ದೇಹ, ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಯೋಗ ಸಹಕಾರಿ
ದಾವಣಗೆರೆ: ಆರೋಗ್ಯವೆಂದರೆ ಕೇವಲ ದೈಹಿಕ ರೋಗಗಳಿಂದ ಮುಕ್ತರಾಗುವುದಲ್ಲ. ಮಾನಸಿಕವಾಗಿ ಸದೃಢರಾಗುವ ಮೂಲಕ ಉತ್ತಮ ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಯೋಗ ಸಹಕಾರಿ ಎಂದು ದಾವಣಗೆರೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರ್ ಗೌಡ ಹೇಳಿದರು.
ಬುಧವಾರ ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಹಾಗೂ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್, ಬಸವಾಪಟ್ಟಣ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿನಿತ್ಯದ ದಿನಚರಿಯನ್ನು ಪಾಲಿಸಿಕೊಂಡು, ನಿಯಮಿತ ವ್ಯಾಯಾಮ, ಯೋಗ ಮಾಡಿದರೆ ನಿರಂತರವಾಗಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇದಲ್ಲದೇ ಹಿತ, ಮಿತ ಹಾಗೂ ಋತುಗಳಿಗೆ ಅನುಗುಣವಾಗಿ ಆಹಾರ ಸೇವಿಸಿದರೆ ನಮಗೆ ಯಾವುದೇ ರೋಗಗಳು ಬರುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂಬಳೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎಂ.ಕುಮಾರ್, ನಮ್ಮ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆದಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ರೋಗಗಳನ್ನು ಪತ್ತೆ ಹಚ್ಚುವ ಮೂಲಕ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಘದ ಹಿರಿಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ಆರೋಗ್ಯವೇ ಭಾಗ್ಯ, ಅರೋಗ್ಯ ಸರಿಯಾಗಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಅದಕ್ಕಾಗಿ ನಾವೆಲ್ಲರೂ ಆರೋಗ್ಯದತ್ತ ಗಮನ ಕೊಡಬೇಕೆಂದರು.
ಸ್ಥಳೀಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ ಮಾತನಾಡಿದರು.
ಶಿಬಿರದಲ್ಲಿ ದಾವಣಗೆರೆಯ ವಾಸನ್ ಐ ಕೇರ್ ವತಿಯಿಂದ ಉಚಿತ ನೇತ್ರ ತಪಾಸಣೆಯನ್ನು ಆಯೋಜಿಸಲಾಗಿತ್ತು, ಈ ವೇಳೆ ೧೫೮ ಜನರು ಕಣ್ಣಿನ ಪರೀಕ್ಷೆಗೊಳಪಟ್ಟು ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಯಿತು.ಆಯುಷ್ ಚಿಕಿತ್ಸಾಲಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ನಡೆದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರದಲ್ಲಿ ೧೩೦ ಜನರು ಸದುಪಯೋಗ ಪಡೆದುಕೊಂಡರು.
ಚಿಕಿತ್ಸಾ ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ.ಸೌಭಾಗ್ಯ, ಡಾ.ಸೈಯದ್ ಶಂಷುದ್ದೀನ್, ಡಾ.ಸಿದ್ದೇಶ್.ಈ.ಬಿಸನಳ್ಳಿ, ಡಾ.ಡಿ.ಎಸ್.ಪ್ರೀತಿ ಪಾಲ್ಗೊಂಡು ತಪಾಸಣೆ ನಡೆಸಿದರು. ರಾಜಾರಾಮ್ ಇದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಇತರರು ಇದ್ದರು.