ದೇಶಾದ್ಯಂತ ಸದ್ದು ಮಾಡುತ್ತಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ
ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಎಂಥ ಅದ್ಭುತ ಸಂಗತಿ, ಸಿನಿಮಾದಿಂದ ಮಾತ್ರ ಇದು ಆಗಲು ಸಾಧ್ಯ’ ಎಂದು ಅನುಪಮ್ ಖೇರ್ ಹೇಳಿದ್ದಾರೆ. ದೇಶಾದ್ಯಂತ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಸಂಚಲನ ಸೃಷ್ಟಿಸಿದೆ. ಈ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರೂ ಸಖತ್ ಖುಷಿಯಲ್ಲಿದ್ದಾರೆ. ಅದರಲ್ಲೂ ನಟ ಅನುಪಮ್ ಖೇರ್ ಅವರ ಅಭಿನಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಹಿಟ್ ಆಗಿದೆ. ಮೊದಲ ದಿನ ಕೇವಲ 3.5 ಕೋಟಿ ರೂಪಾಯಿ ಗಳಿಸಿದ್ದ ಈ ಸಿನಿಮಾ ಈಗಾಗಲೇ 50 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಪರಿ ಯಶಸ್ಸು ಕಂಡಿದ್ದಕ್ಕಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಚಿತ್ರದ ಗೆಲುವಿನಿಂದ ಖುಷಿ ಆಗಿರುವ ನಟ ಅನುಪಮ್ ಖೇರ್ ಅವರು ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಏನ್ ಬೇಕಾದ್ರೂ ಆಗಬಹುದು’ ಎಂಬ ತಮ್ಮ ನಂಬಿಕೆಯ ಮಾತನ್ನು ಅವರು ಪುನಃ ಹೇಳಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಪುಷ್ಕರ್ ನಾಥ್ ಪಂಡಿತ್ ಎಂಬ ಪಾತ್ರವನ್ನು ಅನುಪಮ್ ಖೇರ್ ನಿಭಾಯಿಸಿದ್ದಾರೆ. ಈ ಚಿತ್ರಕ್ಕೆ ಜನರಿಂದ ಸಿಕ್ಕ ಪ್ರತಿಕ್ರಿಯೆ ಕಂಡು ಅವರು ಖುಷಿ ಆಗಿದ್ದಾರೆ. ‘ನನಗೆ ತುಂಬ ಸಂತೋಷ ಆಗುತ್ತಿದೆ. ಎಂಥ ಅದ್ಭುತ ಸಂಗತಿ. ಸಿನಿಮಾದಿಂದ ಮಾತ್ರ ಇದು ಆಗಲು ಸಾಧ್ಯ. ನಾವು ಸಿನಿಮಾ ಬಗ್ಗೆ ಇದ್ದ ಭರವಸೆಯನ್ನು ಬಿಟ್ಟಿದ್ದೆವು. ಇದು ಹಾಡು-ನೃತ್ಯದ ಸಿನಿಮಾ ಅಲ್ಲ. ಪೂರ್ತಿಯಾಗಿ ಪ್ರಚಾರ ಕೂಡ ಮಾಡಿರಲಿಲ್ಲ. ಏನ್ ಬೇಕಾದರೂ ಆಗಬಹುದು ಎಂಬ ನನ್ನ ಫಿಲಾಸಫಿ ಮತ್ತೆ ನಿಜವಾಗಿದೆ’ ಎಂದು ಅನುಪಮ್ ಖೇರ್ ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಬಹಳಷ್ಟು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿವೆ. ಇದು ಚಿತ್ರದ ಕಲೆಕ್ಷನ್‌ಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ‘ದಿ ಕಾಶ್ಮೀರ್ ಫೈಲ್ಸ್’ಗೆ ಮೊದಲ ಬಾರಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದು ಹರಿಯಾಣ. ನಂತರದಲ್ಲಿ ಗುಜರಾತ್, ಮಧ್ಯಪ್ರದೇಶಗಳೂ ವಿನಾಯಿತಿ ಘೋಷಿಸಿದವು. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರ ವೀಕ್ಷಿಸಿ ನಂತರ ಅದರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರು. ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಅಲ್ಲದೇ, ರಾಜ್ಯದ ಶಾಸಕರು ಹಾಗೂ ಸಚಿವರಿಗೆ ಚಿತ್ರ ಪ್ರದರ್ಶನವನ್ನೂ ವಿಧಾನಸಭಾ ಸಚಿವಾಲಯ ಏರ್ಪಡಿಸಿತು. ತೆರಿಗೆ ವಿನಾಯಿತಿ ಘೋಷಿಸಿದ ರಾಜ್ಯಗಳಿಗೆ ಗೋವಾ, ತ್ರಿಪುರಾ, ಉತ್ತರಾಖಂಡ್ ಕೂಡ ಸೇರ್ಪಡೆಯಾಗಿದ್ದು, ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ತೆರಿಗೆ ವಿನಾಯಿತಿ ನೀಡಿದ್ದಾರೆ.
ಚಿತ್ರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೆಚ್ಚುಗೆ:
‘ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಯಾವ ರೀತಿ ದಾಳಿಯಾಗಿತ್ತು ಎನ್ನುವುದನ್ನ ತೋರಿಸಿದ್ದಾರೆ. ಉಗ್ರರ ಕೈಯಲ್ಲಿ ಸಿಕ್ಕು ಅದೆಷ್ಟೋ ಜನರು ಪ್ರಾಣವನ್ನ ಬಿಟ್ಟಿದ್ದಾರೆ. ಹೀಗಾಗಿಯೇ ಅಲ್ಲಿ ಆರ್ಟಿಕಲ್ 370 ಅನ್ನು ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಇದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ನೋಡಿದ ಬಳಿಕ ಅಭಿಪ್ರಾಯ ಹಂಚಿಕೊಂಡರು.