ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಛತ್ತೀಸ್‌ಗಢದಲ್ಲಿ 7 ನಕ್ಸಲರು ಬಲಿ

ರಾಯ್ಪುರ: ಛತ್ತೀಸ್‌ಗಢದ ನಾರಾಯಣಪುರ-ಬಿಜಾಪುರ ಅಂತರ ಜಿಲ್ಲಾ ಗಡಿಯಲ್ಲಿರುವ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ 7 ನಕ್ಸಲರ ಹತ್ಯೆಯಾಗಿದೆ.

ಬೆಳಗ್ಗೆ 11 ಗಂಟೆ ಹೊತ್ತಿಗೆ ಭದ್ರತಾ ಪಡೆಗಳ ತಂಡವು ಕಾರ್ಯಾಚರಣೆ ನಡೆಸಿತು. ಈ ವೇಳೆ ಭದ್ರತಾ ಸಿಬ್ಬಂದಿ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆಯಿತು ಎಂದು ನಾರಾಯಣಪುರ ಪೊಲೀಸ್ ಅಧೀಕ್ಷಕ (ಎಸ್‌ಪಿ) ಪ್ರಭಾತ್ ಕುಮಾರ್ ತಿಳಿಸಿದ್ದಾರೆ.

ಈವರೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿ ಸಮವಸ್ತ್ರದಲ್ಲಿದ್ದ ಏಳು ನಕ್ಸಲರು ಬಲಿಯಾಗಿದ್ದಾರೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಏಳು ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ದಾಂತೇವಾಡ, ನಾರಾಯಣಪುರ ಮತ್ತು ಬಸ್ತಾರ್ ಜಿಲ್ಲೆಗಳ ಜಿಲ್ಲಾ ಮೀಸಲು ಗಾರ್ಡ್‌ನ ಸದಸ್ಯರು, ಬಸ್ತಾರ್ ಫೈಟರ್ಸ್ ಮತ್ತು ವಿಶೇಷ ಕಾರ್ಯಪಡೆ, ರಾಜ್ಯ ಪೊಲೀಸ್‌ನ ಘಟಕ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

ರಾಜ್ಯದಲ್ಲಿ ಈ ವರ್ಷ ಇಲ್ಲಿಯ ವರೆಗೆ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು 112 ನಕ್ಸಲರು ಹತ್ಯೆಯಾಗಿದ್ದಾರೆ.

ಏ.30 ರಂದು ಭದ್ರತಾ ಪಡೆಗಳು ನಾರಾಯಣಪುರ ಮತ್ತು ಕಂಕೇರ್‌ ಜಿಲ್ಲೆಗಳ ಗಡಿಯುದ್ದಕ್ಕೂ ನಡೆಸಿದ ಎನ್‌ಕೌಂಟರ್‌ಗೆ 10 ನಕ್ಸಲರು ಬಲಿಯಾಗಿದ್ದರು. ಅವರಲ್ಲಿ ಮೂವರು ಮಹಿಳೆಯರು ಸೇರಿದ್ದರು. ಏ.16 ರಂದು 29 ನಕ್ಸಲರು ಹತರಾಗಿದ್ದರು ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!