ಗೃಹಿಣಿಯರಿಗೆ ಬಂಪರ್ ಗಿಫ್ಟ್ ನೀಡಿದ ಬೊಮ್ಮಾಯಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಘೋಷಿಸಿದ್ದ ಬಸ್ ಸಂಖ್ಯೆಯೂ ಹೆಚ್ಚಳ

The number of buses announced for the benefit of Bommai students who gave bumper gifts to the housewives also increased

ಗೃಹಿಣಿಯರಿಗೆ ಬಂಪರ್ ಗಿಫ್ಟ್ ನೀಡಿದ ಬೊಮ್ಮಾಯಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ

ಬೆಂಗಳೂರು : ಗೃಹಿಣಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 500 ರೂ.ಗಳನ್ನು 1000 ರೂ.ಗಳಿಗೆ ಹೆಚ್ಚಿಸುವುದಾಗಿ ಬೊಮ್ಮಾಯಿ ಹೇಳಿದರು. ಅವರು ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುತ್ತಾ ಈ ಘೋಷಣೆ ಮಾಡಿದರು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಜೆಟ್‍ನಲ್ಲಿ ಘೋಷಿಸಲಾಗಿದ್ದ ಒಂದು ಸಾವಿರ ಬಸ್ಸುಗಳನ್ನು ಎರಡು ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ​
ಕಟ್ಟಡ ಕಾರ್ಮಿಕರ ಮಕ್ಕಳಿಗೆ ನಾಲ್ಕು ಸಾವಿರ ಶಿಶು ವಿಹಾರಗಳನ್ನು ಪ್ರಾರಂಭಿಸಲು ಬಜೆಟ್‍ನಲ್ಲಿ ಅನುದಾನ ಮೀಸಲಿಡಲಾಗಿದೆ. ನಿರುದ್ಯೋಗಿಗಳಿಗೆ ಬದುಕುವ ದಾರಿ ಕಲ್ಪಿಸಲಾಗಿದ್ದು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಹಾಯಕರ ಗೌರವಧನವನ್ನು ಒಂದು ಸಾವಿರ ರೂ. ಗಳಿಗೆ ಹೆಚ್ಚಿಸಲಾಗಿದೆ. ಇ-ಕಾಮರ್ಸ್ ನಲ್ಲಿ ತೊಡಗಿರುವವರ ವಾಹನಗಳಿಗೆ 2 ಲಕ್ಷ ಜೀವಮ ವಿಮೆ ಹಾಗೂ ಅಪಘಾತ ವಿಮೆಯನ್ನು ಮೊದಲ ಬಾರಿಗೆ ಘೋಷಿಸಲಾಗಿದೆ. ಈ ಬಾರಿಯ ಆಯವ್ಯಯದಲ್ಲಿ ಘೋಷಿಸಲಾಗಿರುವ ಎಲ್ಲಾ ಯೋಜನೆಗಳು ನಮ್ಮ ಸರ್ಕಾರದ ಸೂಕ್ಷ್ಮತೆಯನ್ನು ಬಿಂಬಿಸುತ್ತದೆ ಎಂದರು.
ರಾಯಚೂರಿನಲ್ಲಿ ಏಮ್ಸ್ ಮಾದರಿಯ ಆಸ್ಪತ್ರೆ ಸ್ಥಾಪನೆಗೆ ಬೇಡಿಕೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಪುನರ್ ರಚನೆ ಮಾಡುತ್ತಿದೆ. ರಾಜ್ಯ ಸರ್ಕಾರವು ಭೂಮಿ, ಮೂಲಸೌಕರ್ಯದ ವೆಚ್ಚವನ್ನು ಭರಿಸುವುದಾಗಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ತಿಳಿಸಿದರು. ​ಅವಶ್ಯಕತೆ ಹಾಗೂ ಸಂದರ್ಭಕ್ಕೆ ತಕ್ಕಂತೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಕಳೆದ ಬಾರಿ ಬಜೆಟ್ ನಂತರದಲ್ಲಿಯೂ ಘೋಷಣೆಗಳನ್ನು ಮಾಡಿರುವುದು ಇದಕ್ಕೆ ಸಾಕ್ಷಿ ಎಂದರು.
​ಹಣಕಾಸಿನ ಇತಿಮಿತಿಗಳು ಹಾಗೂ ಅವಶ್ಯಕ ಖರ್ಚುಗಳನ್ನು ನಿಭಾಯಿಸುವುದರ ನಡುವೆ ಉತ್ತಮ ಬಜೆಟ್ ನೀಡುವ ಮೂಲಕ ಆರ್ಥಿಕ ಅಭಿವೃದ್ಧಿ ವೇಗ, ಜನಕಲ್ಯಾಣ , ಆರ್ಥಿಕ ಸ್ಥಿರತೆಯನ್ನು ಸಾಧಿಸುವ ವಾಸ್ತವಿಕತೆಯ ಆಯವ್ಯಯವನ್ನು ಮಂಡಿಸಲಾಗಿದೆ ಎಂದ​ರು. ಆಯವ್ಯಯ ಎಂದರೆ ರಾಜ್ಯದ ಹಣಕಾಸಿನ ಸ್ಥಿತಿ, ಜನರ ಆಶೋತ್ತರಗಳನ್ನು ಈಡೇರಿಸುವ ಯೋಜನೆಗಳು,, ಹಣಕಾಸಿನ ನಿರ್ವಹಣೆಯ ದಿಕ್ಸೂಚಿಯನ್ನು ತೋರಿಸುವ ಅಂದಾಜು. ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದರೆ, ರಾಜ್ಯದ ಆದಾಯ ಹೆಚ್ಚುತ್ತದೆ ಎಂದರು.
‘402 ಕೋಟಿ ರೂ. ಆದಾಯ ಹೆಚ್ಚಳ -ಆರ್ಥಿಕ ನಿರ್ವಹಣೆಯ ಪ್ರತಿಬಿಂಬ’: ಕೇಂದ್ರದ ತೆರಿಗೆಯಲ್ಲಿ ರಾಜ್ಯದ ತೆರಿಗೆ ಪಾಲು 37252 ಕೋಟಿ ರೂ. ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ(ಕಳೆದ ಸಾಲಿಗಿಂತ ಶೇ. 25 ರಷ್ಟು ಹೆಚ್ಚಿನ ಗುರಿ). ಕೇಂದ್ರ ಸರ್ಕಾರದಿಂದ ಡಿಬಿಟಿ ಸೇರಿದಂತೆ ರಾಜ್ಯಕ್ಕೆ ಅನುದಾನ ಹೆಚ್ಚಾಗಿದೆ. 2023-24ರಲ್ಲಿ ಕರ್ನಾಟಕ ರಾಜ್ಯ 402 ಕೋಟಿ ಆದಾಯ ಹೆಚ್ಚಳವನ್ನು ಸಾಧಿಸಿರುವುದು, ರಾಜ್ಯದ ಆರ್ಥಿಕ ನಿರ್ವಹಣೆಯ ಪ್ರತಿಬಿಂಬವಾಗಿದೆ. ರಾಜಸ್ಥಾನ ಹಾಗೂ ಕೇರಳ ರಾಜ್ಯಗಳು ಆದಾಯ ಕೊರತೆ ಯನ್ನು ತೋರಿಸುತ್ತಿದೆ ಎಂದರು.
ಹೆಚ್ಚು ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು’: ರಾಜ್ಯ ಸರ್ಕಾರ 65 ವರ್ಷಗಳ ಅವಧಿಯಲ್ಲಿ ಒಟ್ಟು1,30,000 ಕೋಟಿ ಸಾಲ ಪಡೆದಿರಬಹುದು. ಆದರೆ ಕಾಂಗ್ರೆಸ್ ನ ಸಿದ್ದರಾಮಯ್ಯ ಅವರ ಕಾಲದಲ್ಲಿ ಕೇವಲ 5 ವರ್ಷದ ಅವಧಿಯಲ್ಲಿ 1,30,000 ಕೋಟಿ ಸಾಲ ತೆಗೆದುಕೊಂಡರು. ಅವರ ಅವಧಿಯಲ್ಲಿ ಸಾಲ ಪಡೆಯಬಹುದಾದ ಗರಿಷ್ಟ ಮಿತಿಯಲ್ಲಿ ಶೇ. 82.3 ರಷ್ಟು ತೆಗೆದುಕೊಂಡರೆ, ನಮ್ಮ ಸರ್ಕಾರ ಕೇವಲ 71% ರಷ್ಟು ಅವಕಾಶವನ್ನು ಬಳಸಿಕೊಂಡಿದೆ. 2020-21 ರಲ್ಲಿ ಕೇಂದ್ರ ಸರ್ಕಾರದಿಂದ 5 % ವರೆಗೆ ಸಾಲ ಪಡೆಯಲು ಅವಕಾಶ ಕಲ್ಪಿಸಿದ್ದರೂ, ನಮ್ಮ ಸರ್ಕಾರ ಕೇವಲ ಶೇ. 3 ರಷ್ಟನ್ನು ದಾಟಿಲ್ಲ. ಆದ್ದರಿಂದ ನಮ್ಮ ಅವಧಿಯಲ್ಲಿ ಬಹಳ ಸಾಲ ಮಾಡಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಸಾಲವನ್ನು ತೀರಿಸುವ ಕ್ಷಮತೆ ನಮ್ಮ ಸರ್ಕಾರಕ್ಕಿದೆ ಎಂದರು.

Leave a Reply

Your email address will not be published. Required fields are marked *

error: Content is protected !!