ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ! ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ:ಡಾ. ನಾಗರಾಜ

ದಾವಣಗೆರೆ : ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಹಾಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಎಲ್ಲರೂ ರಕ್ತದಾನವನ್ನು ಮಾಡುವಂತೆ ಪ್ರತಿಜ್ಞೆ ಮಾಡೋಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗರಾಜ ಅವರು ಹೇಳಿದರು.

ಮಂಗಳವಾರ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಮತ್ತು ಜಿಲ್ಲೆಯ ವಿವಿಧ ರಕ್ತ ಕೇಂದ್ರಗಳು, ಜಿಲ್ಲಾ ಆರ್.ಆರ್.ಸಿ ಕಾಲೇಜುಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ ಸಂಸ್ಥೆಗಳು ದಾವಣಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ-2022’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಕ್ತದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ, ದಾನದಲ್ಲಿ ಅತಿ ಶ್ರೇಷ್ಠ ದಾನ ರಕ್ತದಾನವೇ ಆಗಿದೆ. ಇದನ್ನು 2005 ರಿಂದ ಪ್ರತಿವರ್ಷ ಒಂದೊಂದು ಘೋಷವಾಕ್ಯದೊಂದಿಗೆ ರಕ್ತ ದಾನ ದಿನಾಚರಣೆ ಆಚರಿಸಲಾಗುತ್ತದೆ. ರಕ್ತವನ್ನು ಯಾರು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ, ಎಲ್ಲರು ರಕ್ತದ ಮಹತ್ವವನ್ನು ತಿಳಿದು ರಕ್ತದಾನಕ್ಕೆ ಮುಂದಾಗಬೇಕು ಎಂದರು. ರಕ್ತದಾನ ಮಾಡುವುದರಿಂದ ರಕ್ತದಾನಿಗಳು ಆರೋಗ್ಯವಾಗಿರುತ್ತಾರೆ. ಕೆಲವರು ಅಪಘಾತ ದಿಂದ ಚಿಕಿತ್ಸೆ ಪಡೆಯುವವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ತುರ್ತಾಗಿ ರಕ್ತ ಬೇಕಾಗುತ್ತದೆ ಅಂತಹ ಸಮಯದಲ್ಲಿ ರಕ್ತದ ಅವಶ್ಯವಾಗಿದ್ದು, 18 ರಿಂದ 60 ರ ವಯಸ್ಕರು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ರಕ್ತದಾನವನ್ನು ಮಾಡುವಂತೆ ಪ್ರತಿಜ್ಞೆ ಮಾಡೋಣ ಎಂದು ಹೇಳಿದರು.

ಎ.ಪಿ ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವದೆಲ್ಲೆಡೆ ಮನುಷ್ಯನಿಗೆ ಎರಡು ರೀತಿಯ ಪರಿಸ್ಥಿತಿಗಳಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಮೊದಲನೆಯದಾಗಿ ತುರ್ತು ಪರಿಸ್ಥಿತಿಗಳಲ್ಲಿ ಅಂದರೆ, ಅಪಘಾತ, ಪ್ರಕೃತಿ ವಿಕೋಪಗಳು, ಹೆಣ್ಣುಮಕ್ಕಳ ಪ್ರಸೂತಿ, ಸಮಯ ಮತ್ತಿತರ ಸ್ತ್ರೀರೋಗ ಶಸ್ತ್ರಚಿಕಿತ್ಸೆಗಳು ಎರಡನೆಯದಾಗಿ ರಕ್ತಸಂಬಂಧಿ ಖಾಯಿಲೆಗಳಾದ ತಲಸ್ಸೀಮಿಯಾ, ಹಿಮೋಫಿಲಿಯಾ, ಸಿಕಲ್ ಸೆಲ್ ಅನಿಮೀಯ ಮುಂತಾದವುಗಳು. ಈ ಎರಡೂ ಪರಿಸ್ಥಿತಿಗಳಲ್ಲಿ ನವಜಾತ ಶಿಶುಗಳಿಂದ ದೊಡ್ಡವರವರೆಗಿನ ಎಲ್ಲಾ ವಯೋಮಾನದವರಿಗೂ ಸುರಕ್ಷಿತ ರಕ್ತದ ಅವಶ್ಯಕತೆ ಇರುತ್ತದೆ. ಹೀಗೆ ಅತ್ಯಾವಶ್ಯಕವಾಗಿರುವ ರಕ್ತ ಮತ್ತು ರಕ್ತದ ಉತ್ಪನ್ನವನ್ನು ಕೃತಕವಾಗಿ ಸೃಷ್ಟಿಮಾಡಲು ಸಾಧ್ಯವಿಲ್ಲ. ಹೀಗಾಗಿ ರಕ್ತದಾನಿಯೊಬ್ಬನೇ ಆಪದ್ಬಾಂಧವನಾಗಿರುತ್ತಾನೆ ಆದ್ದರಿಂದ ಎಲ್ಲರು ರಕ್ತದಾನ ಮಾಡಬೆಕು ಎಂದು ಹೇಳಿದರು.

ಇದೇ ವೇಳೆ ಸ್ವಯಂ ಪ್ರೇರಿತ ರಕ್ತದಾನಿಗಳಿಗೆ ಪ್ರಶಸ್ತಿಪತ್ರ ಪ್ರದಾನ ಮಾಡಲಾಯಿತು. ರಕ್ತದಾನ ಜಾಗೃತಿ ಬಗ್ಗೆ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ಎಂಎಸ್‍ವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಪ್ರದಾನಿಸಲಾಯಿತು. ನಂತರ ಐಸಿಟಿಸಿ ಕೇಂದ್ರಗಳ ಸಿಬ್ಬಂದಿ ಮತ್ತು ಲುಂಬಿನಿ ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿಗಳು ‘ಆಸರೆಯ ಜೀವ’ ಎಂಬ ಕಿರು ನಾಟಕವನ್ನು ಪ್ರದರ್ಶಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಡಾ. ರೇಣುಕಾರಾಧ್ಯ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರಾದ ಡಾ. ಎಸ್. ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕರಾದ ಡಾ. ಭಾರತಿ ಎಸ್.ಎನ್, ಜಿಲ್ಲಾಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣಘಟಕದ ಪ್ರಭಾರ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ನಟರಾಜ ಕೆ, ರಕ್ತ ಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಡಿ.ಹೆಚ್. ಗೀತಾ, ಡಾ.ಸುರೇಶ್ ಬಾರ್ಕಿ, ಜಯಣ್ಣ, ಸ್ವಯಂ ಪ್ರೇರಿತ ರಕ್ತದಾನಿಗಳು, ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿಗಳು, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂಧಿ ವರ್ಗದವರು ಸೇರಿದಂತೆ ಹಲವಾರು ಜನರು ಇದ್ದರು. ಕಾರ್ಯಕ್ರಮದಲ್ಲಿ ಶುಶ್ರೂಷಕ ಕಾಲೇಜಿನ ವಿದ್ಯಾರ್ಥಿನಿ ಭೂಮಿಕ ಬಿ.ಎಸ್ ಪ್ರಾರ್ಥನ ಗೀತೆ ಹಾಡಿದರು, ಐಸಿಟಿಸಿ ಸಿಟಿ ಆಸ್ಪತ್ರೆಯ ಆಪ್ತ ಸಮಾಲೋಚಕ ಮಹಾದೇವ ವೈ.ಬಿ ನಿರೂಪಿಸಿದರು, ಉಮೇಶ್ ಟಿ ವಂದಿಸಿದರು.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!