ಚನ್ನಗಿರಿ ಶಾಸಕರ ಕಚೇರಿಯಲ್ಲಿ 1.62 ಕೋಟಿ ಹಣ ಪತ್ತೆ: ಲೋಕಾ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತದ ಅಧ್ಯಕ್ಷ, ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಲಂಚ ಪಡೆಯುವಾಗ ಇಡೀ ಕಚೇರಿಯನ್ನು ಶೋಧಿಸಿದಾಗ ಒಟ್ಟಾರೆ 1.62 ಕೋಟಿ ರೂ. ಸಿಕ್ಕಿದೆ ಎಂದು ಲೋಕಾಯುಕ್ತ ಐಜಿಪಿ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದ್ದಾರೆ.
ಖಾಸಗಿ ವ್ಯಕ್ತಿಯೊಬ್ಬರು ಗುರುವಾರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರ ಆಧಾರದ ಮೇರೆಗೆ ಎಫ್.ಐ.ಆರ್. ದಾಖಲಿಸಿ ದಾಳಿ ಮಾಡಲಾಗಿದೆ ಎಂದು ಐಜಿಪಿ ರಾವ್ ಹೇಳಿದರು.
ಈ ಪ್ರಕರಣದಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪಾತ್ರ ಇರುವ ಬಗ್ಗೆ ಇನ್ನೂ ತನಿಖೆ ನಡೆಸಬೇಕಿದೆ. ತನಿಖೆ ಈಗ ಪ್ರಾಥಮಿಕ ಹಂತದಲ್ಲಿದೆ ಎಂದವರು ಹೇಳಿದರು.
ಸದ್ಯ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ವಿರೂಪಾಕ್ಷಪ್ಪ ಅವರ ನಿವಾಸದಲ್ಲೂ ಲೋಕಾಯುಕ್ತ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.
2013ರ ಜೂನ್ 11ನೇ ತಾರೀಖು ಮಾಡಾಳು ವಿರುಪಾಕ್ಷಪ್ಪ ಕುಟುಂಬದವರ ವಿರುದ್ದ ಲೋಕಾಯುಕ್ತ ಪೊಲೀಸರು ದಾವಣಗೆರೆಯ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ನೀಡಿದ್ದ ದೂರಿನ ವಿಚಾರಣೆ ಲೋಕಾಯುಕ್ತ ಕೋರ್ಟ್ ನಲ್ಲಿ ನಡೆಯುತ್ತಿದ್ದರೂ ಇವರಿಗೆ ಯಾವುದೇ ಭಯವಿಲ್ಲದೆ ಲಂಚಗುಳಿತನಕ್ಕೆ ನಿಂತಿರುವುದು ಸಾರ್ವಜನಿಕ ವಲಯದಲ್ಲಿ ಖೇದ ಮೂಡಿಸಿದೆ.