ಚರಂಡಿ ಸ್ವಚ್ಚತೆಗೆ ಪೋಲಿಂಗ್ ಮೂಲಕ ಜನಾಭಿಪ್ರಾಯ ಸಂಗ್ರಹ! ಜನರಿಂದಲೇ ಚರಂಡಿ ಸ್ವಚ್ಚತೆ ಜನರಿಗೆ ಹಣ
ದಾವಣಗೆರೆ: ಜನರೆಲ್ಲ ಒಗ್ಗಟ್ಟಾಗಿ ತಮ್ಮ ಮನೆ ಮುಂದಿನ ಚರಂಡಿಯನ್ನು ತಾವೇ ಸ್ವಚ್ಚ ಮಾಡುವಂತೆ ಪ್ರೇರೇಪಿಸಿ, ಚರಂಡಿ ಸ್ವಚ್ಚತೆ ಅರಿವು ಮೂಡಿಸುವ ಸಲುವಾಗಿ ಕೈಗೊಂಡ ನನ್ನ ಮನೆ ನನ್ನ ಸ್ವಚ್ಚತೆ ಕಾರ್ಯಕ್ರಮಕ್ಕೆ ಚನ್ನಗಿರಿ ತಾಲೂಕಿನ ಅರೇಹಳ್ಳಿ ಗ್ರಾಮದ 4ನೇ ವಾರ್ಡಿನ ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.
ಗ್ರಾಮದ ಜನರಲ್ಲಿ ಸ್ವಚ್ಚತೆಯ ಅರಿವು, ಸಾರ್ವಜನಿಕ ಆಸ್ತಿಗಳು ತಮ್ಮ ಆಸ್ತಿಗಳೆಂಬ ಭಾವನೆ ಹಾಗೂ ಜನರ ತೆರಿಗೆ ಹಣ ಜನರಿಗೆ ತಲುಪಿಸುವಂತಹ ಉದ್ದೇಶದಿಂದ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್ ಕುಮಾರ್ ನನ್ನ ಮನೆ ನನ್ನ ಸ್ವಚ್ಚತೆ ಎಂಬ ಘೋಷವಾಕ್ಯದಡಿಯಲ್ಲಿ ಈ ಯೋಜನೆಯ ಸದುಪಯೋಗಕ್ಕೆ ಮುಂದಡಿ ಇಟ್ಟಿದ್ದರು.
ಈ ಹಿಂದೆ ಅಂದರೆ 2021-22ನೇ ಸಾಲಿನಲ್ಲಿ ಅರೇಹಳ್ಳಿ ಗ್ರಾಮದ ಜನರು ಈ ಯೋಜನೆಯ ಸದುಪಯೋಗಪಡಿಸಿಕೊಂಡು ತಮ್ಮ ಮನೆ ಮುಂದಿನ ಚರಂಡಿಯನ್ನು ಸ್ವಚ್ಚ ಮಾಡಿ ತಾವೇ ಹಣ ಪಡೆದಿದ್ದರು. ಇದೀಗ 2022-23ನೇ ಸಾಲಿನಲ್ಲಿ ಕಾರಿಗನೂರು ಗ್ರಾಮ ಪಂಚಾಯ್ತಿಯಿ0ದ ಮೀಸಲಿಟ್ಟ 2 ಲಕ್ಷ ಹಣದಲ್ಲಿ ಅರೇಹಳ್ಳಿ ಗ್ರಾಮದ 4ನೇ ವಾರ್ಡಿಗೆ 75 ಸಾವಿರ ರೂ. ಬಂದಿದ್ದು, ಜನರಿಂದಲೇ ಚರಂಡಿ ಸ್ವಚ್ಚತೆ ಮಾಡುವ ಸಲುವಾಗಿ ಇಂದು ಪೋಲಿಂಗ್ ಮಾಡಲಾಗಿದ್ದು, ಜನರಿಂದ ಅಭೂತಪೂರ್ವ ಬೆಂಬಲ ದೊರೆತಿದೆ.
2022-23ನೇ ಸಾಲಿನಲ್ಲಿ ವಾರ್ಷಿಕವಾಗಿ 75 ಸಾವಿರ ರೂ. ಅರೇಹಳ್ಳಿ ಗ್ರಾಮದ 4ನೇ ವಾರ್ಡಿಗೆ ಮೀಸಲಿಟ್ಟಿದ್ದು, ಈ ಹಣದಲ್ಲಿ ಜನರು ತಮ್ಮ ಮನೆ ಮುಂದಿನ ಚರಂಡಿಯನ್ನು ಒಟ್ಟು ಐದು ಬಾರಿ ಸ್ವಚ್ಚಗೊಳಿಸಬೇಕು. ಜೂನ್ 19ರಿಂದ ಆರಂಭವಾಗುವ ಚರಂಡಿ ಸ್ವಚ್ಚತೆ ಕೆಲಸ ನಂತರ ಆಗಸ್ಟ್ 14ಕ್ಕೆ, ಅಕ್ಟೋಬರ್ 16ಕ್ಕೆ, ಡಿಸೆಂಬರ್ 25ಕ್ಕೆ ಮತ್ತು 2023ರ ಮಾರ್ಚ್ 26ಕ್ಕೊಮ್ಮೆ ತಮ್ಮ ಮನೆ ಮುಂದಿನ ಚರಂಡಿಯನ್ನು ತಾವೇ ಸ್ವಚ್ಚಗೊಳಿಸಬೇಕು. ಈ ಬಗ್ಗೆ ಕಾರಿಗನೂರು ಗ್ರಾಮ ಪಂಚಾಯ್ತಿ ಸದಸ್ಯ ಚೇತನ್ ಕುಮಾರ್ ಇಂದು ಮನೆ ಮನೆಗೆ ಹೋಗಿ ಪೊಲೀಂಗ್ ಮಾಡುವ ಮೂಲಕ ಜನಾಭಿಪ್ರಾಯ ಪಡೆದುಕೊಂಡರು.
garudavoice21@gmail.com 9740365719