ಪದವಿ, ನರ್ಸಿಂಗ್, ಪಿಜಿ ವಿದ್ಯಾರ್ಥಿಗಳಿಗೂ ಟ್ವಿನ್ನಿಂಗ್ ಯೋಜನೆ ವಿಸ್ತರಣೆ! ಏನಿದು ಟ್ವಿನ್ವಿಂಗ್ ಯೋಜನೆ?

twinning

ಬೆಂಗಳೂರು: ಸದ್ಯಕ್ಕೆ ರಾಜ್ಯದ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ ಡಿಗ್ರಿ ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅಮೆರಿಕದ ಅತ್ಯುತ್ತಮ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಬುಧವಾರ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. “ರಾಜ್ಯದ ಡಿಪ್ಲೋಮಾ ವಿದ್ಯಾರ್ಥಿಗಳು ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಓದುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದ ಈಗಾಗಲೇ ಅನುಷ್ಠಾನಕ್ಕೆ ಬಂದಿದೆ. ಇದನ್ನು ವಿಸ್ತರಿಸಬೇಕಾದ ಅಗತ್ಯವಿದ್ದು, ಇದು ಶಿಕ್ಷಣದ ಅಂತಾರಾಷ್ಟಿಕರಣಕ್ಕೆ ಪೂರಕವಾಗಿರಲಿದೆ,” ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. “ಉದ್ದೇಶಿತ ಗುರಿಯನ್ನು ಸಾಧಿಸಬೇಕೆಂದರೆ ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜ್, ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಇಂಡಿಯಾನಾ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ಹ್ಯೂಸನ್ ಯೂನಿವರ್ಸಿಟಿ, ಥಿಯಲ್ ಕಾಲೇಜು ಮತ್ತು ಅಲ್ವರ್ನಿಯಾ ಹಾಗೂ ಮಿಸರಿಕಾರ್ಡಿಯಾ ವಿ.ವಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು,” ಸೂಕ್ತ ಎಂದು ಕನ್ನಿಕಾ ಸಭೆಗೆ ತಿಳಿಸಿದರು.

ಟ್ವಿನ್ನಿಂಗ್ ಕಾರ್ಯಕ್ರಮದಡಿ ನಮ್ಮ ವಿದ್ಯಾರ್ಥಿಗಳನ್ನು ಪದವಿ/ ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿ.ವಿಗಳಿಗೇ ನೇರವಾಗಿ ಕಳುಹಿಸಿ ಕೊಡಲಾಗುವುದು. ವೇತನಸಹಿತ ಇಂಟರ್ನ್ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಅಲ್ಲದೆ, ಇಷ್ಟವಿರುವವರು ಅಮೆರಿಕದಲ್ಲೇ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶವಿರಲಿದೆ,” ಎಂದು ಉನ್ನತ ಸಚಿವರು ವಿವರಿಸಿದರು. ಒಡಂಬಡಿಕೆಗಳು ಜಾರಿಗೆ ಬಂದರೆ 6 ವರ್ಷಗಳ ಟ್ವಿನ್ನಿಂಗ್ ಡಿಗ್ರಿ, 5 ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, 4 ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ (ಇಂಟಿಗ್ರೇಟೆಡ್) ಮತ್ತು ಎಂ.ಎಸ್. ಬಯೋಕೆಮಿಸ್ಟಿ (ಇಂಟಿಗ್ರೇಟೆಡ್) ಪದವಿ ಹೊಂದಲು ಅವಕಾಶ ಸಿಗಲಿವೆ ಎಂದು ಅವರು ಮಾಹಿತಿ ನೀಡಿದರು. “ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಮತ್ತು ಆರೋಗ್ಯ ವ್ಯವಸ್ಥಾಪನಾ ಪದವಿಗಳಿಗೆ ತುಂಬಾ ಬೇಡಿಕೆ ಇದೆ. ಇದನ್ನು ಗುಣಮಟ್ಟದೊಂದಿಗೆ ಕಲಿಸಬೇಕಾದ್ದು ಅಗತ್ಯವಿದೆ. ಇಂತಹ ಕೋರ್ಸ್ಗಳಿಗೆ ಆಗುವ ವೆಚ್ಚ ಮತ್ತು ಅದರ ಸ್ವರೂಪ ಹೇಗಿರಬೇಕು. ಇದನ್ನು ಹೇಗೆ ಜಾರಿಗೊಳಿಸಬೇಕು ಎನ್ನು ವುದನ್ನು ಅಧಿಕಾರಿಗಳು ಕೆಲವೇ ದಿನಗಳಲ್ಲಿ ಆಖೈರುಗೊಳಿಸಬೇಕು ಎಂದು ಹೇಳಿದರು.ಇಂತಹ ಒಡಂಬಡಿಕೆಗಳಿದ ರಾಜ್ಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಆಯ್ಕೆಯಾಗುವ ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರೆ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ತಗಲುವ ವೆಚ್ಚವನ್ನು ಸರಕಾರವೇ ಸಂಪೂರ್ಣವಾಗಿ ಭರಿಸಲು ಅವಕಾಶ ಇದೆ. ಅಗತ್ಯ ಬಿದ್ದರೆ ಬ್ಯಾಂಕ್ ಸಾಲಕ್ಕೆ ಕೂಡ ವ್ಯವಸ್ಥೆ ಮಾಡಲಾಗುವುದು ಎಂದರು. ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ರಾಯಭಾರಿ ಕನ್ನಿಕಾ ಚೌಧರಿ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!