿಕೆ ತಪ್ಪಿಸುವ ಜವಾಬ್ದಾರಿ ನಮ್ಮೆಲ್ಲರದ್ದು:ಎಸ್ಪಿ ರಿಷ್ಯಂತ್
ದಾವಣಗೆರೆ: ಮಹಿಳೆಯರು ಮತ್ತು ಮಕ್ಕಳು ಅನೈತಿಕ ಸಾಗಾಣಿಕೆಗೆ ಒಳಗಾಗದಂತೆ ಜಾರಿಯಲ್ಲಿರುವ ಕಾಯ್ದೆ ಬಲದಿಂದ ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ, ಮಕ್ಕಳ ರಕ್ಷಣಾ ಘಟಕ ಇವರುಗಳ ವತಿಯಿಂದ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರ’ದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲ್ಯವಿವಾಹ, ಬಾಲಕಾರ್ಮಿಕತೆ, ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮುಂತಾದವುಗಳ ಬಗೆಗೆ ಅರಿವು ಮೂಡಿಸಲು ಆಯೋಜಿಸಿರುವ ಕಾರ್ಯಾಗಾರ ಬಹಳ ಅವಶ್ಯವಾಗಿವೆ ಎಂದರು.
ಜಿಲ್ಲೆಯಲ್ಲಿ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ್ದರು ವರ್ಷದಲ್ಲಿ ಒಂದೆರದು ಪ್ರಕರಣಗಳು ದಾಖಲಾಗುತ್ತಿದ್ದು ಅವುಗಳು ಉತ್ತರ ಕರ್ನಾಟಕದ ಕಡೆ ಜರುಗುವವು ಇಲ್ಲಿ ವರದಿಯಾಗುತ್ತವೆ. ಇವುಗಳ ಮೇಲ್ವಿಚಾರಣೆಗಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಇಬ್ಬರು ಎಸ್.e.ಪಿ ಯುನಿಟ್ ಸಿಬ್ಬಂದಿ ಇರುತ್ತಾರೆಂದರು.
ಹೆಣ್ಣು ಮಕ್ಕಳಿಗೆ 16-17 ವರ್ಷಕ್ಕೆ ಬಾಲ್ಯ ವಿವಾಹ ಮಾಡಲಾಗುತ್ತದೆ. ಯಾರೊಬ್ಬರಿಗೂ ತಾವು ಮಾಡುತ್ತಿರುವ ತಪ್ಪಿನ ಅರಿವಾಗುವುದಿಲ್ಲ, ಎಲ್ಲರೂ ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆ ಹುಡುಗಿಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಇರುವುದಿಲ್ಲ, ಅಂತಹ ಪ್ರಕರಣಗಳನ್ನು ಯಾರೂ ವರದಿ ಮಾಡುವುದಿಲ್ಲ, ಆ ಹುಡುಗಿ ಗರ್ಭಿಣಿ ಆದ ನಂತರ ಹೊರಗೆ ಗೊತ್ತಾಗುತ್ತದೆ. ಇಂತಹ ಕೃತ್ಯ ಎಸಗುವವರಿಗೆ 10 ವರ್ಷಗಳ ಶಿಕ್ಷೆ ಇದೆ, ಬಾಲ್ಯ ವಿವಾಹ ಮಾಡುವವರಿಗೆ ಹಾಗೂ ಪ್ರೇರೇಪಿಸುವವರಿಗೆ ಶಿಕ್ಷೆ ಆಗಬೇಕು, ಶಿಕ್ಷೆ ಆದುದನ್ನು ಹೆಚ್ಚು ಪ್ರಚಾರ ಮಾಡಬೇಕು ಅದರಿಂದ ಉಳಿದವರಿಗೂ ಭಯ ಹುಟ್ಟುತ್ತದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅಂತಹ ತಪ್ಪು ಮಾಡಲು ಹೆದರುತ್ತಾರೆಂದರು.
ಮಕ್ಕಳನ್ನು ಬಾಲ ಕಾರ್ಮಿಕತೆಗೆ ದೂಡುವುದು ಕೂಡ ಅಪರಾಧವಾಗಿದ್ದು, ಹೀಗೆ ಮಾಡುವುದರಿಂದ ಅವರು ಉನ್ನತ ಮಟ್ಟಕ್ಕೆ ಹೋಗುವುದನ್ನು ತಡೆದಂತಾಗುತ್ತದೆ, ಮಕ್ಕಳು ಬಾಲ್ಯದಲ್ಲಿ ಆಟ ಪಾಠಗಳಲ್ಲಿ ತೊಡಗಿಕೊಳ್ಳಬೇಕು, ಅವರನ್ನು ದುಡಿಮೆಗೆ ಹಚ್ಚಬಾರದು ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಕರಣಗಳು ಕಂಡುಬರುತ್ತಿದ್ದು, ಇಂತಹ ಯಾವೊಂದು ಪ್ರಕರಣಗಳೂ ನಡೆಯದಂತೆ ಎಲ್ಲಾ ಇಲಾಖೆಗಳು ಪರಸ್ಪರ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಕೊಪ್ಪಳ ವಿಭಾಗದ ಯುನಿಸೆಪ್‌ನ ಕೆ.ರಾಘವೇಂದ್ರ ಭಟ್ ಕಾಯ್ದೆ ಬಗೆಗೆ ಶಿಬಿರಾರ್ಥಿಗಳಿಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಡಿ.ಹೆಚ್.ಒ. ಡಾ.ನಾಗರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಬಿರಾರ್ಥಿಗಳು ಭಾಗವಹಿಸಿದ್ದರು