ಚುನಾವಣಾ ರಾಜಕಾರಣದಿಂದ ಯಡಿಯೂರಪ್ಪ ನಿವೃತ್ತಿ.! ಪುತ್ರನಿಗಾಗಿ ಕ್ಷೇತ್ರ ತ್ಯಾಗಕ್ಕೆ ತೀರ್ಮಾನ.!
ಶಿವಮೊಗ್ಗ: ಮಗನಿಗಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುವ ಇಂಗಿತವನ್ನು ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಇಂದು ಬಿಎಸ್ವೈ ನೀಡಿದ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನಕ್ಕೆ ಕಾರಣವಾಗಿದೆ. ತಾವು ಮುಂದಿನ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ದಿಸುವುದಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಪುತ್ರ ವಿಜಯೇಂದ್ರ ಅವರ ಸ್ಪರ್ಧೆ ಕುರಿತು ಸುಳಿವು ನೀಡಿದರು. ಮುಂದಿನ ಚುನಾವಣೆಯಲ್ಲಿ ತಾವು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸದಿರಲು ನಿರ್ಧರಿಸಿರುವುದರಿಂದ ಪುತ್ರ ವಿಜಯೇಂದ್ರ ಅವರು ಶಿಕಾರಿಪುರದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರು ತಿಳಿಸಿದರು. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕೆಂಬ ಒತ್ತಡವಿದೆ. ಆದರೆ ತಾವು ಶಿಕಾರಿಪುರದಿಂದ ಸ್ಪರ್ಧಿಸದಿರಲು ತೀರ್ಮಾನಿಸಿರುವುದರಿಂದ ವಿಜಯೇಂದ್ರ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಎಸ್ವೈ ತಿಳಿಸಿದರು.
ವಿಜಯೇಂದ್ರ ಅವರನ್ನು ನನಗಿಂತಲೂ ಹೆಚ್ಚಿನ ಅಂತರದಿಂದ ಗೆಲ್ಲಿಸಬೇಕೆಂದು ಶಿವಮೊಗ್ಗ ಜನತೆಗೆ ಬಿಎಸ್ವೈ ಮನವಿ ಮಾಡಿದರು.