5 ಚಿನ್ನದ ಪದಕ ಪಡೆದ ದಾವಣಗೆರೆ ವಿಶ್ವವಿದ್ಯಾಲಯದ ಎಂಬಿಎ ವಿದ್ಯಾರ್ಥಿನಿ ಸ್ವಪ್ನಾ : ತಾಯಿ ಆಸೆ ಈಡೇರಿಸಿದ ತೃಪ್ತಿಯಲ್ಲಿ ಸ್ವಪ್ನ!

ದಾವಣಗೆರೆ : ಕಷ್ಟದ ಜೀವನದಿಂದ ಬೇಸತ್ತು, ವಿದ್ಯಾಭ್ಯಾಸಕ್ಕಾಗಿ ಹಣ ಇರದೆ ಅರ್ಧಕ್ಕೆ ವಿದ್ಯಾಭ್ಯಾಸ ಮೊಟುಕುಗೊಳಿಸಿದ ವಿದ್ಯಾರ್ಥಿನಿಯೊಬ್ಬರು ಇಂದು 5 ಚಿನ್ನದ ಪದಕ ಪಡೆದು ವಿಶೇಷವಾ ಸಾಧನೆ ಮಾಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಕೆಲಸ ಮಾಡಿ ಕೊಂಚ ಹಣ ಜೋಡಿಸಿಕೊಂಡು ಮತ್ತೇ ಕಾಲೇಜಿಗೆ ಸೇರಿ ಕಠಿಣ ಪರಿಶ್ರಮದಿಂದ ಓದಿ ಈಗ ತನ್ನ ಕಷ್ಟಕ್ಕೆ ಸಿಕ್ಕ ಪ್ರತಿಫಲ ಕಂಡು ಸಂತಸದಿಂದಿದ್ದಾರೆ ಸ್ವಪ್ನಾ. ತನ್ನ ಸಾಧನೆಯ ಕುರಿತು ಸಂತಸ ವ್ಯಕ್ತಪಡಿಸಿರುವ ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿನಿ ಎಸ್.ಎಂ. ಸ್ವಪ್ನಾ ಮನೆಯಲ್ಲಿನ ಬಡತನದ ಸಂಕಷ್ಟ ಎದುರಿಸಿಯೂ ಈ ಸಾಧನೆ ಮಾಡಿರುವುದು ನನಗಿಂತ ನನ್ನ ತಾಯಿಗೆ ಹೆಚ್ಚು ಖುಷಿಯಾಗಿರುತ್ತದೆ. ನಾನು ರ‍್ಯಾಂಕ್ ಬರಬೇಕೆಂಬುದು ನನ್ನ ತಾಯಿಯ ಆಸೆಯಾಗಿತ್ತು. ಅದನ್ನು ಈಡೇರಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.

ದಾವಣಗೆರೆ ವಿಶ್ವ ವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ನಾನು ಚಿನ್ನದ ಪದಕ ಪಡೆಯುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ, ಸಖತ್ ಥ್ರಿಲ್ ಆಗಿದೆ ಎಂದು 5 ಬಂಗಾರದ ಪದಕ ಗೆದ್ದ ದಾವಣಗೆರೆ ವಿಶ್ವವಿದ್ಯಾನಿಲಯದ ಎಂಬಿಎ ವಿದ್ಯಾರ್ಥಿನಿ ಎಸ್.ಎಂ. ಸ್ವಪ್ನಾ ಸಂತಸ ವ್ಯಕ್ತಪಡಿಸಿದ್ದಾರೆ. ದಾವಣಗೆರೆಯ ವಿದ್ಯಾನಗರದ ನಿವಾಸಿ ಮಂಜುನಾಥ್ ಎಸ್.ಎಂ. ಹಾಗೂ ಗಿರಿಜಮ್ಮ ದಂಪತಿಯ ಪುತ್ರಿ ಸ್ವಪ್ನಾ. “ನಾನು ಎಂಬಿಎ ವಿಭಾಗದಲ್ಲಿ ಓದಿ ರ‍್ಯಾಂಕ್ ಬರುತ್ತೇನೆ ಎಂಬ ನಿರೀಕ್ಷೆಯಂತೂ ಇರಲೇ ಇಲ್ಲ. ನಾನು ರ‍್ಯಾಂಕ್ ಸ್ಟೂಡೆಂಟ್ ಸಹ ಅಲ್ಲ. ಸಾಧಾರಣವಾಗಿ ಓದುತ್ತಿದ್ದ ವಿದ್ಯಾರ್ಥಿನಿ. ಐದು ಸ್ವರ್ಣ ಪದಕ ಬಂದಿದೆ ಎಂಬ ಸುದ್ದಿ ಕೇಳುತ್ತಿದ್ದಂತೆ ಸಖತ್ ಥ್ರಿಲ್ ಆದೆ. ಮೊದಲಿನಿಂದಲೂ ನನ್ನ ತಾಯಿಗೆ ನಾನು ರ‍್ಯಾಂಕ್ ಬರಬೇಕು. ಬೇರೆ ಮಕ್ಕಳಂತೆ ಸಾಧನೆ ಮಾಡಬೇಕು ಎಂಬ ಕನಸಿತ್ತು. ಆದರೆ ಚಿಕ್ಕ ವಯಸ್ಸಿನಿಂದ ಸಾಧ್ಯವಾಗಿರಲಿಲ್ಲ. ಈಗ ಅದನ್ನು ಸಾಧಿಸಿದ್ದೇನೆ ಎನ್ನುವುದಕ್ಕಿಂತ ನನ್ನ ತಾಯಿ ಆಸೆ ಈಡೇರಿಸಿದ್ದು ತುಂಬಾನೇ ಖುಷಿ ಕೊಟ್ಟಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.

“ನಾನು ಎಂಬಿಎ ಮೊದಲ ಹಾಗೂ ಎರಡನೇ ಸೆಮಿಸ್ಟರ್ ಓದುವಾಗ ನಾನು ಸಹ ಹೆಚ್ಚಿನ ಅಂಕ ಪಡೆಯಬೇಕು ಎಂಬ ಹಂಬಲ ಬಂತು. ನಾನು ಎಂಬಿಎ ಮುಗಿಯುವವರೆಗೆ ಉಪನ್ಯಾಸಕರು ಹೇಳಿಕೊಟ್ಟ ಪಾಠ, ಹೇಳಿದ ಹಿತವಚನಗಳು ನನಗೆ ಸ್ಫೂರ್ತಿ ತಂದವು. ಗುರುಗಳಿಗೆ ಏನೇ ಕೇಳಿದರೂ ಇಲ್ಲ ಎನ್ನುತ್ತಿರಲಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಜೊತೆಗೆ ಪಾಠ ವಿಚಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಗೊಂದಲಕ್ಕೆ ಪರಿಹಾರ ಒದಗಿಸಿಕೊಡುತ್ತಿದ್ದರು. ಇದು ನನ್ನ ಸಾಧನೆಗೆ ಕಾರಣವಾದ ಪ್ರಮುಖ ಅಂಶ ಎನ್ನುತ್ತಾರೆ,” ಸ್ವಪ್ನಾ.

ಪ್ರತಿದಿನ ರಾತ್ರಿ 2 ಗಂಟೆಯವರೆಗೆ ವಿದ್ಯಾಭ್ಯಾಸ :
ನನ್ನ ಅಣ್ಣ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಪ್ರತಿದಿನ ರಾತ್ರಿ ಹತ್ತು ಗಂಟೆಯಿಂದ ಮಧ್ಯರಾತ್ರಿ 1 ರಿಂದ 2 ಗಂಟೆಯವರೆಗೆ ಓದುತ್ತಿದ್ದೆ. ಒಮ್ಮೊಮ್ಮೆ ಹೆಚ್ಚೂ ಸಮಯ ಓದುತ್ತಿದ್ದೆ. ಪರೀಕ್ಷೆ ವೇಳೆ ತುಂಬಾ ಕಠಿಣ ಶ್ರಮ, ಆಸಕ್ತಿಯಿಂದ ಓದುತ್ತಿದ್ದೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಠ ಇತ್ತು. ಬಿಬಿಎಂ ಸೇರಿದಾಗಲೇ ಏನನ್ನಾದರೂ ಸಾಧನೆ ಮಾಡಬೇಕೆಂಬ ಹಂಬಲ, ತುಡಿತ ಇತ್ತು. ಅದು ಈಗ ಈಡೇರಿದೆ ಎಂದು ಹೇಳಿದ್ದಾರೆ. ಎರಡು ವರ್ಷ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡೆ “2017ರಲ್ಲಿ ಬಿ.ಕಾಂ ಪೂರೈಸಿದ್ದ ಸ್ವಪ್ನಾ ಮನೆಯಲ್ಲಿನ ಬಡತನದಿಂದಾಗಿ ಓದು ಅರ್ಧಕ್ಕೆ ನಿಲ್ಲಿಸಿದ್ದರು. ದಾವಣಗೆರೆಯ ವಿದ್ಯಾನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇದ್ದೇವು. ಆಗ ಮನೆಯ ನಿರ್ವಹಣೆಗೆ ಕಷ್ಟ ಆಗಿತ್ತು. ಸಂಸಾರದ ನೌಕೆ ಸಾಗಲು ಹೆಗಲು ಕೊಟ್ಟರು. ಅಣ್ಣನ ಸಂಪಾದನೆಯಿಂದ ಜೀವನ ನಡೆಯುತಿತ್ತು. ಅಣ್ಣನ ದುಡಿಮೆಯಿಂದಲೇ ಅಪ್ಪ, ಅಮ್ಮ, ನನ್ನ ಬದುಕು ಸಾಗ ಬೇಕಿತ್ತು. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲ ಮಹಾಟಿವಿ ಶೋರೂಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಕ್ಯಾಶಿಯರ್ ಆಗಿದ್ದೆ. ಅಲ್ಲಿ ಮ್ಯಾನೇಜರ್, ನನ್ನ ಮೇಲಿನವರ ಕೆಲಸ ಗಮನಿಸುತ್ತಿದ್ದೆ. ನಾನು ಇವರಂತೆಯೇ ಇಲ್ಲವೇ ಹೆಚ್ಚಿನ ಸಾಧನೆ ಮಾಡಬೇಕೆಂಬ ಹೆಬ್ಬಯಕೆ ಮೂಡಿತು. ಕಠಿಣ ನಿರ್ಧಾರ ಮಾಡಿದೆ. ಜೊತೆಗೆ ಒಂದಿಷ್ಟು ಹಣ ಗಳಿಸಿ ಕೊಂಡೆ. ಆ ಬಳಿಕ ಅಂದರೆ ಎರಡು ವರ್ಷಗಳ ಬಳಿಕ ಬಿಬಿಎಂಗೆ ಸೇರಿದೆ. ಕಷ್ಟಪಟ್ಟು ಓದಿದ್ದಕ್ಕೆ ಪ್ರತಿಫಲ ಸಿಕ್ಕಿದೆ,” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!