ಸಹಕಾರಿ ಬ್ಯಾಂಕುಗಳಿಗೆ ಸಂಕಷ್ಟ ಸಂಶಯಾಸ್ಪದ ರೀತಿಯಲ್ಲಿ ಸಾವಿರ ಕೋಟಿಗೂ ಹೆಚ್ಚಿನ ಮೊತ್ತ ಪಾವತಿ
ಬೆಂಗಳೂರು: ಖಾಸಗಿ ಬ್ಯಾಂಕುಗಳ ನಡುವೆ ತಮ್ಮದೇ ಆದ ಸ್ಥಳೀಯ ಗ್ರಾಹಕರನ್ನು ಹೊಂದಿರುವ ರಾಜ್ಯದ ಹಲವು ಸಹಕಾರಿ ಬ್ಯಾಂಕ್ಗಳಿಗೆ ಈಗ ಸಂಕಷ್ಟ ಎದುರಾಗಿದೆ.
ಖಾಸಗಿ ಬ್ಯಾಂಕುಗಳು ಗ್ರಾಹಕರ ಗುರುತಿನ ದಾಖಲೆಗಳಿಲ್ಲದೇ ಚೆಕ್ ಡಿಸ್ಕೌಂಟ್ ಮೂಲಕ 1,000 ಕೋಟಿಗೂ ಹೆಚ್ಚಿನ ಮೊತ್ತವನ್ನು ಸಂಶಯಾಸ್ಪದ ರೀತಿಯಲ್ಲಿ ಪಾವತಿಸಿರುವುದನ್ನು ಆದಾಯ ತೆರಿಗೆ ಇಲಾಖೆ ಪತ್ತೆಮಾಡಿದೆ.
ವಿವಿಧ ಸಹಕಾರಿ ಬ್ಯಾಂಕ್ಗಳಿಗೆ ಸಂಬಂಧಿಸಿದ 16 ಸ್ಥಳಗಳ ಮೇಲೆ ಮಾರ್ಚ್ 31ರಂದು ದಾಳಿಮಾಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಶೋಧ ನಡೆಸಿದ್ದರು. ಈ ಸಂದರ್ಭದಲ್ಲಿ ವಶಪಡಿಸಿಕೊಂಡ ದಾಖಲೆಗಳು ಮತ್ತು ಡಿಜಿಟಿಲ್ ಸಾಕ್ಷ್ಯಗಳ ಪರಿಶೀಲನೆಯಿಂದ ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಂಗಳವಾರ ತಿಳಿಸಿದೆ.
ನೇರ ಪಾವತಿಯ ಚೆಕ್ಗಳನ್ನು ಸಹಕಾರ ಬ್ಯಾಂಕ್ಗಳಲ್ಲಿ ‘ಡಿಸ್ಕೌಂಟ್’ ಮಾಡಲಾಗಿದೆ. ಬಳಿಕ ಆ ಮೊತ್ತವನ್ನು ಸಹಕಾರ ಬ್ಯಾಂಕ್ಗಳಲ್ಲಿಯೇ ಇರುವ ಸಹಕಾರ ಸೊಸೈಟಿಗಳ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಂತರ ಈ ಮೊತ್ತವನ್ನು ಸಹಕಾರ ಸೊಸೈಟಿಗಳ ಖಾತೆಗಳಿಂದ ತೆಗೆದು ಉದ್ಯಮಿಗಳಿಗೆ ನೀಡಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಗುತ್ತಿಗೆದಾರರು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಸಿಬಿಡಿಟಿ ಪ್ರಕಟಣೆ ತಿಳಿಸಿದೆ.
ಬೃಹತ್ ಪ್ರಮಾಣದ ಚೆಕ್ಗಳನ್ನು ಡಿಸ್ಕೌಂಟ್ ಮಾಡುವ ಸಮಯದಲ್ಲಿ ಗ್ರಾಹಕರ ಗುರುತಿನ (ಕೆವೈಸಿ) ದಾಖಲೆಗಳನ್ನು ಪಡೆದಿಲ್ಲ. ಬೃಹತ್ ಪ್ರಮಾಣದ ನಗದು ಹಿಂಪಡೆಯುವುದರ ಮೂಲವನ್ನು ಮುಚ್ಚಿಡುವುದಕ್ಕಾಗಿ ಈ ರೀತಿ ಮಾಡಲಾಗಿದೆ. ಅಲ್ಲದೇ ಈ ಉದ್ಯಮಿಗಳು ನಕಲಿ ವೆಚ್ಚದ ದಾಖಲೆಗಳನ್ನು ಸೃಷ್ಟಿಸಿಕೊಳ್ಳಲು ಸಹಕಾರ ಬ್ಯಾಂಕ್ಗಳು ನೆರವು ನೀಡಿವೆ. ಬ್ಯಾಂಕ್ ಖಾತೆಗಳ ಮೂಲಕ ನಗದೀಕರಿಸಬಹುದಾದ ಚೆಕ್ಗಳ ಬಳಕೆಯಲ್ಲಿ ವೆಚ್ಚದ ದಾಖಲೆಗಳನ್ನು ತೋರಿಸಲು ಇರುವ ಮಿತಿಯನ್ನು ಮೀರಿ ವಹಿವಾಟು ನಡೆಸಲು ಈ ಮಾರ್ಗ ಅನುಸರಿಸಲಾಗಿದೆ ಎಂದು ಹೇಳಿದೆ.
ಉದ್ಯಮಿಗಳು ತೆರಿಗೆ ವಂಚಿಸಲು ಹಾಗೂ ಹಣದ ಮೂಲವನ್ನು ರಹಸ್ಯವಾಗಿಡಲು ಈ ಮಾರ್ಗವನ್ನು ಬಳಸಿಕೊಂಡಿದ್ದಾರೆ. ಸಹಕಾರಿ ಬ್ಯಾಂಕ್ಗಳ ಆಡಳಿತ ಮಂಡಳಿಗಳ ಸದಸ್ಯರೇ ತಮ್ಮ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಇತರ ವಹಿವಾಟುಗಳಿಂದ ಬರುವ ಹಣವನ್ನು ಸಕ್ರಮಗೊಳಿಸಿಕೊಳ್ಳಲು ಸಹಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಪತ್ತೆಯಾಗಿದೆ. ಆ ರೀತಿಯ ಹಣವನ್ನು ಸಹಕಾರಿ ಬ್ಯಾಂಕ್ಗಳ ದಾಖಲೆಗಳಲ್ಲಿ ತೋರಿಸಿ ಸಕ್ರಮಗೊಳಿಸಲಾಗುತ್ತಿದೆ. ಬಳಿಕ ಅದನ್ನು ಬ್ಯಾಂಕ್ಗಳ ಆಡಳಿತ ಮಂಡಳಿ ಸದಸ್ಯರ ಉದ್ದಿಮೆಗಳ ಖಾತೆಗಳಿಗೆ ವರ್ಗಾಯಿಸುತ್ತಿರುವುದು ಕಂಡುಬಂದಿದೆ ಎಂದು ಸಿಬಿಡಿಟಿ ಹೇಳಿದೆ.