ಮಾಡಾಳು ಪ್ರಕರಣದಿಂದ ಬಿಜೆಪಿಗೆ ಹಿನ್ನಡೆಯಾಗದು: ಶೆಟ್ಟರ್
ಕಲಬುರಗಿ: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಲಂಚದ ಹಣ ಪಡೆದಿರುವ ಪ್ರಕರಣದಿಂದ ಪಕ್ಷಕ್ಕೆ ಯಾವುದೇ ಹಿನ್ನಡೆ ಆಗುವುದಿಲ್ಲ ಎಂದು ಶಾಸಕ, ಬಿಜೆಪಿ ವಿಜಯ ಸಂಕಲ್ಪ ಮೂರನೇ ತಂಡದ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ರಾಜ್ಯದಲ್ಲಿ ಪಕ್ಷಕ್ಕೆ ಸಾಕಷ್ಟು ಜನಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಬಿಜೆಪಿ ಯಾರ ಹಂಗಿಗೂ ಬೀಳದೇ 130ರಿಂದ 140 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸಲಿದೆ ಎಂದರು.
ಸಿದ್ದರಾಮಯ್ಯ ಅವರು ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಅಪರಾಧಿಯಾಗಿದ್ದಾರೆ. ಆದ್ದರಿಂದಲೇ ಕೆಂಪಣ್ಣ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಲಿಲ್ಲ.
ಲೋಕಾಯುಕ್ತ ಸಂಸ್ಥೆ ಇದ್ದರೆ ತಾವು ಸಿಕ್ಕಿ ಹಾಕಿಕೊಳ್ಳಬಹುದು ಎಂಬ ಭೀತಿಯಿಂದ ಲೋಕಾಯುಕ್ತ ರದ್ದುಗೊಳಿಸಿ ತಮ್ಮ ನೇರ ನಿಯಂತ್ರಣದಲ್ಲಿರುವ ಎಸಿಬಿಯನ್ನು ರಚಿಸಿದರು. ಈಗ ನಾವು ಲೋಕಾಯುಕ್ತ ಸಂಸ್ಥೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಮರು ಸ್ಥಾಪಿಸಿದ್ದೇವೆ. ಜೊತೆಗೆ ಸ್ವಾಯತ್ತತೆಯನ್ನೂ ನೀಡಿದ್ದೇವೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.