ದಾವಣಗೆರೆಯಲ್ಲಿ ಅಂತರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಆರಂಭ

ಅಂತರಾಷ್ಟ್ರೀಯ ವಲಸೆ
ದಾವಣಗೆರೆ: ನಗದಲ್ಲಿ ಅಂತರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಆರಂಭವಾಗಿದೆ. ಶುಕ್ರವಾರ ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳ ಕುರಿತು ಸಂವಾದ ಅರಿವು ಮತ್ತು ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ‘ನಿರುದ್ಯೋಗಿಗಳು ವಿದೇಶದಲ್ಲಿ ಉದ್ಯೋಗ ಪಡೆಯಲು ಅಂತರರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಸಹಕಾರಿಯಾಗಿದೆ ಎಂದರು.
ವಿದೇಶದಲ್ಲಿ ಉದ್ಯೋಗ ಮಾಡುವುದು ಇಂದಿನ ಯುವಜನತೆಯ ಕನಸಾಗಿದೆ. ಆದರೆ ಉದ್ಯೋಗವನ್ನರಸಿ ಹೋದವರು ಹಲವು ತೊಂದರೆಗೆ ಒಳಗಾಗಿದ್ದಾರೆ. ಸುರಕ್ಷಿತವಾದ ಉದ್ಯೋಗ ಪಡೆಯಲು ಸರ್ಕಾರ ನೂತನವಾಗಿ ಅಂತರ ರಾಷ್ಟ್ರೀಯ ವಲಸೆ ಕೇಂದ್ರವನ್ನು ಸ್ಥಾಪಿಸಿದೆ. ಮಧ್ಯವರ್ತಿಗಳ ಹಾವಳಿಯಿಂದ ಜನರನ್ನು ತಪ್ಪಿಸುವ ಸರ್ಕಾರದ ಯೋಜನೆ ಇದಾಗಿದೆ ಎಂದರು.
ಅಂತರ ರಾಷ್ಟ್ರೀಯ ವಲಸೆ ಕೇಂದ್ರದ ವ್ಯವಸ್ಥಾಪಕಿ ಸಂಗೀತಾ ಇ. ನಿಕ್ಕಮ್ ಮಾತಾನಾಡಿ, ‘ರಾಜ್ಯದ ವಲಸಿಗರು ವಿದೇಶದಲ್ಲಿ ಉದ್ಯೋಗ ಮಾಡಲು ಇಚ್ಛಿಸುವವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸಿದೆ. ಮ್ಯಾನೇಜ್ಮೆಂಟ್ ಇನ್ಫರ್ಮೇಷನ್ ಸಿಸ್ಟಂನಲ್ಲಿ ವಲಸೆ ಕಾರ್ಮಿಕರ ನೋಂದಣಿ ಮಾಡಲಾಗುತ್ತದೆ. ವಿದೇಶಕ್ಕೆ ಪ್ರಯಾಣ ಬೆಳೆಸುವವರಿಗೆ ಮಂಡಳಿಯಿಂದ 8 ಗಂಟೆಗಳ ಕಾಲ ಪೂರ್ವ ನಿರ್ಗಮನ ತರಬೇತಿ ನೀಡಲಾಗುತ್ತದೆ. ಕಿರುಕುಳಕ್ಕೆ ಒಳಗಾದ ಉದ್ಯೋಗಿಗಳು MADAD ಹಾಗೂ e-Migrate ಪೋರ್ಟಲ್‌ಗಳ ಸಹಾಯದಿಂದ ಕುಂದು–ಕೊರತೆಗಳನ್ನು ನಿವಾರಿಸಿಕೊಳ್ಳಬಹುದು’ ಎಂದರು.
ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ವೀಣಾ ಎಸ್.ಆರ್, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಕ್ಷೇತ್ರ ಕಾರ್ಯ ನಿರ್ವಾಹಕ ಚೇತನ್ ಕುಮಾರ ಎನ್. ಹಾಗೂ ಪ್ರಕಾಶ್ ಕೆ.ಎನ್. ಇದ್ದರು.