ಹರನ ಸ್ಮರಣೆಯಲ್ಲಿ ಮಿಂದೆದ್ದ ದಾವಣಗೆರೆ ಜನತೆ

ದಾವಣಗೆರೆ ಜನತೆ

ದಾವಣಗೆರೆ: ಮಹಾಶಿವರಾತ್ರಿ ದಾವಣಗೆರೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ದೇವಾಲಯಗಳನ್ನು ವಿದ್ಯುತ್‌ ದೀಪ, ತಳಿರು–ತೋರಣ, ಬಗೆ ಬಗೆಯ ಹೂ, ಬಿಲ್ವಪತ್ರೆಗಳಿಂದ ಅಲಂಕರಿಸಲಾಗಿತ್ತು. ನಗರದ ಶಿವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆದವು.

ಭಕ್ತರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ನೈವೇದ್ಯ ಸಲ್ಲಿಸಿದರು.

ನಗರದ ಗೀತಾಂಜಲಿ ಟಾಕೀಸ್ ಪಕ್ಕದಲ್ಲಿರುವ ಲಿಂಗೇಶ್ವರ ದೇವಾಲಯದಲ್ಲಿ ಶನಿವಾರ ಬೆಳಿಗ್ಗೆ 5.30ಕ್ಕೆ ರುದ್ರಾಭಿಷೇಕ ನೆರವೇರಿಸಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ರಾತ್ರಿ 2.30ರವರೆಗೂ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಿಳೆಯರು ಶಿವನ ಕುರಿತು ಸಾಮೂಹಿಕವಾಗಿ ವಚನ ಗೀತೆಗಳನ್ನು ಹಾಡಿದರು.

ನಗರದ ಹೊಂಡದ ಸರ್ಕಲ್‌ ಬಳಿಯ ಪಾತಾಳ ಲಿಂಗೇಶ್ವರ ದೇವಸ್ಥಾನದಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ನಗರದ ಅಥಣಿ ಸಂಯುಕ್ತ ಪದವಿಪೂರ್ವ ಕಾಲೇಜು ಬಳಿ ಇರುವ ಶಿವನ ವಿಗ್ರಹದ ಬಳಿ ಬೆಳಿಗ್ಗೆ ಅಗ್ನಿಹೋಮ, ಯೋಗ ಶಿವ ನಮಸ್ಕಾರಗಳು ನಡೆದವು. ಸಂಜೆ ವೀಣಾವಾದನ, ಸಮೂಹ ಯೋಗ ನೃತ್ಯ, ಜನಪದ ಗೀತೆ, ಗೊಂದಲಿಗರ ಪದಗಳು, ಶಿವ ತಾಂಡವ ನೃತ್ಯಗಳು ನಡೆದವು.

ಬಿಐಇಟಿ ಬಳಿ ಇರುವ ಶಿವ–ಧ್ಯಾನ ಮಂದಿರದಲ್ಲಿ ಬೆಳಿಗ್ಗೆ ಪೂಜೆ, ಪ್ರಸಾದ ವಿನಿಯೋಗ, ರಾತ್ರಿ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಭಕ್ತಿ ಮಂಜರಿ ಕಾರ್ಯಕ್ರಮ ನಡೆಯಿತು.

ಪಿ.ಜೆ. ಬಡಾವಣೆಯ ಕಾಶಿ ವಿಶ್ವನಾಥ ದೇವಾಲಯ, ವಿದ್ಯಾನಗರದ ಈಶ್ವರ–ಪಾರ್ವತಿ– ಗಣಪತಿ ದೇವಸ್ಥಾನ, ವಿನೋಬನಗರದ ಶಂಭುಲಿಂಗೇಶ್ವರ ಸ್ವಾಮಿ ದೇವಸ್ಥಾನ, ಕನ್ಯಕಾಪರಮೇಶ್ವರಿ ದೇವಸ್ಥಾನ, ಕೆ.ಟಿ.ಜೆ. ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!