ಜಿಲ್ಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ: ಶ್ರೀರಾಮ ಸೇನೆಯ ಮಣಿ ಸರ್ಕಾರ್
ದಾವಣಗೆರೆ: ಜಿಲ್ಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು , ಯಾವ ಇಲಾಖೆಯಲ್ಲೂ ಲಂಚವಿಲ್ಲದೆ ಕೆಲಸ ಆಗುವುದೇ ಇಲ್ಲ ಎಂಬ ವಾತಾವಣ ನಿರ್ಮಾಣವಾಗಿದೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಮೇಲಿಂದ ಮೇಲೆ ಅಧಿಕಾರಿಗಳು ಲೋಕಾಯುಕ್ತರ ಬಲೆಗೆ ಬೀಳುತ್ತಿರುವುದೇ ಹೆಚ್ಚಾಗಿರುವ ಭ್ರಷ್ಠಾಚಾರಕ್ಕೆ ಸಾಕ್ಷಿಯಾಗಿದೆ ಎಂದರು.
ವಿನ್ಯಾಸ ನಕ್ಷೆ ಮಾಡಿಕೊಡಲು ಲಂಚ ಕೇಳಿದ ನೌಕರನನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ ಟಿ.ವಿ. ಶ್ರೀನಿವಾಸ್ ಮಾತನಾಡಿ, ತಮಗೆ ನಿವೇಶನಗಳ ನಕ್ಷೆ ವಿನ್ಯಾಸ ಮಾಡಿಕೊಡಲು ಮೂರು ಲಕ್ಷ ರೂ. ಲಂಚ ಕೇಳಿದ ನೌಕರನನ್ನು ಲೋಕಾಯುಕ್ತರ ಮೂಲಕ ಹಿಡಿಸಿದ್ದೇನೆ. ಇದೇ ರೀತಿ ಸಾರ್ವಜನಿಕರು ಸಹ ತಮಗೆ ಲಂಚ ಕೇಳಿದರೆ ಅದನ್ನು ಲೋಕಾಯುಕ್ತರ ಗಮನಕ್ಕೆ ತರಬೇಕು. ಭ್ರಷ್ಟ ಅಧಿಕಾರಿಗಳನ್ನು ಲೋಕಾಯುಕ್ತ ಬಲೆಗೆ ಬೀಳಿಸಿ, ಕ್ರಮ ಆಗುವಂತೆ ನೋಡಿಕೊಳ್ಳಬೇಕು ಎಂದರು.
ಸಂಘಟನೆಯ ಪ್ರಮುಖರಾದ ಶ್ರೀನಿವಾಸ್, ಆಲೂರು ರಾಜಶೇಖರ್, ಸಾಗರ್, ವಿನೋದ್, ರಾಜು, ರಮೇಶ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.