60 ವರ್ಷ ಮೇಲ್ಪಟ್ಟವರಿಗೆ ಮನೆಬಾಗಿಲಿಗೆ ಪಿಂಚಣಿ ದೊರೆಯುವಂತೆ ಕ್ರಮ – ಕಂದಾಯ ಸಚಿವ ಆರ್ ಅಶೋಕ್‌

ದಾವಣಗೆರೆ: ಅರವತ್ತು ವರ್ಷ ಮೇಲ್ಪಟ್ಟವರು ಪಿಂಚಣಿ ಮಂಜೂರಾತಿ ಆದೇಶ ಪಡೆಯಲು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ, ಇನ್ನು ಮುಂದೆ ಅರ್ಹರ ಮನೆ ಬಾಗಿಲಿಗೇ ಪಿಂಚಣಿ ಮಂಜೂರಾತಿ ಆದೇಶ ದೊರೆಯುವಂತೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಜಿಲ್ಲೆಯ ನ್ಯಾಮತಿ ತಾಲ್ಲೂಕು ಸುರಹೊನ್ನೆ ಗ್ರಾಮದಲ್ಲಿ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ರಾಜರು. ಹೀಗಾಗಿ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳೀಯವಾಗಿಯೇ ಅವುಗಳಿಗೆ ಪರಿಹಾರ ಕಲ್ಪಿಸುವುದು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು, ಪೋಡಿ, ಪಿಂಚಣಿ, ಮುಟೇಷನ್ ಮುಂತಾದ ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಸಚಿವರು, ಉನ್ನತ ಅಧಿಕಾರಿಗಳಿಗೆ ರಸ್ತೆಗಳಲ್ಲಿಯೇ ಅರ್ಜಿ ಸಲ್ಲಿಸುವಂತಹ ಪರಿಸ್ಥಿತಿ ನೋಡಿದ್ದೇನೆ. ಸಮಸ್ಯೆಗಳನ್ನು ಹೊತ್ತಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿ, ತಹಸಿಲ್ದಾರರ ಕಚೇರಿಗೆ ಅಲೆಯುವ ಸ್ಥಿತಿಯನ್ನು ತಪ್ಪಿಸುವ ಸಲುವಾಗಿಯೇ ಜಿಲ್ಲಾಡಳಿತವೇ ಗ್ರಾಮಕ್ಕೆ ಹೋಗಿ, ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ರೂಪಿಸಲಾಯಿತು ಎಂದರು.

60 ವರ್ಷ ವಯಸ್ಸು ಮೀರಿದವರು ಪಿಂಚಣಿಗಾಗಿ ಇನ್ನು ಅರ್ಜಿ ಹಿಡಿದು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೆ ಕಂದಾಯ ಇಲಾಖೆ ಬಳಿ ಜನರ ಆಧಾರ್ ದಾಖಲೆಗಳಿವೆ, ಪಡಿತರ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದೆ. ಬಿಪಿಎಲ್, ಎಪಿಎಲ್ ಕುಟುಂಬಗಳ ಮಾಹಿತಿ ಲಭ್ಯವಿದೆ ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಇನ್ನು ಮುಂದೆ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ಪಿಂಚಣಿ ಆದೇಶ ಪತ್ರ ತಲುಪಿಸಬೇಕು. ದಾಖಲೆಗಳನ್ನು ಕೊಡಿ ಎಂದು ಸತಾಯಿಸುವ ಸ್ಥಿತಿ ಇರಬಾರದು ಎಂದರು.

ರಾಜ್ಯದಲ್ಲಿ ಈ ರೀತಿ ಈಗಾಗಲೆ 2.75 ಲಕ್ಷ ಜನರಿಗೆ ಪಿಂಚಣಿ ಮಂಜೂರು ಮಾಡಲಾಗಿದ್ದು, ಪಿಂಚಣಿಗಾಗಿಯೇ ಸರ್ಕಾರ ವರ್ಷಕ್ಕೆ 9167 ಕೋಟಿ ರೂ. ಹಣ ಖರ್ಚು ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಕೂಡಲೆ 1 ಸಾವಿರ ಇದ್ದ ಪಿಂಚಣಿಯನ್ನು 1200 ಕ್ಕೆ ಹಾಗೂ 600 ರಿಂದ 800 ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದರು, ಅಲ್ಲದೆ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ಯೋಜನೆ ಜಾರಿಗೊಳಿಸಿದರು.

ರಾಜ್ಯದಲ್ಲಿ 923 ಹಟ್ಟಿ, ತಾಂಡಾ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಈಗಾಗಲೆ ಅಧಿಸೂಚನೆ ಹೊರಡಿಸಲಾಗಿದ್ದು, ಇನ್ನೂ ಅರ್ಹವಿರುವ ಹಟ್ಟಿ, ತಾಂಡಾಗಳನ್ನು ಕೂಡ ಕಂದಾಯ ಗ್ರಾಮಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!