ತುಮಕೂರು: ರಾಜ್ಯದಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅವಘಡಗಳಲ್ಲಿ ಐವರು ಮಕ್ಕಳು ಸೇರಿದಂತೆ 15 ಮಂದಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.
ಮಡಿಕೇರಿ ಮತ್ತು ತುಮಕೂರಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 11 ಜನ ಮೃತಪಟ್ಟಿದ್ದರೆ, ಬೆಳಗಾವಿ ಜಿಲ್ಲೆಯ ಗೋಕಾಕ ಬಳಿ ಧುಪದಾಳ ಜಲಾಶಯದ ಹತ್ತಿರ ಈಜಲು ತೆರಳಿದ್ದ ನಾಲ್ವರು ಯುವಕರು ಕೆಸರಿನಲ್ಲಿ ಸಿಕ್ಕಿ ಅಸುನೀಗಿದ್ದಾರೆ.
ಕೊಡಗಿನ ಗಡಿಭಾಗ ಸಂಪಾಜೆಯ ಪೆಟ್ರೋಲ್ ಬಂಕ್ ಸಮೀಪ ಕಾರು ಮತ್ತು ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಮಹಿಳೆಯರು, ಮೂವರು ಮಕ್ಕಳು ಸೇರಿ 6 ಮಂದಿ ಮೃತಪಟ್ಟರು.
ಮಳವಳ್ಳಿ ತಾಲ್ಲೂಕಿನ ಕುಮಾರ್, ಶಿಲ್ಪಾ, ಪ್ರಿಯಾಂಕಾ ಹಾಗೂ ಮಕ್ಕಳಾದ ಎಸ್.ಎಸ್.ಗೌಡ, ಮನುಶ್ರೀ ಹಾಗೂ ನಿಶಿಕಾ ಮೃತರು. ಮಂಡ್ಯದ ಗಾಂಧಿನಗರದ ನಿವಾಸಿ ಮಂಜುನಾಥ ಹಾಗೂ 6 ವರ್ಷದ ಮಗು ಬಿಯಾನ್ ಗೌಡ ಗಾಯಗೊಂಡಿದ್ದು, ಸ್ಥಿತಿ ಗಂಭೀರ ವಾಗಿದೆ. ‘ಬೆಂಗಳೂರಿನಲ್ಲಿ ವಾಸವಿದ್ದ ಇವರು ರಜೆ ಇದ್ದುದರಿಂದ ಮಂಗಳೂರಿನತ್ತ ಪ್ರವಾಸ ತೆರಳಿದ್ದರು. ಕಾರು ಮತ್ತು ಬಸ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಪೂರ್ಣ ನಜ್ಜುಗುಜ್ಜಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಸಮೀಪ ಇನ್ನೊವಾ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು ವಿಜಯನಗರ ದಾಸರಹಳ್ಳಿ ನಿವಾಸಿ ಕೆಎಸ್‌ಸಿಸಿಎಫ್ ಸಂಸ್ಥೆ ವ್ಯವಸ್ಥಾಪಕ ಗೋವಿಂದ ನಾಯಕ್ (58), ಪತ್ನಿ ತಿಪ್ಪಮ್ಮ (52), ಸಂಬಂಧಿಕರ ಮಕ್ಕಳಾದ ದಿನೇಶ್ (12), ಪಿಂಕಿ (15)(ಇಬ್ಬರೂ ಚಿತ್ರದುರ್ಗ ಜಿಲ್ಲೆ, ಜಾಜೂರು ಗ್ರಾಮದವರು), ಕಾರು ಚಾಲಕ ಕುಣಿಗಲ್‌ನ ರಾಜೇಶ್ (40) ಮೃತಪಟ್ಟವರು.
