ದಾವಣಗೆರೆಯಲ್ಲಿ ಅದ್ಧೂರಿ ಶಿವಾಜಿ ಜಯಂತಿ ಶೌರ್ಯಕ್ಕೆ ಮತ್ತೊಂದು ಹೆಸರೇ ಶಿವಾಜಿ ಎಂದ ಬಸವಪ್ರಭು ಶ್ರೀ
ದಾವಣಗೆರೆ: ಶಿವಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯೋತ್ಸವವನ್ನು ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ನಗರ ದೇವತೆ ಶ್ರೀ ದುರ್ಗಾಂಭಿಕಾ ದೇವಿ ಬಳಿಯ ದುರ್ಗಾಂಭಿಕಾ ವೃತ್ತದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಮಾಲಾರ್ಪಣೆ ಮಾಡಿ, ಶಿವಾಜಿ ಜಯಂತಿ ಆಚರಣೆಗೆ ಶುಭ ಹಾರೈಸಿದರು.
ನಂತರ ದೇವರಾಜ ಅರಸು ಬಡಾವಣೆಯಲ್ಲಿನ ಕೃಷ್ಣಾಭವಾನಿ ಕಲ್ಯಾಮ ಮಂಟಪದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮವು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತಾನಾಡಿದ ಶ್ರೀ ಬಸವಪ್ರಭು ಸ್ವಾಮೀಜಿ ಅವರು, ಶೌರ್ಯಕ್ಕೆ ಮತ್ತೊಂದು ಹೆಸರೇ ಶಿವಾಜಿ ಮಹರಾಜರು. ವರ ಧೈರ್ಯ, ಸಾಹಸ ಎಲ್ಲರಿಗೂ ಪ್ರೇರಣೆಯಾಗಬೇಕು.
ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಶಿವಾಜಿ ಮಹರಾಜರನ್ನು ನೆನೆದಾಗ, ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಿದರು.
ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷತ್ರಿಯ ಮಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್, ಶಿವಾಜಿ ಅವರ ತಂದೆ ಶಹಾಜಿ ರಾಜೆ ಬೋಸ್ಲೆ ಅವರ ಸಮಾಧಿ ಸ್ಥಳವು ಚನ್ನಗಿರಿ ತಾಲ್ಲೂಕು ಹೊದಿಗೆರೆ ಗ್ರಾಮದಲ್ಲಿದೆ. ಆದರೆ ಇಲ್ಲಿಯವರೆಗೂ ಅದು ಅಭಿವೃದ್ದಿಯಾಗಿಲ್ಲ ಎಂದರು.
ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಸಮಾಧಿ ಅಭಿವೃದ್ಧಿಗೆ 5 ಕೋಟಿ ರೂ. ನೀಡಿರುವುದು ಅಭಿನಂದನಾರ್ಹ. ಆದರೆ ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಕಾರಣ, ಅಲ್ಲಿ ಜಾಗ ಖರೀದಿಸಿ, ಅಭಿವೃದ್ಧಿಗೊಳಿಸಲು 100 ಕೋಟಿ ರೂ.ಗಳ ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ.ವಿಠಲರಾವ್ ಟಿ.ಗಾಯಕ್ವಾಡ್ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಡಿ.ಮಾಲತೇಶರಾವ್ ಜಾಧವ್ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಉಪ ಮೇಯರ್ ಶ್ರೀಮತಿ ಗಾಯಿತ್ರಬಾಯಿ ಖಂಡೋಜಿರಾವ್ ಇತರರು ಉಪಸ್ಥಿತರಿದ್ದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ 40 ಜನರನ್ನು ಸನ್ಮಾನಿಸಲಾಯಿತು.