“ಬೆಳೆಗಳಲ್ಲಿ ಪೋಷಕಾಂಶಗಳ ಕೊರತೆ ಮತ್ತು ಅವುಗಳ ನಿರ್ವಹಣೆ”
ದಾವಣಗೆರೆ :ಮಾನವ ಹಾಗೂ ಪ್ರಾಣಿಗಳ ಬೆಳವಣಿಗೆಗೆ ಪೋಷಣೆಯು ಅಗತ್ಯವಾದಂತೆ ಬೆಳೆಗಳ ಬೆಳವಣಿಗೆಗೂ ಪೋಷಣೆಯೂ ಅಗತ್ಯವಾದುದು. ಬೆಳೆಗಳು, ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿ ನೀಡಬೇಕಾದರೆ ಸಸ್ಯಗಳಿಗೆ ಪೋಷಕಾಂಶಗಳು ಅವಶ್ಯಕವಾಗಿ ಬೇಕಾಗುತ್ತದೆ. ಇವುಗಳಲ್ಲಿ ಮುಖ್ಯ ಪೋಷಕಾಂಶಗಳು, ಪ್ರಧಾನ ಪೋಷಕಾಂಶಗಳು ಮತ್ತು ಲಘು ಪೋಷಕಾಂಶಗಳ ಕೊರತೆಯಿಂದ ಬೆಳೆಗಳ ಕುಂಠಿತ ರೂಪ, ಕೊರತೆಯ ಲಕ್ಷಣ ಮತ್ತು ಹಣ್ಣುಗಳು ವಿಕಾರವಾಗುವುದರಿಂದ ಪೋಷಕಾಂಶಗಳ ಕೊರತೆಯನ್ನು ತಿಳಿಯಬಹುದು. ಸರಿಯಾದ ಪ್ರಮಾಣ ಹಾಗೂ ಸಕಾಲದಲ್ಲಿ ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸಿದರೆ ರೈತರು ಇಳುವರಿಯನ್ನು ಹೆಚ್ಚಾಗಿ ಪಡೆಯಬಹುದು.
1. ಸಾರಜನಕ: ಕುಂಠಿತ ಬೆಳವಣಿಗೆ ಹಾಗೂ ಕೆಳಬಾಗದ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಒಣಗಿ ಪ್ರೋಟೀನ್ ಅಂಶ ಬಹಳ ಕಡಿಮೆಯಾಗುತ್ತದೆ.
ಕೊರತೆ ನೀಗುವಿಕೆ: ಮಣ್ಣಿಗೆ ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರಗಳಾದ ಕೊಟ್ಟಿಗೆ ಗೊಬ್ಬರ ಮತ್ತು ಹಸಿರೆಲೆ ಗೊಬ್ಬರ ಸೇರಿಸಬೇಕು. ತಕ್ಷಣ ಕೊರತೆ ನೀಗಿಸಲು ಶೇ. 2 ರಷ್ಟು(20ಗ್ರಾಂ/ಲೀಟರ್ ನೀರಿಗೆ) ಯೂರಿಯಾ ಸಿಂಪರಣೆ.
2. ರಂಜಕ: ರಂಜಕದ ಕೊರತೆಯು ಹುಳಿ ಮತ್ತು ಸುಣ್ಣಕಲ್ಲು ಹೆಚ್ಚಾಗಿರುವಂತಹ ಮಣ್ಣಿನಲ್ಲಿ ಕಾಣಿಸುತ್ತದೆ. ಹಳೆಯ ಎಲೆಗಳು ನೇರಳೆ ಬಣ್ಣಕ್ಕೆ ತಿರುಗುತ್ತವೆ ಹಾಗೂ ಗಿಡಗಳ ಬೇರು ಮತ್ತು ಸಸ್ಯದ ಬೆಳವಣಿಗೆ ಕುಂಠಿತಗೊಂಡು ಮಾಗುವಿಕೆ ನಿಧಾನವಾಗುತ್ತದೆ.
ಕೊರತೆ ನೀಗುವಿಕೆ: ಸೂಪರ್ ಪಾಸ್ಪೆಟ್ ಮತ್ತು ಶೇ. 2 ರಷ್ಟು ಡಿಎಪಿ ಬಳಸಬಹುದು.
3. ಪೊಟ್ಯಾಷ್:ಹಳೆಯ ಎಲೆಗಳ ತುದಿಗಳು ಹಾಗೂ ಅಂಚುಗಳು ಹಳದಿಯಾಗಿ ನಂತರ ಒಣಗಿ ಸುಟ್ಟಂತಾಗುತ್ತದೆ. ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಕೊರತೆ ನೀಗುವಿಕೆ: ಶೇ. 1 ರಷ್ಟು ಪೊಟ್ಯಾಷಿಯಂ ನೈಟ್ರೇಟ್ ಸಿಂಪರಣೆ.
4. ಕ್ಯಾಲ್ಸಿಯಂ/ಸುಣ್ಣ: ಎಳೆಯ ಎಲೆ, ಮೊಗ್ಗಿನ ತುದಿಗಳು ಒಣಗಿ ಹೋಗುತ್ತವೆ. ಹಣ್ಣುಗಳಲ್ಲಿ ಕೆಳಭಾಗ ಕಪ್ಪು ಬಣ್ಣ ಕಾಣಿಸಿಕೊಂಡು ತೀವ್ರ ಕೊರತೆಯಿಂದ ಕೊಳೆಯುತ್ತವೆ.
ಕೊರತೆ ನೀಗುವಿಕೆ: ಮಣ್ಣು ಪರೀಕ್ಷೆ ಆಧಾರದ ಮೇಲೆ ಮಣ್ಣಿಗೆ ಸುಣ್ಣ ಸೇರಿಸುವುದು ಸೂಕ್ತ.
5. ಮೆಗ್ನೀಷಿಯಂ: ಹಳೆಯ ಎಲೆಗಳ ನರಗಳ ನಡುವೆ ಹಳದಿ ಮಿಶ್ರಿತ ಹಸಿರು ಬಣ್ಣದ ಮಚ್ಚೆ ಕಾಣಿಸುವುದು. ಎಲೆಗಳು ಹಪ್ಪಳದಂತಾಗಿ ಮೇಲಕ್ಕೆ ತಿರುಚಿಕೊಂಡು ಸಣ್ಣದಾಗಿ ಬೇಗನೆ ಉದುರುತ್ತದೆ.
ಕೊರತೆ ನೀಗುವಿಕೆ: ಶೇ. 0.5 – 1 ರಷ್ಟು ಮೆಗ್ನೀಷಿಯಂ ಸಲ್ಫೇಟ್ ಸಿಂಪರಣೆ.
6. ಗಂಧಕ: ಹೊಸ ಎಳೆ ಎಲೆಗಳು ತಿಳಿ ಹಸಿರು/ಹಳದಿಯಾಗುತ್ತವೆ. ಬೆಳವಣಿಗೆ ಕುಂಠಿತಗೊಂಡು ಎಲೆ ತೊಟ್ಟು ಹಪ್ಪಳದಂತೆ ಮುರಿಯುತ್ತವೆ. ಎಣ್ಣೆಕಾಳುಗಳಲ್ಲಿ ಎಣ್ಣೆ ಅಂಶ ಕಡಿಮೆಯಾಗುತ್ತದೆ.
ಕೊರತೆ ನೀಗುವಿಕೆ: ಅಮೋನಿಯಂ ಸಲ್ಫೇಟ್, ಪೊಟ್ಯಾಶಿಯಂ ಸಲ್ಫೇಟ್, ಸೂಪರ್ ಪಾಸ್ಫೇಟ್, 20:20: 13 ಮಣ್ಣಿಗೆ ಸೇರಿಸುವುದು.
7. ಕಬ್ಬಿಣ: ಹೊಸ ಎಲೆಗಳ ನರಗಳ ಮಧ್ಯಭಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ.
ಕೊರತೆ ನೀಗುವಿಕೆ: ಶೇ. 0.5 ರಷ್ಟು ಕಬ್ಬಿಣದ ಸಲ್ಫೇಟ್ ಸಿಂಪರಣೆ.
8. ಸತು: ಎಲೆಗಳು ಸಣ್ಣದಾಗಿ ಮಧ್ಯದ ಭಾಗ ದಟ್ಟ ಹಸಿರಾಗಿರುತ್ತದೆ. ಬೆಳವಣಿಗೆ ಕುಂಠಿತಗೊಂಡು ಬೂದು ಬಣ್ಣದ ಚುಕ್ಕಿ ಕಾಣಿಸಿಕೊಳ್ಳುತ್ತವೆ.
ಕೊರತೆ ನೀಗುವಿಕೆ: ಶೇ. 0.5 ರಷ್ಟು ಸತುವಿನ ಸಲ್ಫೇಟ್ ಸಿಂಪರಣೆ.
9. ಮ್ಯಾಂಗನೀಸ್: ಎಳೆ ಎಲೆಗಳಲ್ಲಿ ಕೊರತೆ ಕಾಣಿಸಿಕೊಂಡು ಪತ್ರನಾಳಾಂತರ ಭಾಗ ಹಸಿರು ಬಣ್ಣ ಕಳೆದುಕೊಂಡು ಹಳದಿಯಾಗುತ್ತದೆ.
ಕೊರತೆ ನೀಗುವಿಕೆ: 8-16 ಕೆಜಿ ಮ್ಯಾಂಗನೀಸ್ ಸಲ್ಫೇಟ್ ಪ್ರತೀ ಎಕರೆ ಭೂಮಿಗೆ ಸೇರಿಸುವುದು.
10. ತಾಮ್ರ: ಎಲೆಗಳ ಅಂಚಿನಲ್ಲಿ ಹಸಿರು ಬಣ್ಣ ಕಳೆದುಕೊಂಡು ಒಣಗುತ್ತವೆ. ಕಾಂಡಗಳ ತುದಿಗಳಲ್ಲಿ ಮುದುಡಿದ ಹಾಗೂ ಮಾಸಲು ಬಿಳಿ ಬಣ್ಣದ ಎಲೆಗಳು ಕಾಣಿಸುತ್ತವೆ ಮತ್ತು ಉದುರುತ್ತದೆ.
ಕೊರತೆ ನೀಗುವಿಕೆ: ಸುಣ್ಣದ ಜೊತೆಗೆ ಕಾಪರ್ ಸಲ್ಫೇಟ್ ಅನ್ನು ಸೇರಿಸಿ ಶೇ. 1 ರಷ್ಟು ದ್ರಾವಣವನ್ನು ಸಿಂಪಡಿಸಬೇಕು.
11. ಬೋರಾನ್: ಹೊಸ ಎಲೆಗಳು ಗೊಂಚಲಿನ ರೂಪ ಪಡೆಯುತ್ತವೆ. ಕಾಂಡ ಮತ್ತು ಕಾಯಿ ಒಡೆಯುತ್ತದೆ ಹಾಗೂ ಗಿಡಗಳ ತುದಿ ಒಣಗುತ್ತದೆ. ಹೂ, ಮೊಗ್ಗು ಮತ್ತು ಬೀಜಗಳ ಸಂಖ್ಯೆ ಕಡಿಮೆಯಾಗುತ್ತದೆ.
ಕೊರತೆ ನೀಗುವಿಕೆ: ಪ್ರತಿ ಹೆಕ್ಟೇರಿಗೆ 15-30 ಕಿ.ಗ್ರಾಂ ಬೋರಾಕ್ಸನ್ನು ಭೂಮಿಗೆ ಬೆರೆಸಬೇಕು.
12. ಮಾಲಿಬ್ಡಿನಂ: ಎಲೆಗಳು ತಿಳಿ ಹಸಿರು ಅಥವಾ ಹಳದಿ ಬಣ್ಣವನ್ನು ಹೊಂದಿ ನರಗಳ ಮಧ್ಯಂತರ ಭಾಗ ಹಳದಿಯಾಗುತ್ತದೆ. ಎಲೆಗಳ ತುದಿಗಳು ಮುದುಡುತ್ತವೆ.
ಕೊರತೆ ನೀಗುವಿಕೆ: 2-4 ಕಿ.ಗ್ರಾಂ ನಷ್ಟು ಸೋಡಿಯಂ ಮಾಲ್ಬಿಡೇಟ್ ನ್ನು ಪ್ರತಿ ಹೆಕ್ಟೇರ್ ಭೂಮಿಗೆ ಹಾಕಬೇಕು.